ಕೊರಟಗೆರೆ:- ಇಂದಿನ ವಿದ್ಯಮಾನದಲ್ಲಿ ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕೋಳಾಲ ಗ್ರಾಮದಲ್ಲಿರುವ ಚೇತನ ಇಂಟರ್ನ್ಯಾಷನಲ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಶಾಲಾ ವಾತಾವರಣದಲ್ಲಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಅತ್ಯುತ್ತಮ ವೇದಿಕೆಯಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಅವಕಾಶಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನಿವಾರ್ಯವೆಂದು ತಿಳಿಸಿದರು.

ಇದನ್ನು ಓದಿ: ಜನನ–ಮರಣ ನೋಂದಣಿ ಕಡ್ಡಾಯ: 21 ದಿನಗಳೊಳಗೆ ಪ್ರಮಾಣಪತ್ರ ವಿತರಿಸಲು ಸೂಚನೆ
ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮರುಳಯ್ಯ ಮಾತನಾಡಿ, ಜ್ಞಾನವೆಂಬುದು ಯಾರೂ ಕಸಿಯಲಾರದ ಅಮೂಲ್ಯ ಸಂಪತ್ತಾಗಿದೆ. ಮಕ್ಕಳು ಈ ಜಗತ್ತಿನಲ್ಲಿ ಕೇವಲ ಹಣವಂತರಾಗುವುದಕ್ಕಿಂತ ಜ್ಞಾನವಂತರಾಗುವುದನ್ನು ಕಲಿಯಬೇಕು. ಶಿಕ್ಷಣವೇ ಜೀವನದ ನಿಜವಾದ ಶಕ್ತಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ದೊಡ್ಡ ರಂಗೇಗೌಡ ಮಾತನಾಡಿ, ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದೆ. ಆ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆಗಳನ್ನು ಕಲ್ಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ್, ಇಂಜಿನಿಯರ್ ಪ್ರಭಾಕರ್, ಜಾನಪದ ಕಲಾವಿದೆ ಅಕ್ಕಮ್ಮ, ಟ್ರಸ್ಟಿಗಳಾದ ಹನುಮಂತರಾಯಪ್ಪ, ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀದೇವಿ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ.
