ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತ ಮಕ್ಕಳು ಹಾಗೂ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಗಂಭೀರ ಸವಾಲು ಎಸೆಯುತ್ತಿವೆ. ಗೃಹ ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 15,146 ಪೋಕ್ಸೋ (POCSO) ಪ್ರಕರಣಗಳು ದಾಖಲಾಗಿದ್ದು, ಪೋಷಕರು ಹಾಗೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಬೆಳವಣಿಗೆ ರಾಜ್ಯಕ್ಕೆ ಮಾತ್ರವಲ್ಲದೆ ಸಮಾಜಕ್ಕೆ ತಲೆತಗ್ಗಿಸುವ ವಿಷಯವಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳಲ್ಲಿ ಸಾಮಾನ್ಯ ನಾಗರಿಕರ ಜೊತೆಗೆ ಸಮಾಜದ ಪ್ರಭಾವಿ ವ್ಯಕ್ತಿಗಳು ಮತ್ತು ಜನಪ್ರತಿನಿಧಿಗಳ ಹೆಸರುಗಳು ಕೂಡ ತಳುಕುಹಾಕಿಕೊಳ್ಳುತ್ತಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ವರ್ಷವಾರು ಪೋಕ್ಸೋ ಪ್ರಕರಣಗಳ ವಿವರ
2022: 3,211 ಪ್ರಕರಣಗಳು
2023: 3,903 ಪ್ರಕರಣಗಳು
2024: 4,078 ಪ್ರಕರಣಗಳು
2025: 3,954 ಪ್ರಕರಣಗಳು
ಜಿಲ್ಲಾವಾರು ಆತಂಕಕಾರಿ ಚಿತ್ರಣ:-
ರಾಜ್ಯದ ಪ್ರಮುಖ ನಗರ ಹಾಗೂ ಜಿಲ್ಲೆಗಳಾದ ಬೆಂಗಳೂರು ನಗರ, ಶಿವಮೊಗ್ಗ, ಬೆಳಗಾವಿ, ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿವೆ.
2025ರಲ್ಲಿ ಬೆಂಗಳೂರು ನಗರವೊಂದರಲ್ಲೇ 502 ಪ್ರಕರಣಗಳು, ಶಿವಮೊಗ್ಗದಲ್ಲಿ 217 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲೂ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿಲ್ಲ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ.
ವಿಶೇಷವಾಗಿ ಬೆಂಗಳೂರು ನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗುತ್ತಿದೆ.
ಪ್ರಭಾವಿಗಳ ಮೇಲೂ ಪೋಕ್ಸೋ ಅಸ್ತ್ರ
ಮಕ್ಕಳ ರಕ್ಷಣೆಗೆ ಜಾರಿಗೊಂಡಿರುವ ಪೋಕ್ಸೋ ಕಾಯ್ದೆಯಡಿ ರಾಜ್ಯದ ಕೆಲವು ಪ್ರಭಾವಿ ವ್ಯಕ್ತಿಗಳ ವಿರುದ್ಧವೂ ಪ್ರಕರಣಗಳು ದಾಖಲಾಗಿರುವುದು ಚರ್ಚೆಗೆ ಕಾರಣವಾಗಿದೆ.
ಬಿ.ಎಸ್. ಯಡಿಯೂರಪ್ಪ ಪ್ರಕರಣ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 2024ರ ಮಾರ್ಚ್ನಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣ ರಾಜಕೀಯ ಪ್ರೇರಿತವೆಂದು ಕುಟುಂಬ ವಾದಿಸಿದ್ದು, ಡಿಸೆಂಬರ್ 2, 2025ರಂದು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.
ಮುರುಘಾ ಶರಣರ ಪ್ರತಕ್ಷಣ:-
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಠದ ಹಾಸ್ಟೆಲ್ ಬಾಲಕಿಯರ ಮೇಲೆ ದೌರ್ಜನ್ಯ ಆರೋಪ ಕೇಳಿಬಂದಿತ್ತು.
2022ರಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಒಂದರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಜಿಲ್ಲಾ ನ್ಯಾಯಾಲಯ ದೋಷಮುಕ್ತಗೊಳಿಸಿದ್ದು, ಉಳಿದ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿಯಿದೆ.
ನಿಯಂತ್ರಣಕ್ಕೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿವೆ:
ನೂತನ ಕ್ರಿಮಿನಲ್ ಕಾಯ್ದೆಯನ್ವಯ ತನಿಖೆ 60 ದಿನಗಳಲ್ಲಿ ಪೂರ್ಣಗೊಳಿಸುವ ಕಡ್ಡಾಯ
ಪೋಕ್ಸೋ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ
ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ ರಚನೆ
ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ 7,500 ಸಿಸಿಟಿವಿ ಕ್ಯಾಮೆರಾ ಅಳವಡಿಕೆ
35 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳ ಸ್ಥಾಪನೆ
ರಾಜಿ ಪಂಚಾಯಿತಿ – ಪ್ರಕರಣಗಳ ಮರೆಮಾಚುಕ್ರಮಗಳು
ಕಠಿಣ ಕಾನೂನುಗಳಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಮುಜುಗರ ಹಾಗೂ ರಾಜಿ ಪಂಚಾಯಿತಿಗಳ ಕಾರಣದಿಂದ ಅನೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿಲ್ಲ. ಇದರಿಂದ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿಸ್ಥಾಪನೆ
ಸಹಾಯವಾಣಿ ಮತ್ತು ಜಾಗೃತಿ ಅಗತ್ಯ
ಮಕ್ಕಳ ರಕ್ಷಣೆಗೆ ಸಾರ್ವಜನಿಕ ಜಾಗೃತಿ ಅತ್ಯವಶ್ಯ.ಯಾವುದೇ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ಈ ಸಹಾಯವಾಣಿಗಳನ್ನು ಸಂಪರ್ಕಿಸಬಹುದಾಗಿದೆ:
ಮಕ್ಕಳ ಸಹಾಯವಾಣಿ: 1098
ಪೊಲೀಸ್ ಸಹಾಯವಾಣಿ: 22943225
ಮಕ್ಕಳ ಭದ್ರತೆ ಕೇವಲ ಕಾನೂನಿನ ಹೊಣೆಗಾರಿಕೆಯಲ್ಲ, ಅದು ಸಮಾಜದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂಬ ಅರಿವು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ.
