ಇಂದಿನ ಬದಲಾದ ಜೀವನಶೈಲಿ, ಜಂಕ್ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದ ಲಿವರ್ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಲಿವರ್ ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುವ ಫ್ಯಾಟಿ ಲಿವರ್ ಸಮಸ್ಯೆ ಅನೇಕ ಜನರ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಲಿವರ್ ದೇಹದ ಅತ್ಯಂತ ಮುಖ್ಯ ಅಂಗವಾಗಿದ್ದು, ಇದರ ಕಾರ್ಯ ನಿಧಾನವಾದರೆ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವಿಗೂ ಕಾರಣವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ, ಲಿವರ್ ಆರೋಗ್ಯವನ್ನು ಕಾಪಾಡುವಲ್ಲಿ ಹಸಿ ಅರಿಶಿನ ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ಲಿವರ್ನಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕರ್ಕ್ಯುಮಿನ್ ಲಿಪಿಡ್ ಚಯಾಪಚಯವನ್ನು ಸುಧಾರಿಸುವುದರಿಂದ ಟ್ರಾನ್ಸ್ ಫ್ಯಾಟ್ ಸೇರಿದಂತೆ ಅನಗತ್ಯ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಜೊತೆಗೆ ಅರಿಶಿನವು ನೈಸರ್ಗಿಕ ಉರಿಯೂತ ನಿವಾರಕ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಲಿವರ್ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೋಶ ಹಾನಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ಗಳನ್ನು ತಡೆಹಿಡಿಯುತ್ತದೆ.
ಅರಿಶಿನ ಸೇವನೆಯಿಂದ ALT ಮತ್ತು ASTನಂತಹ ಲಿವರ್ ಕಿಣ್ವಗಳ ಮಟ್ಟ ನಿಯಂತ್ರಣಕ್ಕೆ ಬರುವುದರಿಂದ ಲಿವರ್ ಕಾರ್ಯಕ್ಷಮತೆ ಸುಧಾರಿಸುತ್ತದೆ. ಅಲ್ಲದೆ, ಇದು ನೈಸರ್ಗಿಕ ನಿರ್ವಿಶೀಕರಣಕಾರಿಯಾಗಿ ಕಾರ್ಯನಿರ್ವಹಿಸಿ ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಹಾಗೂ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
ಹಸಿ ಅರಿಶಿನ ಸೇವನೆ ವಿಧಾನ:-
ಲಿವರ್ ಆರೋಗ್ಯಕ್ಕಾಗಿ ಹಸಿ ಅರಿಶಿನ ನೀರನ್ನು ಸೇವಿಸುವುದು ಉತ್ತಮ. ಹಸಿ ಅರಿಶಿನದ ಬೇರುವನ್ನು ಸ್ವಚ್ಛಗೊಳಿಸಿ ಪುಡಿಮಾಡಿ ಅಥವಾ ಸಣ್ಣ ತುಂಡುಗಳಾಗಿ ತುರಿದು, ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಬೇಕು. ರುಚಿಗಾಗಿ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವುದರಿಂದ ಲಿವರ್ ಆರೋಗ್ಯದಲ್ಲಿ ಸ್ಪಷ್ಟ ಸುಧಾರಣೆ ಕಂಡುಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ನೈಸರ್ಗಿಕ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯೊಂದಿಗೆ ಹಸಿ ಅರಿಶಿನವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಫ್ಯಾಟಿ ಲಿವರ್ ಸಮಸ್ಯೆಯಿಂದ ದೂರ ಉಳಿಯಬಹುದು.
