ಬೆಂಗಳೂರು, ಅ.29 : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ಸಿದ್ಧನಹಳ್ಳಿ ಇವರ ವತಿಯಿಂದ, ಅನಿಕೇತನ ಕನ್ನಡ ಬಳಗ ಮತ್ತು ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ರಾಜ್ಯಮಟ್ಟದ 6ನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ ನವೆಂಬರ್ 8ರಂದು (ಶನಿವಾರ) ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಭವ್ಯವಾಗಿ ನಡೆಯಲಿದೆ.
ಈ ಸಮಾವೇಶಕ್ಕೆ ಹಿರಿಯ ಸಾಹಿತಿ ಮತ್ತು ಶರಣ ಸಂಸ್ಕೃತಿ ಚಿಂತಕಿ ಶ್ರೀಮತಿ ಪುಷ್ಪಾ ಬಸವರಾಜ ಬಣಕಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಪ್ರಸಿದ್ಧ ಲೇಖಕಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ 10 ಮಂದಿ ಸಾಧಕರಿಗೆ “ಗಾಂಧಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ” ಪ್ರದಾನ ಮಾಡುವರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಸಭಾಧ್ಯಕ್ಷರಾಗಿದ್ದು, ನಂತರ ನಡೆಯುವ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಗೆ ಖ್ಯಾತ ಕುಂಚ ಕಲಾವಿದೆ ಶಾಂತಿ ವಾಸು ಅಧ್ಯಕ್ಷತೆ ವಹಿಸುವರು.
ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ 15 ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ “ಬಿ.ಎಂ.ಶ್ರೀ ಮತ್ತು ಅನಿಕೇತನ ಪ್ರಶಸ್ತಿ” ಪ್ರದಾನ ಮಾಡುವರು. ಬೆಳಗಾವಿಯ ಹಿರಿಯ ಸಾಹಿತಿ ಸುರೇಶ್ ಕೋರಕೊಪ್ಪ ಸಮಾರೋಪ ಭಾಷಣ ಮಾಡುವರು.
ವೇದಿಕೆಯಲ್ಲಿ ಲಯನ್ ಮಂಗಳಗೌರಿ ಅರಸು, ವಕೀಲ ನಂಜಪ್ಪ ಕಾಳೇಗೌಡ, ದತ್ತಿದಾನಿ ಕೆ. ಕೃಷ್ಣಮೂರ್ತಿ (ಪೂಜಾರಿ ಪಾಳ್ಯ), ಡಾ. ವಿ. ಮುರಳಿಮೋಹನ್, ಶಾಂತಲಾ ಸುರೇಶ್, ಡಾ. ಆರ್. ವಾದಿರಾಜ್, ಪ್ರೊ. ಎಸ್. ಆರ್. ವೆಂಕಟೇಶ್, ಹಾ. ನೀ. ಮಂಜುಳಾ ಶಿವಾನಂದ, ಗೀತಾ ಸತೀಶ್, ಅಂಬುಜಾ ಪ್ರಕಾಶ್, ಡಾ. ಕೃಷ್ಣಪ್ಪ ಕೋಡಿಪಾಳ್ಯ, ಅನಿಕೇತನ ಮಾಯಣ್ಣ, ಡಾ. ಶರತ್ ಚಂದ್ರ ಜಿ. ರಾನಡೆ, ಪ್ರೊ. ಲೀಲಾವಾಸುದೇವ್, ಗುಣಸಾಗರಿ ಸಿ. ನಾಗರಾಜ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ.
ವಿಚಾರ ಸಂಕಿರಣದಲ್ಲಿ ಡಾ. ಪ್ರಿಯದರ್ಶಿನಿ ಎಂ. ಹಾಗೂ ಡಾ. ಜಿ.ಬಿ. ಮಹೇಶ್ವರಿ ಪ್ರಬಂಧ ಮಂಡಿಸಲಿದ್ದಾರೆ. ಸಮಾವೇಶದಲ್ಲಿ ಗೀತ-ಸಂಗೀತ, ನೃತ್ಯ ವೈಭವ ಮತ್ತು ಹಾಸ್ಯ ಕಾರ್ಯಕ್ರಮ ಸೇರಿದಂತೆ ಮನರಂಜನಾ ಅಂಶಗಳೂ ಇರಲಿವೆ.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಿ. ಹೇಮಾವತಿ ಸಿಸಿರಾ ಅವರು “ಮಹಿಳೆಯರ ಸಾಹಿತ್ಯ, ಕಲೆ ಮತ್ತು ಚಿಂತನೆಯ ಶಕ್ತಿ ರಾಜ್ಯದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಮಾವೇಶವು ಆ ಚೇತನೆಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದಿದ್ದಾರೆ.

