ತುಮಕೂರು: ಕಂಪನಿ ಸೆಕ್ರೆಟರಿ ಎಂಬುದು ಕಂಪನಿಯ ಕಾನೂನು ಬಾಧ್ಯತೆಗಳು, ಕಾರ್ಪೊರೇಟ್ ಆಡಳಿತ ಮತ್ತು ನಿರ್ದೇಶಕ ಮಂಡಳಿಗೆ ಸಲಹೆ ನೀಡುವ ಪ್ರತಿಷ್ಠಿತ ಹುದ್ದೆಯಾಗಿದೆ. ಈ ಸಾಧನೆಯಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಮರ್ಥ್ಯದ ಜೊತೆಗೆ ಕಾರ್ಪೊರೇಟ್ ಜಗತ್ತಿನ ಸಂಕೀರ್ಣತೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಬಿಬಿಎ ಮೊದಲ ಸೆಮಿಸ್ಟರ್ನ 17 ವಿದ್ಯಾರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲೇ ಕಂಪನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರನ್ಸ್ ಟೆಸ್ಟ್ ಯಶಸ್ವಿಯಾಗಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಕಂಪನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರನ್ಸ್ ಟೆಸ್ಟ್ ಯಶಸ್ವಿಯಾಗಿ ತೇರ್ಗಡೆಯಾಗುವುದು ಕೇವಲ ಒಂದು ಪರೀಕ್ಷೆ ಗೆಲ್ಲುವುದಲ್ಲ. ಈ ಯಶಸ್ಸು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಪ್ರತಿಷ್ಠಿತ ಕೋರ್ಸ್ ಆದ ಕಂಪನಿ ಸೆಕ್ರೆಟರಿ ಕೋರ್ಸ್ ದಾರಿ ತೆರೆದಿದೆ. ಈ ಕ್ಷೇತ್ರವು ಅಪಾರ ವೃತ್ತಿಪರ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಕಂಪನಿಗಳ ನಿರ್ಧಾರಾತ್ಮಕ ಹುದ್ದೆಗಳಲ್ಲಿ ನಿಲ್ಲುವ ಅವಕಾಶವನ್ನು ಕಲ್ಪಿಸುತ್ತದೆ. ಇದೇ ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಮುಂದುವರೆಸಿಕೊಂಡು ಹೋದರೆ ಭವಿಷ್ಯದಲ್ಲಿ ಉತ್ತಮ ಕಾರ್ಪೊರೇಟ್ ನಾಯಕರಾಗಿ ಬೆಳೆಯಬಹುದು ಎಂದು ಹೇಳಿದರು.
ಯಶಸ್ವಿ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರನ್ನೂ ಗಣ್ಯರು ಸನ್ಮಾನಿಸಿ, ಅವರ ಕಠಿಣ ಪರಿಶ್ರಮ, ಸಮರ್ಪಣೆಯನ್ನು ಶ್ಲಾಘಿಸಿದರು. ಈ ವೇಳೆ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಅಮೂಲ್ಯ.ಜಿ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಸಿಡಿಸಿ ಮುಖ್ಯಸ್ಥರು ಹಾಗೂ ವಿಮ್ಟೆಕ್ನ ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಪ್ರಸನ್ನಕುಮಾರ್.ಟಿ..ಎಂ., ವಿ-ಟೆಕ್ನೋ ಸಿಇಓ ಸಿ.ಎಸ್.ಪ್ರೇಮ್ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
