ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಭಾವನೆ… ಅಂದು – ಇಂದು
ನಾನು ವೈದ್ಯ ವೃತ್ತಿ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಹಲವು ವಕೀಲರ ಪರಿಚಯವಾಯಿತು. ಕಾಲ ಕ್ರಮೇಣ ಸ್ನೇಹವಾಗಿ ಆತ್ಮೀಯರಾದರು. ನನ್ನ ಅದೃಷ್ಟವೆಂಬಂತೆ ಹಿರಿಯರೂ, ವಕೀಲ ವೃತ್ತಿಯಲ್ಲಿ ಅನುಭವಸ್ಥರೂ, ಬುದ್ಧಿವಂತರೂ, ವಿವೇಕಸ್ಥರೂ ಆಗಿದ್ದವರೊಬ್ಬರು ನನಗೆ ಹತ್ತಿರವಾದರು. ಸ್ನೇಹಮಯಿ ಆಗಿದ್ದ ಅವರಿಂದ ಗೆಳೆತನ ಎಂದರೇನು ಎಂಬುದನ್ನು ಕಲಿಯುವಂತಹದ್ದಾಗಿತ್ತು.
ನನ್ನ ದೀರ್ಘ ಕಾಲದ ಸ್ನೇಹ ಸರಪಳಿ ಮೊನ್ನೆಯಷ್ಟೇ ಕಳಚಿತು. ನನ್ನ ಹೃದಯ ಭಾರವಾದಂತಾಯ್ತು. ಅವರ ನೆನಪು ಸದಾ ಕಾಡುವುದಲ್ಲದೆ, ಅವರ ಸಾವಿಲ್ಲದ ಆತ್ಮವು ನನ್ನ ಮನೋ ಭಂಡಾರದಲ್ಲಿ ನೆಲೆಸಿಬಿಟ್ಟಿದೆ. ಹೀಗೆ ಉಳಿದ ಅವರ ಜೀವನ ಕಲೆ ನನಗೆ ಆದರ್ಶ ಮತ್ತು ದಾರಿದೀಪವಾಗಿದೆ. ಅವರು ನನ್ನೊಂದಿಗೆ ಚರ್ಚಿಸುತ್ತಿದ್ದ ವಿಷಯಗಳು, ತರ್ಕಗೊಂಡಂತಹ ವಿಚಾರಗಳು, ನಮ್ಮ ನಮ್ಮ ಅಹಂಗಳ ಘರ್ಷಣೆ, ವಿಭಿನ್ನ ಚಿಂತನ ಮಂಥನಗಳಿಂದಾದ ವಾದ-ವಾಗ್ವಾದಗಳನ್ನೆಲ್ಲಾ ನನ್ನಲ್ಲೇ ಬಿಟ್ಟು ಹೋಗಿರುವುದರಿಂದ ಅವುಗಳು ನನ್ನಲ್ಲಿ ಪರಿಪೂರ್ಣತೆ ಪಡೆಯಬಹುದೇನೋ ಎಂಬ ಆಶಾಭಾವನೆ ಹೊಂದಿದ್ದೇನೆ ಹಾಗೂ ಅವರಿಗೆ ಚಿರಋಣಿಯಾಗಿದ್ದೇನೆ. ಅವರ ಗುಂಗಿನಲ್ಲೇ ಇದ್ದ ನನಗೆ ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆಯೊಂದು ನೆನಪಿಗೆ ಬಂತು.
ಒಮ್ಮೆ ಆ ನನ್ನ ಆತ್ಮೀಯರನ್ನು ನೋಡಲೆಂದು ನ್ಯಾಯಾಲಯದ ಆವರಣಕ್ಕೆ ಹೋದೆ. ಕಿರಿಯ ವಕೀಲರೊಬ್ಬರು ಎದುರಾದರು. ಶ್ರೀ ಕೃಷ್ಣನ ವರ್ಣವಿದ್ದ ಆತ ಶುಭ್ರವಾದ ಸಮವಸ್ತçದಲ್ಲಿ ಆಕರ್ಷಿತರಾದರು. ಪರಸ್ಪರ ಕೈ ಕುಲುಕಿದ ನಂತರ ‘ಏನ್ರೀ, ಕೃಷ್ಣನನ್ನು ಹೋಲುತ್ತಿದ್ದೀರಿ’ ಅಂದೆ. ಜೊತೆಗಿದ್ದ ಇನ್ನೊಬ್ಬ ವಕೀಲ ಸ್ನೇಹಿತರು, ‘ನಿಜ ಜೀವನದಲ್ಲೂ ಅವರು ಕೃಷ್ಣರೇ’ ಅಂದರು.
ಎಲ್ಲರೂ ನಕ್ಕು ನನ್ನ ಸ್ನೇಹಿತರು ಕಾಫಿ ಕುಡಿಯುತ್ತಿದ್ದ ಕ್ಯಾಂಟೀನ್ಗೆ ಹೋದೆವು. ನಾನು ಟೀ ಹೀರುತ್ತಿರುವಾಗ ತುಂಬಾ ವರ್ಷಗಳಿಂದ ಕಾಡುತ್ತಿದ್ದ ಪ್ರಶ್ನೆ ಥಟ್ಟನೆ ನೆನಪಾಯ್ತು. ಇದೇ ಸೂಕ್ತ ಸಮಯವೆಂದು ಭಾವಿಸಿ ವಕೀಲರು ಕರೀಕೋಟನ್ನು ಯಾಕೆ ಧರಿಸುತ್ತಾರೆ? ಎಂದು ಕೇಳಿಯೇಬಿಟ್ಟೆ. ನನ್ನ ಅಸಂಬದ್ಧ ಪ್ರಶ್ನೆಗೆ ‘ವಕೀಲರು ಎಂದು ಸೂಚಿಸುವ ಸಮವಸ್ತ್ರ’ ಎಂದು ಹಾರಿಕೆ ಉತ್ತರ ಕೊಟ್ಟರು.

ಕೆಲವು ಇಷ್ಟವಿಲ್ಲದ ವಿಷಯಗಳನ್ನು ಸ್ವೀಕರಿಸದೇ ಇರುವುದರಿಂದ ನಾನು ಏಕಾಂಗಿಯಾಗಿದ್ದೇನೆ. ಈ ಮೇಲಿನ ಪ್ರಶ್ನೆಗೆ ಸಮಂಜಸವಾದ ಉತ್ತರ ಸಿಗದ ಕಾರಣ ನನಗೆ ಒಂದು ಉತ್ತರ ಹೊಳೆಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆನು. ಇದು ಯಾರಿಗೂ ನೋವು ತರಿಸುವ ಉದ್ದೇಶವಲ್ಲ ಮತ್ತು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಸಹೃದಯಿಗಳು ಬೇರೆ ರೀತಿ ಚಿಂತಿಸಲೂಬಹುದು.
ವೃತ್ತಿನಿರತನಾದ ವಕೀಲನಿಗೆ ಅವನ ಕಕ್ಷಿದಾರ ಬಹು ಮುಖ್ಯ. ನ್ಯಾಯಪರ ಅಥವ ವಿರೋಧಪರವಾಗಿರಬಹುದು. ಸಾಮಾನ್ಯವಾಗಿ ಕಕ್ಷಿದಾರನ ದೂರುಗಳು ತುಂಬಾ ನೋವುಗಳಿಂದ ಕೂಡಿರುವುದರಿಂದ, ವಕೀಲರ ಗ್ರಹಿಕೆಯ ಶಕ್ತಿ ಅತ್ಯುತ್ತಮವಾಗಿರಬೇಕು. ಅವರ ಚಕ್ಷುಕ್ಷೀಣತೆ , ಅರ್ಥೈಸಿಕೊಳ್ಳುವಿಕೆ ಮತ್ತು ಮನನ ತುಂಬು ಹೃದಯದಿಂದ ಕೂಡಿರಬೇಕು. ಈ ಗ್ರಹಿಕೆಯು ಪಂಚೇಂದ್ರಿಯಗಳಿಂದ ಕೂಡಿರುವುದು. ಈ ಪಂಚೇಂದ್ರಿಯಗಳಲ್ಲಿ ಚರ್ಮವೂ ಒಂದು. ಇದರ ಗ್ರಹಿಕೆಯು ಕೀಳು ದರ್ಜೆಯದಾಗಿರುತ್ತದೆ.

ಕಪ್ಪು ಬಿಸಿಯನ್ನು ಹೀರುವುದಾದರೂ ಸ್ಪಂದನಾ ಭಾವನಾ ತರಂಗಗಳನ್ನು ಹೊರ ದಬ್ಬುತ್ತದೆ. ಕಪ್ಪು ಕೋಟನ್ನು ಧರಿಸಲು ಕಾರಣವೆಂದರೆ, ಕಕ್ಷಿದಾರನ ಭಾವನೆಗಳು ಶ್ರವಣ ಮತ್ತು ಮನನವಾಗಲೆಂದು ಕತ್ತಿನ ಕೆಳಗೆ, ಹೃದಯದ ಹತ್ತಿರ ಬಿಳಿ ಟೈ (ಕಂಠ ಪೀನ) ಪ್ರೀತಿ ಮತ್ತು ಕರುಣೆಯ ಪ್ರತೀಕ ಇದರ ಅರ್ಥ. ‘ನಾನು ಇದ್ದೇನೆ, ನೀನು ಹೆದರಬೇಡ’ ಎಂಬ ಸಾಂಕೇತಿಕ ಸೂಚಿ. ಇವೆಲ್ಲವನ್ನೂ ಮನಗಂಡವನು ಸಾಕ್ಷಾತ್ ಶ್ರೀಕೃಷ್ಣನೇ. ಈ ಕಾರಣಕ್ಕೆ ವಕೀಲ ಕಪ್ಪು ವರ್ಣದಲ್ಲಿ ಬಂದಂತಹ ವರದಿಗಳಲ್ಲಿ ‘ವಕೀಲರ ಹದ್ದು ಮೀರಿದ ಪ್ರವೃತ್ತಿ’ ನನ್ನನ್ನು ನಾಲ್ಕು ದಶಕಗಳ ಹಿಂದಿನ ಬಾಲ್ಯದ ನೆನಪಿಗೆ ಕೊಂಡೊಯ್ದುಬಿಟ್ಟಿತು.
ಇತ್ತ ಹಳ್ಳಿಯೂ ಅಲ್ಲದ, ಅತ್ತ ನಗರವೂ ಅಲ್ಲದ ಅಂತಹ ಊರಿನಲ್ಲಿ ಎಲ್ಲರಂತೆ ನಾನೂ ಆಟ-ಪಾಠದಲ್ಲಿ ಮಗ್ನನಾಗಿದ್ದ ವಯಸ್ಸು. ವೃತ್ತಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ ಅಪಾರ ದೈವ ಭಕ್ತರೂ, ವಿದ್ಯೆ, ಬುದ್ಧಿ ಜ್ಞಾನಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದ ನಮ್ಮ ತಾತನವರಿಗೆ ನಾನು ಚೆನ್ನಾಗಿ ಓದುತ್ತಿದ್ದೆ ಎಂಬ ಕಾರಣಕ್ಕೆ ಅವರ ಪ್ರೀತಿಗೆ ಪಾತ್ರನಾಗಿದ್ದೆ. ಅಂತಹ ವಾತಾವರಣದಲ್ಲಿ ಧರ್ಮ, ಸತ್ಯ ನಡೆಯುತ್ತಿದ್ದು, ಕಾನೂನು ಕಟ್ಟಳೆಗಳಿಲ್ಲದೆ ಜನ ನೆಮ್ಮದಿಯಿಂದ ಇದ್ದರು. ಆ ಸಮಯದಲ್ಲಿದ್ದ ಸದಾ ನನ್ನ ನೆನಪಿನಲ್ಲಿರುವ ದೇವತಾ ಸ್ವರೂಪಿ ವಕೀಲರೊಬ್ಬರ ಪರಿಚಯ ಮಾಡಲೇಬೇಕು.
ಸಂಪ್ರದಾಯಸ್ಥ ಕುಟುಂಬದಿಂದ ಬಂದ, ಸದಾ ಶುಭ್ರವಾದ ವಸ್ತ್ರ ಧರಿಸುತ್ತಿದ್ದ ಸುಮಾರು ಅರವತ್ತರ ಪ್ರಾಯದ ಆಕರ್ಷಣೀಯ ವ್ಯಕ್ತಿತ್ವವುಳ್ಳ ಇವರು ಬೆಂಗಳೂರಿನ ಉಚ್ಛ ನ್ಯಾಯಾಲಯಕ್ಕೆ ಹೋಗುವಾಗೆಲ್ಲಾ ಮಾರ್ಗ ಮಧ್ಯದಲ್ಲಿದ್ದ ನಮ್ಮ ತಾತನವರನ್ನು ಕಂಡು ಹೋಗುವುದನ್ನು ರೂಢಿ ಮಾಡಿಕೊಂಡಿದ್ದರು. ಉದ್ದನೆಯ ಕೆಂಪು ತಿಲಕ ಇಟ್ಟು, ಮೈಸೂರು ಪೇಟ ಧರಿಸಿ, ರಸ್ತೆಯಲ್ಲಿ ನಡೆಯುತ್ತಿದ್ದರೆ ಅವರಿಗೆ ರಾಜ ಮರ್ಯಾದೆ. ಕಾರಣ ಅವರ ನಡತೆ ಮತ್ತು ನುಡಿ ಹಾಗಿದ್ದವು.
ನಶ್ಯೆ, ಬೆಲ್ಲದ ಕಾಫಿ, ಮಜ್ಜಿಗೆ ಇವನ್ನು ಬಿಟ್ಟರೆ ಬೇರೆ ಚಟಗಳಿರಲಿಲ್ಲ. ನ್ಯಾಯಧೀಶರೇ ಇವರ ನಡತೆಯನ್ನು ಮೆಚ್ಚುತ್ತಿದ್ದರಂತೆ. ಕಾಲಕ್ರಮೇಣ ತೋಟ, ಮನೆಗಳು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಿದವು. ಅವರ ಮಕ್ಕಳು ವಿದೇಶಗಳಲ್ಲಿ ವೃತ್ತಿ ಆರಂಭಿಸಿದರು. ಇವರು ರಾಜಧಾನಿ ಸೇರಿ ಕೊನೆಗೆ ಅಲ್ಲೇ ಕೊನೆಯುಸಿರೆಳೆದರು. ಈ ಕತೆಗೆ ಕಾರಣವಿಷ್ಟೆ.
ಅವತ್ತಿನ ಕರಿ ಕೋಟಿಗೆ ಸಿಗುತ್ತಿದ್ದ ರಾಜ ಮರ್ಯಾದೆ ಇವತ್ತು ಅದೇ ಕೋಟನ್ನು ಧರಿಸಿದರೆ ಜನ ನೋಡುವ ರೀತಿಯೇ ಬೇರೆಯಾಗಿದೆ ಮತ್ತು ಕೋಟು ತೆಗೆದು ರಸ್ತೆಯಲ್ಲಿ ನಡೆಯುವ ಸ್ಥಿತಿ ಬಂದಿದೆ.
ಆವತ್ತಿನ ನಶ್ಯೆ-ಇವತ್ತು ನಶೆ
ಆವತ್ತಿನ ಮಜ್ಜಿಗೆ ಇಂದು ಮದ್ಯ
ಆವತ್ತಿನ ಸುಶಬ್ದಗಳು, ಇಂದಿನ ಅವಾಚ್ಯ ಶಬ್ದಗಳು
ಆವತ್ತಿನ ಗಾಂಭೀರ್ಯ, ನಡತೆ ಇಂದು ಹೊಡಿ, ಬಡಿ
ಆವತ್ತಿನ ನೈಜತೆ ಇವತ್ತು ಅನೈತಿಕತೆ, ವ್ಯವಹಾರ
ಆವತ್ತಿನ ಕಕ್ಷಿದಾರನ ನಿಷ್ಠೆ ಇವತ್ತು ಅನಿಷ್ಠೆ
ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೌದು ಸ್ವಾಮಿ, ಕಾಲ ಮತ್ತು ಪ್ರಪಂಚ ಬದಲಾಗಿದೆ. ಆದರೆ ನನಗೆ ನೋವಾಗುತ್ತಿರುವುದು ವಿಕಾಸದ ಬದಲಾವಣೆ. ಅಂದಿನ ಚಿಕ್ಕ ಮೊತ್ತದ ಶುಲ್ಕ ಆವತ್ತಿಗೆ ಸರಿ ಹೋಗುತ್ತಿತ್ತು. ಆದರೆ ಇಂದು ಎಲ್ಲವೂ ದುಬಾರಿಯಾಗಿದೆ. ಅವರ ಶುಲ್ಕವನ್ನು ಏರಿಸಲಿ, ಆದರೆ ಅವತ್ತಿನ ಶೀಲತೆಯನ್ನು ಇಂದೂ ಇಟ್ಟುಕೊಂಡಿದ್ದರೆ ಪ್ರಪಂಚವೆಲ್ಲ ಇಂದು ಕಂಡ ಅನಾಹುತ ನಡೆಯುತ್ತಿರಲಿಲ್ಲ ಅಲ್ಲವೇ? ಯಾವುದೇ ವೃತ್ತಿಯವರಾದರೂ ತಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಂಡರೆ ಎಲ್ಲರಿಗೂ ಒಳಿತು ಮತ್ತು ಆ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

