ಕೆ.ಆರ್.ಪೇಟೆ,ಅ.25: ತಾಲ್ಲೂಕಿನ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗಡಿಯಲ್ಲಿರುವ ದಡಿಘಟ್ಟ ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ(ದಡಿಘಟ್ಟದಮ್ಮ) ಅಮ್ಮನವರ ಸಿಡಿಲುಕಲ್ಲು ಜಾತ್ರೆಯು ವಿಜೃಂಭಣೆಯಿಂದ ನಡೆಯಿತು.
ಈ ಭಾಗದ ಶಕ್ತಿ ದೇವತೆಯಾಗಿರುವ ಶ್ರೀ ದಡಿಘಟ್ಟದಮ್ಮನವರನ್ನು ಚಲ್ಯ, ಕುಂಬೇನಹಳ್ಳಿ, ದಡಿಘಟ್ಟ ಗ್ರಾಮಗಳಲ್ಲಿ ಮೆರವಣಿಗೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಕೆ.ಆರ್.ಪೇಟೆ,ನಾಗಮಂಗಲ, ಚನ್ನರಾಯಪಟ್ಟಣ ತಾಲ್ಲೂಕುಗಳಿಗೆ ಹೊಂದಿಕೊಂಡಂತೆ ಇರುವ ದಡಿಘಟ್ಟ ಗ್ರಾಮದಿಂದ 2ಕಿ.ಮೀ ದೂರದಲ್ಲಿರುವ ಸಿಡಿಲುಕಲ್ಲು ಜಾತ್ರಾಮಾಳದಲ್ಲಿರುವ ದೇವರ ಮಂಟಪದಲ್ಲಿ ಮಧ್ಯಾಹ್ನ 3ಗಂಟೆಯಿಂದ ಸಂಜೆ 6ಗಂಟೆಯವರೆವಿಗೂ ಶ್ರೀ ಲಕ್ಷ್ಮೀ ದೇವಿ ಮತ್ತು ಮೈಲಾರಲಿಂಗೇಶ್ವರ, ಶ್ರೀ ದೊಡ್ಡಯ್ಯ ಸ್ವಾಮಿ, ಶ್ರೀ ಚಿಕ್ಕಯ್ಯ ಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಂಡ್ಯ, ಹಾಸನ ಜಿಲ್ಲೆಗಳ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಹಣ್ಣ ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಮಾಡಿ ಪುನೀತರಾದರು. ಶ್ರೀಲಕ್ಷ್ಮಿದೇವಿಯು ಹೆಣ್ಣುಮಕ್ಕಳು ಪರಸ್ಪರ ಕೈಹಿಡಿದು ಉಪ್ಪುಪ್ಪೆ ಕುಣಿತ ಕುಣಿಯಲು ಆರಂಭಿಸಿದಾಗ ದೇವರು ಸಹ ಹೆಣ್ಣು ಮಕ್ಕಳ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು. ಸಿಡಲುಕಲ್ಲು ಜಾತ್ರೆಗೆಂದು ತವರಿಗೆ ಬಂದಿದ್ದ ನೂರಾರು ಇದು ಹೆಣ್ಣು ಮಕ್ಕಳನ್ನು ಸಂತೋಷ ಪಡಿಸಿತು.

ಪಾಂಡವರು ಅಜ್ಞಾತ ವಾಸದ ವೇಳೆ ತಂಗಿದ್ದರು ಎಂಬ ಪ್ರತೀತಿ ಇರುವ ಸಿಡಿಲುಕಲ್ಲು ಜಾತ್ರಾ ಮೈದಾನದಲ್ಲಿ ಪಾಂಡವರ ಕಾಲದಲ್ಲಿ ಪಾಂಡವರು ಅಣ್ಣೇಕಲ್ಲಿನ ಆಟ ಆಡುತ್ತಿದ್ದರು ಎನ್ನಲಾಗುವ ಬೆಟ್ಟದ ಮೇಲೆ ನಿಂತಿರುವ ಸ್ಥಳದಲ್ಲಿ ನಡೆಯುವ ಈ ಜಾತ್ರೆಗೆ ಸಿಡಿಲುಕಲ್ಲು ಜಾತ್ರೆ ಎಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಹೋದರರಾದ ಬೆಟ್ಟದಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ದೊಡ್ಡಯ್ಯಸ್ವಾಮಿ, ಶ್ರೀ ಚಿಕ್ಕಯ್ಯ ಸ್ವಾಮಿ ದೇವರುಗಳ ಪೂಜಾ ಕುಣಿತವು ಜಾತ್ರೆಯ ರಂಗನ್ನು ಹೆಚ್ಚಿಸಿತ್ತು. ಜಾತ್ರೆಯ ಅಂಗವಾಗಿ ಓಕಳಿ, ಬಾಯಿಬೀಗ, ಜಾತ್ರಾ ಮಹೋತ್ಸವ, ಸಗ್ಗದ ಬಾಗಿಲು ನುಗ್ಗುವುದು ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಜಾತ್ರಾ ಮಹೋತ್ಸವದ ನೇತೃತ್ವವನ್ನು ದಡಿಘಟ್ಟ ಗ್ರಾಮದ ಶ್ರೀ ಲಕ್ಷ್ಮೀದೇವಿ ಯುವಕರ ಸಂಘ ಹಾಗೂ ಗ್ರಾಮದ ಮುಖಂಡರು ವಹಿಸಿಕೊಂಡು ಯಶಸ್ವಿಯಾಗಿಉ ನಡೆಸಿಕೊಟ್ಟರು. ಜಾತ್ರಾ ಮಹೋತ್ಸವದಲ್ಲಿ ದಡಿಘಟ್ಟ, ಬೆಟ್ಟದಹಳ್ಳಿ, ಚಲ್ಯ, ಕುಂಬೇನಹಳ್ಳಿ, ಜುಟ್ಟನಹಳ್ಳಿ, ಬ್ಯಾಡರಹಳ್ಳಿ, ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ, ಚಿಕ್ಕಕ್ಯಾತನಹಳ್ಳಿ, ಕಿಕ್ಕೇರಿ, ಲಕ್ಷ್ಮೀಪುರ, ಗಂಧನಹಳ್ಳಿ, ಅಗ್ರಹಾರಬಾಚಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನ ಪಡೆದು ದೇವಿಯ ಕೃಫೆಗೆ ಪಾತ್ರರಾದರು.
ಇದನ್ನು ಓದಿ:
ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಶ್ರವಣಬೆಳಗೊಳ ಪೋಲೀಸ್ ಠಾಣೆಯ ಅಧಿಕಾರಿಗಳು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
