ಆಲೂರು: ಬೈರಾಪುರ ಗ್ರಾಮದಲ್ಲಿರುವ ಆಲೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿಯಲ್ಲಿ ನಿರ್ಮಿಸಲಾದ ಅರಣ್ಯ ಇಲಾಖೆಯ ವಸತಿಗೃಹಗಳು ಇದೀಗ ಸಂಪೂರ್ಣ ನಿರ್ಲಕ್ಷ್ಯದಿಂದ ‘ಭೂತ ಬಂಗಲೆ’ಗಳಂತೆ ಪಾಳು ಬಿದ್ದಿವೆ. ಲಕ್ಷಾಂತರ ರೂ. ವೆಚ್ಚ ಮಾಡಿ ಸರ್ಕಾರ ನಿರ್ಮಿಸಿದ ಈ ಕಟ್ಟಡಗಳಲ್ಲಿ ಯಾವುದೇ ಸಿಬ್ಬಂದಿ ವಾಸಕ್ಕೆ ಬರುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.
ಆಲೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಬೈರಾಪುರದಲ್ಲಿದ್ದು, ಸಿಬ್ಬಂದಿಯ ವಾಸಕ್ಕೆ ಅನುಕೂಲವಾಗಲು ರಾಜ್ಯ ಹೆದ್ದಾರಿ ಪಕ್ಕದಲ್ಲೇ ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳು ನಗರ ಪ್ರದೇಶದಲ್ಲೇ ನೆಲೆಸಿರುವುದರಿಂದ, ಬಳಕೆ ಇಲ್ಲದ ಕಟ್ಟಡಗಳ ಸುತ್ತ ಮುಳ್ಳಿನ ಗಿಡಗಂಟೆಗಳು, ಕುರುಚಲುಗಳು ಬೆಳೆದು, ರಾತ್ರಿ ವೇಳೆಯಲ್ಲಿ ಅಹಿತಕರ ಚಟುವಟಿಕೆಗಳು ನಡೆಯುವ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಮಲೆನಾಡು–ಅರೆ ಮಲೆನಾಡು ಪ್ರದೇಶಗಳಲ್ಲಿ ಆನೆಗಳ ಉಪಟಳ ಹೆಚ್ಚಿರುವುದರಿಂದ, ಅರಣ್ಯ ಸಿಬ್ಬಂದಿ ಹಾಗೂ ಕಾರ್ಯಪಡೆಯವರು ಇಲ್ಲಿ ವಾಸಿಸಿ ಕರ್ತವ್ಯ ನಿರ್ವಹಿಸಲು ಸರ್ಕಾರ ವಸತಿಗೃಹಗಳನ್ನು ನಿರ್ಮಿಸಿತ್ತು. ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕರಿಗಾಗಿ ಪ್ರತ್ಯೇಕ ಮೂರು ಕಟ್ಟಡಗಳನ್ನು ರೂಪಿಸಲಾಗಿದ್ದರೂ, ಯಾವೊಬ್ಬರೂ ವಾಸ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆ ಎನಿಸಿದೆ.
ಈ ಹಿನ್ನೆಲೆಯಲ್ಲಿ “ಬೈರಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಈ ಮೂವರು ಹುದ್ದೆಗಳಿಗೂ ಅಧಿಕಾರಿಗಳು ನೇಮಕಗೊಂಡಿದ್ದಾರೆಯೇ? ಇದ್ದರೆ ಅವರು ಕರ್ತವ್ಯ ಎಲ್ಲಿಂದ ನಿರ್ವಹಿಸುತ್ತಿದ್ದಾರೆ?” ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಇದರ ಜೊತೆಗೆ, ಅರಣ್ಯ ಇಲಾಖೆಗೆ ಸೇರಿದ ಬೋಲೇರೋ ಜೀಪ್ ಹಾಗೂ ಕ್ಯಾಂಟರ್ ಲಾರಿ ಸುಮಾರು ಐದು ವರ್ಷಗಳಿಂದ ಅದೆ ಸ್ಥಳದಲ್ಲಿ ಮಳೆ-ಬಿಸಿಲಿಗೆ ಬಿದ್ದೇ ತುಕ್ಕು ಹಿಡಿಯುತ್ತಿವೆ. ವಾಹನ ಸಂರಕ್ಷಣೆ ಕುರಿತು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದರೆಂಬ ಟೀಕೆ ಕೇಳಿಬರುತ್ತಿದೆ. “ಮರಕಡಿಯುವುದು ನಿಷೇಧ, ಸರಿ. ಆದರೆ ಇಲಾಖೆಯ ಕಟ್ಟಡಗಳ ಸುತ್ತ ಬೆಳೆದಿರುವ ಗಿಡಗಂಟೆಗಳನ್ನು ತೊಲಗಿಸುವುದಕ್ಕೂ ನಿಯಮವಿದೆಯೇ?” ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಗೆ ಜಿಲ್ಲಾ ಪಂಚಾಯಿತಿ ಮತ್ತು ಅರಣ್ಯ ಇಲಾಖೆಯಿಂದ ಸುಮಾರು ₹10 ಲಕ್ಷಕ್ಕೂ ಅಧಿಕ ಅನುದಾನ ವಸತಿಗೃಹ ದುರಸ್ತಿ ಹೆಸರಿನಲ್ಲಿ ವಿನಿಯೋಗವಾಗಿದೆ ಎಂಬ ಮಾಹಿತಿ ಲಭ್ಯ. ಆದರೆ ಇಂದಿಗೂ ಕಟ್ಟಡಗಳು ವಾಸಕ್ಕೆ ಯೋಗ್ಯ ಸ್ಥಿತಿಯಲ್ಲಿ ಇಲ್ಲದೆ ಪಾಳು ಬಿದ್ದಿರುವುದು ಸಾರ್ವಜನಿಕ ಹಣದ ದುರುಪಯೋಗಕ್ಕೆ ನಿದರ್ಶನವಾಗಿದೆ.
ಈ ಹಿನ್ನೆಲೆಯಲ್ಲಿ, ಬೈರಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಕಾರ್ಯವೈಖರಿಯನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
