ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಕಳೆದ 45 ವರ್ಷಗಳಿಂದ ವೈದ್ಯರಾಗಿ ಬಡವರಿಗೆ ಉಚಿತ ಸೇವೆ ಸಲ್ಲಿಸುತ್ತಾ ಸುತ್ತಮುತ್ತಲಿನ ಜನರ ಪ್ರೀತಿ- ವಿಶ್ವಾಸಕ್ಕೆ ಭಾಜನರಾಗಿ ಜನಮೆಚ್ಚುಗೆ ಗಳಿಸಿರುವ ಡಾ. ಕೃಷ್ಣಮಾಚಾರಿ ಗಡಚಿಂತಿ ಅವರನ್ನು ಬೂಕನಕೆರೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಕಳೆದ 45 ವರ್ಷಗಳಿಂದ ವೈದ್ಯರಾಗಿ ಉಚಿತ ಶಿಕ್ಷಣ ನೀಡುತ್ತಾ, ಜನಮೆಚ್ಚುಗೆ ಗಳಿಸಿರುವ ಡಾ.ಕೃಷ್ಣಮಾಚಾರಿ ಗಡಚಿಂತಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.ಮೂಲತಃ ಉತ್ತರ ಕರ್ನಾಟಕದ ಡಾ.ಗಡಚಿಂತಿಯವರು 1981 ರಲ್ಲಿ ಬೂಕನಕೆರೆ ಗ್ರಾಮದಲ್ಲಿ ಸುಶ್ರುತ ಕ್ಲಿನಿಕ್ ಆರಂಭಿಸಿ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಬೂಕನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಉಚಿತ ನೀಡಲು ಆರಂಭಿಸಿದರು.
ಅಂದಿನಿಂದ ಈವರೆವಿಗೂ ಸುಮಾರು ನಾಲ್ಕುದಶಕಗಳ ಕಾಲ ನಿರಂತರವಾಗಿ ವೈದ್ಯಕೀಯ ಸೇವೆ ನೀಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ಈ ಹಿನ್ನಲೆಯಲ್ಲಿ ಗ್ರಾಮದ ಮುಖಂಡರು , ಚಿಕಿತ್ಸೆ ಪಡೆದಿದ್ದ ರೋಗಿಗಳು ಬೂಕನಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಗ್ರಾಮ ದೇವತೆ ಗೋಗಲ್ಲಮ್ಮ ದೇವಸ್ಥಾನ ಮತ್ತು ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಅಭಿನಂದಿಸಿ ಅವರು ನೀಡಿದ ಸೇವೆಯನ್ನು ಸ್ಮರಿಸಿದರು.
ಇದನ್ನು ಓದಿ: ಕೆ.ಆರ್.ಪೇಟೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ – ಶಾಸಕ ಹೆಚ್.ಟಿ.ಮಂಜು
ಡಾ.ಗಡಚಿಂತಿ ಮಾತನಾಡಿ ಗ್ರಾಮಸ್ಥರು ನೀಡಿದ ಗೌರವ ಮತ್ತು ಸಹಕಾರದಿಂದ ನಿರಂತರವಾಗಿ ನಲ್ವತ್ತು ವರ್ಷಗಳ ಕಾಲ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸಲು ಸಾಧ್ವಾಯಿತು. ದೂರದಿಂದ ಬಂದ ನನ್ನನ್ನು ಮನೆಯ ಮಗನಂತೆ ಕಂಡು ಗೌರವಿಸಿದಿರಿ. ನನಗೆ ವಯಸ್ಸಾಗಿದ್ದು ಮೈಸೂರಿನಿಂದ ಬರಲು ಕಷ್ಟಸಾಧ್ಯವಾಗುತ್ತಿದೆ. ನನ್ನ ಕ್ಲಿನಿಕ್ ಸೇವೆಯನ್ನು ನಿಲ್ಲಿಸುತ್ತಿದ್ದೇನೆ. ನೀವು ಕೊಟ್ಟ ಗೌರವಕ್ಕೆ ಕೃತಜ್ಞನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಅರ್ಚಕರಾದ ಕೇಶವ ಮೂರ್ತಿ , ವಿಜಯಕುಮಾರ್, ಬ್ಯಾಂಕ್ ಕೃಷ್ಣಮೂರ್ತಿ, ಗಡಚಿಂತಿಯವರ ಪತ್ನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ್ಪ್ರಸಾದ್ , ಮಧು, ಉಮೇಶ, ನಾಗರಾಜು, ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
