ಟಿ.ನರಸೀಪುರ : ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಹಳಷ್ಟು ಬಡವರುಗಳು ಬಹಳ ಸಂಖ್ಯೆಯಲ್ಲಿದ್ದು ಇವರುಗಳಿಗೆ ಸ್ವಂತ ನಿವೇಶನ ಮತ್ತು ಸ್ವಂತ ಮನೆ ಇಲ್ಲದ ಕಾರಣ ಅವರುಗಳಿಗೆ ಸ್ವಂತ ನಿವೇಶನ ಮತ್ತು ವಸತಿ ಸೌಲಭ್ಯಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು “ಸ್ವಂತಮನೆ ನಮ್ಮ ಹಕ್ಕು ಸಂಘಟನೆ” ಎಂದು ರಾಜ್ಯ ಸಂಚಾಲಕ ಎಸ್ ಕೆ ರಾಜೂಗೌಡ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ಕಛೇರಿಯಲ್ಲಿ ಲಭ್ಯವಿಲ್ಲದ ಕಾರಣ ಸಹಾಯಕ ನಿರ್ದೇಶಕರ ಮೂಲಕ ಮನವಿ ಸಲ್ಲಿಸಿ ಮಾತನಾಡಿ ಟಿ.ನರಸೀಪುರ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಹಳಷ್ಟು ಜನ ಕಡು ಬಡವರು, ಕೂಲಿಕಾರ್ಮಿಕರು, ಕೃಷಿ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ ನೌಕರರು, ಹೊರಗುತ್ತಿಗೆ ನೌಕರರು, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಮಧ್ಯಮ ವರ್ಗದ ಬಡವರುಗಳು ಬಹಳ ಸಂಖ್ಯೆಯಲ್ಲಿದ್ದು ಇವರುಗಳಿಗೆ ಸ್ವಂತ ನಿವೇಶನ ಮತ್ತು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ತಮ್ಮ ದುಡಿಮೆಯ ಬಹುಪಾಲನ್ನು ಮನೆ ಬಾಡಿಗೆಗಾಗಿ ವೆಚ್ಚ ಮಾಡುತ್ತಿದ್ದು ಇದರಿಂದಾಗಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಂಬಂಧಿತ ವೆಚ್ಚಗಳಿಗಾಗಿ ಸಾಲ ಮಾಡಿಕೊಂಡು ಜೀವನವನ್ನು ನಡೆಸುತ್ತ ಪರಿಪಾಟಲು ಪಡುತ್ತಿದ್ದಾರೆ. ಸರ್ಕಾರ ಬಡವರಿಗಾಗಿ, ನಿವೇಶನ ರಹಿತರಿಗಾಗಿ ಮತ್ತು ವಸತಿ ರಹಿತರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸಿದರು ಸಹ ಇನ್ನೂ ನಾಗರೀಕರು ತಮ್ಮ ಸಂವಿಧಾನ ಬದ್ಧ ಹಕ್ಕುಗಳಾದ ವಸತಿ , ಶಿಕ್ಷಣ , ಆರೋಗ್ಯ ಸೇವೆಗಳು ಸೇರಿದಂತೆ ಮೂಲಭೂತ ಹಕ್ಕುಗಳು ಮತ್ತು ಸೌಲಭ್ಯಗಳಿಗಾಗಿ ಪರಿತಪಿಸುವ ಪರಿಸ್ಥಿತಿ ಇರುವುದನ್ನು ನಾವು ಕಾಣುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿವಾರು ನಿವೇಶನ ಮತ್ತು ವಸತಿ ರಹಿತರ ಪಟ್ಟಿ ಮಾಡಿ ಅವರುಗಳಿಗೆ ಸ್ವಂತ ನಿವೇಶನ ಮತ್ತು ವಸತಿ ಸೌಲಭ್ಯಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ವಂತಮನೆ ನಮ್ಮ ಹಕ್ಕು ಸಂಘಟನೆ” ವತಿಯಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಮೂಗೂರು ಮಹೇಂದ್ರ ಕುಮಾರ್, ಯರಗನಹಳ್ಳಿ ಸೋಮೇಶ್, ಮಾಕನಹಳ್ಳಿ ಮಹೇಶ್,ಗುಡ್ಡದ ಕೊಪ್ಪಲು ಶಿವಣ್ಣ,ಮಾದಿಗಹಳ್ಳಿ ಶಿವರಾಜ್,ಅಸ್ಲಾಂ, ನೀಲಯ್ಯ ಸೇರಿದಂತೆ ಇತರರಿದ್ದರು.
ಎಂ.ನಾಗೇಂದ್ರಕುಮಾರ್
