ಚಿಕ್ಕಮಗಳೂರು, ಅಕ್ಟೋಬರ್ 29:
ರಾಜ್ಯವನ್ನು ಬೆಚ್ಚಿಬೀಳಿಸುವಂಥ ಕ್ರೂರ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ, ಸೀರೆಯಿಂದ ಮರಕ್ಕೆ ಕಟ್ಟಿ, ನಂತರ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಕೃತ್ಯ ಇದೀಗ ಸಂಚಲನ ಮೂಡಿಸಿದೆ.
ಮಾಹಿತಿಯ ಪ್ರಕಾರ, 25 ವರ್ಷದ ಶಿಕ್ಷಕಿ ಶಾಲೆ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದಾಗ ದುಷ್ಕರ್ಮಿಗಳು ಮಾರ್ಗಮಧ್ಯೆ ತಡೆದು ಈ ಅಮಾನುಷ ಕೃತ್ಯ ಎಸಗಿದ್ದಾರೆ. ನಂತರ ಶಿಕ್ಷಕಿಯನ್ನು ಮರಕ್ಕೆ ಕಟ್ಟಿ, ಸೀರೆಯಿಂದ ಬಿಗಿದು, ಹಲ್ಲೆ ನಡೆಸಿದ್ದಾರೆ.
ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ಶಿಕ್ಷಕಿಯ ಕುಟುಂಬಸ್ಥರು ಆಕೆಯನ್ನು ರಕ್ಷಿಸಿದ್ದು, ತೀವ್ರ ಗಾಯಗೊಂಡ ಆಕೆಯನ್ನು ಮೊದಲು ಕೊಪ್ಪ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಜಯಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
