ಕೆ.ಆರ್.ಪೇಟೆ,ಅ.13: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಡ್ಯ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಗೆ ಅಹವಾಲು ಸ್ವೀಕಾರ ಮಾಡಿದರು.
ಮಂಡ್ಯ ಜಿಲ್ಲಾ ಲೋಕಾಯುಕ್ತ ಎಸ್.ಪಿ. ಸುರೇಶ್ಬಾಬು, ಡಿ.ವೈ.ಎಸ್.ಪಿ ಸುನಿಲ್ಕುಮಾರ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಬ್ಯಾಟರಾಯಿಗೌಡ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡವು ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಕಾಲಕ್ಕೆ ಸಾರ್ವಜನಿಕರು ಹಾಗೂ ರೈತರ ಕೆಲಸಗಳನ್ನು ಸೇವಾ ಭಾವನೆಯಿಂದ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಬಾರದು. ರೈತರು ಹಾಗೂ ಸಾರ್ವಜನಿಕರ ಕೆಲಸವನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡದೇ ಇದ್ದರೆ ಅದು ಲಂಚ ಪಡೆಯುವುದಕ್ಕೆ ಸಮನಾಗುತ್ತದೆ. ಲಂಚದ ಆಸೆಗೆ ಕೆಲಸವನ್ನು ತಡ ಮಾಡಲಾಗುತ್ತಿದೆ ಎಂದು ಪರಿಗಣಿಸಬೇಕಾಗುತ್ತದೆ. ನಿಗಧಿತ ಅವಧಿಯೊಳಗೆ ಕೆಲಸ ಮಾಡಿಕೊಡದೇ ಅಲೆದಾಡಿಸಿದರೆ ನೊಂದ ಅರ್ಜಿದಾರರಿಂದ ದೂರು ಬಂದರೆ ತಕ್ಷಣ ಅಂತಹ ಅಧಿಕಾರಿಗಳು ಅಥವಾ ನೌಕರರ ಮೇಲೆ ಎಫ್.ಐ.ಆರ್. ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್.ಪಿ. ಸುರೇಶ್ಬಾಬು ಎಚ್ಚರಿಕೆ ನೀಡಿದರು.

ಸರ್ಕಾರಿ ಕೆಲಸ ಸಿಗಲು ಪುಣ್ಯ ಮಾಡಿರಬೇಕು. ಇಂತಹ ಸರ್ಕಾರಿ ವೃತ್ತಿಯಲ್ಲಿದ್ದುಕೊಂಡು ಉತ್ತಮ ಸೇವೆ ಸಲ್ಲಿಸಬೇಕು. ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರವೂ ಸಾರ್ವಜನಿಕರು ಬೆಲೆ ನೀಡುತ್ತಾರೆ ಇಲ್ಲದಿದ್ದರೆ ನಿವೃತ್ತಿಯಾದ ದಿನದಿಂದಲೇ ನಿಮಗೆ ಒಂದು ಪೈಸೆಯ ಬೆಲೆ ಸಿಗುವುದಿಲ್ಲ. ಹಾಗಾಗಿ ನಿವೃತ್ತಿಯ ನಂತರವೂ ಸರ್ಕಾರಿ ಅಧಿಕಾರಿಗಳಾದ ತಮಗೆ ಬೆಲೆ ಸಿಗಬೇಕಾದರೆ ಉತ್ತಮವಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದನ್ನು ರೂಢಿಸಿಕೊಳ್ಳಬೇಕು. ತಮ್ಮ ವಿರುದ್ದ ಯಾವುದೇ ಭ್ರಷ್ಠಾಚಾರದ ಆರೋಪಗಳು ಬಾರದಂತೆ ನೋಡಿಕೊಳ್ಳಬೇಕು ಈ ಮೂಲಕ ಒಳ್ಳೆಯ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಾರ್ವಜನಿಕರಿಂದ ಒಟ್ಟು 31ದೂರು ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು. ಈ ಪೈಕಿ ಸಾರಿಗೆ ಇಲಾಖೆ ವಿರುದ್ದ 1 ಎಫ್.ಐ.ಆರ್ ಹಾಗೂ ಕಂದಾಯ ಇಲಾಖೆಯ ವಿರುದ್ದ 3ಎಫ್.ಐ.ಆರ್. ಅನ್ನು ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿಯೇ ದಾಖಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಇಓ ಸುಷ್ಮ, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಸಮಾಜ ಕಲ್ಯಾಣಾಧಿಕಾರಿ ಡಾ.ಕೆ.ದಿವಾಕರ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜು, ರಾಜಸ್ವ ನಿರೀಕ್ಷಕ ಜ್ಞಾನೇಶ್, ಹೇಮಾವತಿ ಇಲಾಖೆಯ ಎಇಇ ಚಂದ್ರೇಗೌಡ, ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಲು ಲೋಕಾಯುಕ್ತ ಅಧಿಕಾರಿಗಳು ನಿರ್ಧಾರ ಕೈಗೊಂಡರು.
– ಶ್ರೀನಿವಾಸ್ ಆರ್.
