ಹಾಸನ:ಅರಣ್ಯ ಇಲಾಖೆ, ಹಾಸನದ ಇ.ಟಿ.ಎಫ್. (ETF) ಕಂಟ್ರೋಲ್ ರೂಮ್ ವತಿಯಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಕಾಡಾನೆಗಳ ಹಾವಳಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅತ್ಯಂತ ಜಾಗರೂಕರಾಗಿರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಹೆತ್ತೂರು–ಯಸಳೂರು ಹೋಬಳಿಯ ಹೆತ್ತೂರು ಗ್ರಾಮದ ತಮ್ಮಣ್ಣ ಅಯ್ಯರ್ ಮನೆ ಕಾಡು, ಹಾಡ್ಲಾಹಳ್ಳಿ ಗ್ರಾಮದ ಕೌರಿಕಾಡು, ಮಡ್ಡಿಕೆರೆ ಬೆಟ್ಟ, ಕುಮತಹಳ್ಳಿ ಗ್ರಾಮದ ವೆಸ್ಟರ್ನ್ ವ್ಯಾಲಿ ಹೋಂಸ್ಟೇ, ಮತ್ತೂರು ಗ್ರಾಮದ ಬಿದಿರು ನಡುತೊಪು, ಮರ್ಕಳ್ಳಿ ಕಲ್ಲುತೋಟ ಹಾಗೂ ಹಕ್ರೆ ಕುಂಬ್ರಿ ಸುತ್ತಮುತ್ತ ಕಾಡಾನೆಗಳು ಕಂಡುಬಂದಿವೆ.
ಇದಲ್ಲದೆ ಬೇಲೂರು ತಾಲ್ಲೂಕಿನ ಜಗಬೋರಹಳ್ಳಿ ಫಾರೆಸ್ಟ್, ದೊಡ್ಡಸಾಲವರ ಕೃಷ್ಣೆಗೌಡ್ರು ತೋಟ, ಬಕ್ರವಳ್ಳಿ ಗ್ರಾಮದ ಹಾಲಪ್ಪ ಅವರ ಕಾಡು, ಮಠದ ತೋಟ ಹಾಗೂ ಹಿರಿಗರ್ಜೆ ಸುತ್ತಮುತ್ತಲ ಪ್ರದೇಶಗಳಲ್ಲೂ ಕಾಡಾನೆಗಳ ಸಂಚಾರ ಕಂಡುಬಂದಿದೆ.
ಅರಕಲಗೂಡು ತಾಲ್ಲೂಕಿನ ಕಟ್ಟೆಪುರ ಫಾರೆಸ್ಟ್ ಸುತ್ತಮುತ್ತಲ ಪ್ರದೇಶಗಳಲ್ಲೂ ಕಾಡಾನೆಗಳು ಕಂಡುಬಂದಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ರಾತ್ರಿ ಸಮಯದಲ್ಲಿ ಅನಗತ್ಯ ಸಂಚಾರ ತಪ್ಪಿಸಬೇಕು, ಕಾಡು ಹಾಗೂ ತೋಟ ಪ್ರದೇಶಗಳಿಗೆ ತೆರಳುವಾಗ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಇ.ಟಿ.ಎಫ್. ಕಂಟ್ರೋಲ್ ರೂಮ್, ಅರಣ್ಯ ಇಲಾಖೆ, ಹಾಸನ – ತುರ್ತು ಸಹಾಯವಾಣಿ: 9480817460 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
