ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ,ಯುವಕರಲ್ಲಿ ನೈತಿಕತೆ, ಸೇವಾಭಾವ ಹಾಗೂ ನಶಾಮುಕ್ತ ಬದುಕಿನ ಸಂದೇಶ ಹರಡುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ, ಜನತಾ ಶಿಕ್ಷಣ ಸಂಸ್ಥೆ — ವಿವೇಕಾನಂದ ಮಹಿಳಾ ಪದವಿಪೂರ್ವ ಕಾಲೇಜು, ಬೆಂಗಳೂರು ವತಿಯಿಂದ “ನಶಾಮುಕ್ತ ಭಾರತ ಅಭಿಯಾನ” ಎಂಬ 7 ದಿನಗಳ ವಿಶೇಷ ಶಿಬಿರಕ್ಕೆ ಶುಕ್ರವಾರದಂದು ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಚಾಲನೆ ದೊರೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ನಶೆ ಎಂದರೆ ಕೇವಲ ಮದ್ಯ ಅಥವಾ ಮಾದಕದ್ರವ್ಯವಲ್ಲ, ಅದು ಮನಸ್ಸಿನ ಅಸಮತೋಲನದ ರೂಪವಾಗಿದೆ. ನಶೆಯಿಂದ ದೂರವಿರುವುದು ದೇಹದ ಶುದ್ಧತೆ ಮಾತ್ರವಲ್ಲ, ಆತ್ಮದ ಶುದ್ಧತೆಗೆ ದಾರಿ. ಯುವಜನತೆ ಆತ್ಮಶಕ್ತಿ, ಸಂಸ್ಕಾರ ಹಾಗೂ ಸೇವಾಭಾವವನ್ನು ಜೀವನದ ಕೇಂದ್ರೀಯ ಮೌಲ್ಯಗಳಾಗಿಸಿಕೊಳ್ಳಬೇಕು. ನಶೆಯಿಂದ ಮುಕ್ತಿ ಪಡೆದರೆ ಅದು ವ್ಯಕ್ತಿಯಷ್ಟೇ ಅಲ್ಲ, ಸಮಾಜದ ಪುನರುತ್ಥಾನಕ್ಕೂ ಕಾರಣವಾಗುತ್ತದೆ.“ಆಧುನಿಕತೆಯ ತೋರಿಕೆ ಮತ್ತು ಅನುಕರಣೆಯ ಮನೋಭಾವದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ನಮ್ಮ ಬದುಕಿನ ಉದ್ದೇಶವೇನು, ಸಮಾಜ ಮತ್ತು ಕುಟುಂಬ ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ತಿಳಿದು, ಅದಕ್ಕೆ ತಕ್ಕ ರೀತಿಯಲ್ಲಿ ನಡೆಯುವುದು ಕಾಲದ ಅಗತ್ಯವಾಗಿದೆ,” ಎಂದು ಉಪದೇಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಹಸೀಲ್ದಾರ್ ಕೆ. ಮಂಜುನಾಥ್ ಅವರು ಮಾತನಾಡಿ ಭಾರತ ನಶಾಮುಕ್ತವಾಗಬೇಕಾದರೆ ಅದಕ್ಕೆ ಪ್ರಾರಂಭ ಮನೆಯಲ್ಲಿಯೇ ಆಗಬೇಕು. ಪೋಷಕರು, ಶಿಕ್ಷಕರು ಮತ್ತು ಹಿರಿಯರು ಯುವ ಪೀಳಿಗೆಗೆ ಮಾದರಿಯಾಗಬೇಕು. ಎನ್ಎಸ್ಎಸ್ ಶಿಬಿರಗಳು ಯುವಜನತೆ ಶಿಸ್ತಿನ ಜೀವನ, ಶ್ರಮದ ಮೌಲ್ಯ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವ ಪಾಠಶಾಲೆಗಳಾಗಬೇಕು. ನಶಾಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ, ಆದರೆ ಅದರ ಯಶಸ್ಸು ನಿಮ್ಮಂತಹ ಯುವಕರ ಕೈಯಲ್ಲಿದೆ, ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ವಿಶೇಷ ಆಹ್ವಾನಿತರಾದ ನಿವೃತ್ತ ಪ್ರಾಂಶುಪಾಲ ಡಾ. ನಂಜುಂಡಯ್ಯ ಅವರು ಮಾತನಾಡಿ “ಶಿಕ್ಷಣವು ಕೇವಲ ಪರೀಕ್ಷಾ ಅಂಕಗಳಿಗೆ ಸೀಮಿತವಾಗಬಾರದು; ಅದು ಜೀವನದ ಮಾರ್ಗದರ್ಶಕವಾಗಬೇಕು. ನಶೆಯಿಂದ ದೂರವಿದ್ದು, ಸೇವಾಭಾವದಿಂದ ಬದುಕಿದರೆ ಜೀವನ ಸಂತೋಷಕರವಾಗುತ್ತದೆ,” ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯ ಜಿ.ಆರ್. ಶಿವರಾಮಯ್ಯ, ಕಾಲೇಜಿನ ಪ್ರಾಂಶುಪಾಲೆ ತ್ರಿವೇಣಿ, ಶಿಬಿರಾಧಿಕಾರಿ ಎಂ. ಸವಿತ, ಸಹ ಶಿಬಿರಾಧಿಕಾರಿಗಳು ಪೂರ್ಣಿಮಾ ಎಂ. ತಳವಗೇರಿ, ಜ್ಞಾನೇಶ್ವರಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರದಲ್ಲಿ: ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ “ನಶಾಮುಕ್ತ ಭಾರತ ಅಭಿಯಾನ” ಶಿಬಿರವನ್ನು ತಹಸೀಲ್ದಾರ್ ಕೆ. ಮಂಜುನಾಥ್ ಉದ್ಘಾಟಿಸುತ್ತಿರುವುದು.
ವರದಿ ನರಸಿಂಹಯ್ಯ ಹೊಸಕೋಟೆ
