ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಬ್ಯಾಂಕಾಕ್ನಲ್ಲಿ ಬುದ್ಧ…!!!
ಬುದ್ಧನ ತತ್ವಗಳಿಗೆ ಮತ್ತು ವಿಚಾರಧಾರೆಗೆ ಮಾರುಹೋದ ನಾನು ಬುದ್ಧ ನೆಲೆಸಿರುವ ನಾಡನ್ನು ನೋಡಬೇಕೆಂದು ಹಲವು ದಿನಗಳಿಂದ ಹವಣಿಸುತ್ತಿದ್ದೆ. ಇತ್ತೀಚೆಗೆಷ್ಟೇ ಆಸೆಯನ್ನು ಈಡೇರಿಸಿಕೊಳ್ಳುವ ಸುಕಾಲ ಒದಗಿ ಬಂತು. ಏಷ್ಯಾ ಖಂಡದಲ್ಲಿಯೇ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಸುವರ್ಣ ಭೂಮಿಯಲ್ಲಿ ಕಾಲಿಟ್ಟ ನಮ್ಮನ್ನು ಮೊದಲೇ ನಿರ್ಧರಿಸಿದ ಆ ದೇಶದ ಪ್ರವಾಸಿ ಮಾಹಿತಿಗಾರಿಣಿ ನಮಸ್ತೆಯೊಂದಿಗೆ ಸ್ವಾಗತಿಸಿದಳು.
ಐದು ಅಡಿ ಎತ್ತರವಿದ್ದು ನೋಡಲು ಬ್ರೂಸ್ಲಿ ತಂಗಿಯಂತಿದ್ದ ಸುಮಾರು ಇಪ್ಪತ್ತೆಂದರ ಹರೆಯದ ಆಕೆಯ ಹೆಸರು ನಳಿನಿ. ಸದಾ ಸಂಚಲನಶೀಲಳಾಗಿರುತ್ತಿದ್ದ ಆಕೆ ನಡೆನುಡಿಗಳಲ್ಲಿ ಪಾದರಸದಂತೆ ಚಟುವಟಿಕೆಯಿಂದಿರುತ್ತಿದ್ದಳು. ಅವಳ ಅಂಗ್ರೇಜಿ ಭಾಷೆಯಲ್ಲಿ ಅಕ್ಷರಗಳನ್ನು ನುಂಗಿ ಪದಗಳನ್ನು ಚೀವಿಂಗ್ ಗಮ್ನಂತೆ ಎಳೆಯುತ್ತಿದ್ದುದರಿಂದ ಮಾತುಗಳನ್ನು ಅರ್ಥೈಸಿಕೊಳ್ಳುವುದು ತುಂಬಾ ಕಠಿಣವಾಗುತ್ತಿತ್ತು. ನಮ್ಮ ಮೂಕ ವೇದನೆಯನ್ನು ಅರಿತ ಆಕೆ ಕೆಲವೊಂದಕ್ಕೆ Spelling ಗಳನ್ನು ಬಿಡಿಸಿ ಹೇಳಲು ಶುರು ಮಾಡಿದ ಮೇಲೆ ಕೆಲವು ಗಂಟೆಗಳನ್ನು ಕಳೆದ ನಂತರ ನಿಧಾನವಾಗಿ ಭಾಷೆ ಅರ್ಥವಾಗತೊಡಗಿತು. ಬ್ರಿಟಿಷ್ ಪ್ರಜೆಯೊಂದಿಗೆ ವೈವಾಹಿಕ ಜೀವನ ನಡೆಸುತ್ತಿರುವ ಆಕೆ ದೇಹವನ್ನು ಸಣ್ಣದಾಗಿಸಿಕೊಳ್ಳಲು ಮೆಣಸಿನಕಾಯಿ ತಿನ್ನುತ್ತೇನೆಂಬ ಮಾತು ಕೇಳಿ ಹೀಗೂ ಉಂಟೆ ಅನಿಸಿತು.
ರಷ್ಯಾ ಭಾಷೆಯಲ್ಲಿ ಪದವಿ ಪಡೆದಿದ್ದು, ಸ್ವಂತ ಆಸಕ್ತಿಯಿಂದ ಇಂಗ್ಲಿಷ್ ಕಲಿತಿದ್ದ ಆಕೆ, ನನ್ನೊಂದಿಗೆ ಸ್ನೇಹಿತರು ಕೇಳಿದ ಆ ದೇಶದ ಇತಿಹಾಸ ಪ್ರಜಾಪ್ರಭುತ್ವ ಸಂವಿಧಾನ, ಮಹಿಳಾ ಸ್ವಾತಂತ್ರ್ಯ , ಆರ್ಥಿಕತೆ, ಸ್ವಾವಲಂಬನೆ, ಪರಾವಲಂಬನೆ, ಸಾಮಾಜಿಕ ಜೀವನ, ಪ್ರವಾಸೋದ್ಯಮ, ಅಲ್ಲಿನ ಧರ್ಮ, ಸಂಬಂಧಗಳು, ನಿರ್ಬಂಧನೆಗಳು, ವಿವಾಹ ಪದ್ಧತಿ, ಶ್ರದ್ಧಾ ಕರ್ಯ, ಸ್ವತ್ತು, ಸಂಪಾದನೆ, ವಿತರಣೆ ಹೀಗೆ ಎಲ್ಲಾ ವಿಷಯಗಳ ಪ್ರಶ್ನೆಗಳಿಗು ತನಗೆ ತಿಳಿದಷ್ಟು ಗುಣಮಟ್ಟದಲ್ಲಿ ಸಹನೆಯಿಂದ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದಳು. ಅದನ್ನು ನಿಮ್ಮ ಮುಂದೆ ಹೇಳಲು ಬಯಸುತ್ತೇನೆ.
ಕೇವಲ 279 ವರ್ಷಗಳ ಇತಿಹಾಸವಿರುವ ಈ ಥೈಲ್ಯಾಂಡ್ ಎಂಬ ಪುಟ್ಟ ದೇಶದ ಜನಸಂಖ್ಯೆ ನಮ್ಮ ಕರ್ನಾಟಕ ರಾಜ್ಯದಷ್ಟು ಮಾತ್ರ. ಅಂದರೆ ಆರು ಕೋಟಿ, ವಿಸ್ತೀರ್ಣದಲ್ಲಿ ಮಾತ್ರ ದೊಡ್ಡದು. ಈ ೨೭೨ ವರ್ಷಗಳಲ್ಲಿ ಒಂಬತ್ತು ತಲೆಮಾರು ರಾಜ್ಯಾಡಳಿತ ನಡೆಸಿತು. ರಾಜ ಒಡೆತನದಿಂದ ಪ್ರಜಾಪ್ರಭುತ್ವದ ಕಡೆಗೆ ವಾಲಿ ಇಲ್ಲಿಗೆ 72 ವರ್ಷಗಳು ಸಂದಿವೆ. ಅಂದರೆ ರಾಜ ರಾಮ ಏಳು ಅಥವಾ ಎಂಟರ ಆಡಳಿತದ ಕಾಲದಲ್ಲಿ ಪ್ರಜಾಪ್ರಭುತ್ವ ಸಿಕ್ಕಿದೆ. ವಿಶೇಷವೆಂದರೆ ಈ ನಾಡು ಚಿಕ್ಕದಾಗಿದ್ದರೂ ಅನ್ಯ ದೇಶದ ಅಧಿಪತ್ಯಕ್ಕೆ ಒಳಗಾಗದಿರುವುದು. ಈ ನಾಡನ್ನು ಹಿಂದೆ ಸುಖೋತಾಯ್, ಅಯ್ಯೋತಾಯ್, ಸಿಯಾಮ್ ಎಂಬುದಾಗಿ ಕರೆಯುತ್ತಿದ್ದರು. ನಂತರ ಥೈಲ್ಯಾಂಡ್ ಆಯಿತು.
ಈ ಹೆಸರುಗಳು ಸಹ ಅರ್ಥಗರ್ಭಿತ ಮತ್ತು ಸ್ವಾರಸ್ಯಕರವಾಗಿವೆ. ತಾಯ್ ಭಾಷೆಯಲ್ಲಿ ತಾಯ್ ಅಂದರೆ Freedom ಎಂದೂ ವಿದೇಶಿಗರು ಅದನ್ನು Freedom land ಎಂದು ಕರೆದಿದ್ದರಿಂದ ತಾಯ್ಲ್ಯಾಂಡ್ ಆಗಿ ನಾಮಕರಣಗೊಂಡಿತು. ಕಾಲಕ್ರಮೇಣ ಥೈಲ್ಯಾಂಡ್ ಆಯಿತು.

ಪ್ರೇಕ್ಷಣೀಯ ಸ್ಥಳಗಳು, ಅರಮನೆಗಳು ಎಲ್ಲವನ್ನೂ ನೋಡುತ್ತಾ ಪ್ರವಾಸದ ವಾಹನದಲ್ಲಿ ಚಲಿಸುತ್ತಿದ್ದಾಗ ಅಲ್ಲಿನ ಎಫ್.ಎಂ. ರೇಡಿಯೋದಲ್ಲಿ ಕುಕ್ಕು ಕುಕ್ಕು ಕುಕ್ಕು ಎಂಬ ಮುಕುಟದೊಂದಿಗೆ ನಾದಭರಿತ ಹಾಡು ಕೇಳಿತು. ಅದರ ಬಗ್ಗೆ ಚಾಲಕನನ್ನು ವಿಚಾರಿಸಿದ್ದಕ್ಕೆ ಕುಕ್ಕೂ ಅಂದರೆ ಚಿಂತೆ ಎಂದು, ಅವರ ಭಾಷೆಯಲ್ಲಿ ಅವರ ರಾಜಧಾನಿಯನ್ನು ಬಂಗ್ ಕುಕ್ಕು ಎಂದು ಕರೆಯುವುದಾಗಿಯೂ ಅದರ ಅರ್ಥ ‘‘No worry’ ಚಿಂತೆ ಇಲ್ಲ ಎಂದು ಅದು ಕಾಲಕ್ರಮೇಣ Bangcock (ಬ್ಯಾಂಗ್ ಕಾಕ್) ಆಯಿತು ಎಂದು ತಿಳಿಸಿದ. ಅಂದರೆ ಅಂದಿನ ಬೆಂದಕಾಳೂರು ಇಂದು ಬೆಂಗಳೂರು ಆದ ಹಾಗಾಯ್ತು.
ಅಲ್ಲಿನ ಮೊದಲನೆ ರಾಜ ರಾಮನಿಗೆ ಎಪತ್ತೆರಡು ಜನ ಹೆಂಡತಿಯರು. ಇಂದಿನ ರಾಜ 9ನೇ ರಾಮನಿಗೆ ಒಬ್ಬಳೇ ಹೆಂಡತಿ. ರಾಜ ಐದನೇ ರಾಮನನ್ನು ಇಂದಿಗೂ ಎಲ್ಲರೂ ನೆನೆಯುತ್ತಾರೆ. ಅವನ ಕಾಲದಲ್ಲಿ ಆದ ಅಭಿವೃದ್ಧಿ ಕೆಲಸಗಳು ಇಂದಿಗೂ ಮಾದರಿ ಮತ್ತು ಆಗ ಉತ್ತರ ಪಶ್ಚಿಮಕ್ಕಿದ್ದ ಬರ್ಮ ಹಾಗೂ ದಕ್ಷಿಣಕ್ಕಿದ್ದ ಫ್ರೆಂಚ್ ಆಡಳಿತಶಾಹಿ ಕಪಿಮುಷ್ಠಿಯಿಂದ ತಮ್ಮ ದೇಶವನ್ನು ಚಾಣಾಕ್ಷವಾಗಿ, ಬರ್ಮ ದೇಶದ ಕಾಡುಗಳಿಗೆ ಅತ್ಯವಶ್ಯಕವಾಗಿದ್ದ ಆನೆಗಳನ್ನು ನೀಡಿ, ಫ್ರೆಂಚರಿಗೆ ಸ್ವಲ್ಪ ಭೂಮಿಯನ್ನು ಕೊಟ್ಟು ತಮ್ಮ ರಾಜ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದರಿಂದ ಅವನನ್ನು ಬುದ್ಧಿವಂತ ಮಹಾರಾಜ ಎಂದೇ ಕರೆಯುವರು. ಹಾಗಾಗಿ ಅವನ ನೆನಪಿಗಾಗಿ ಆ ರಾಜ ಬಳಸಿದ ವಸ್ತುಗಳೆಲ್ಲವನ್ನು ಕೆಂಪು ತೇಗದ ಅರಮನೆಯಲ್ಲಿ ಸಂರಕ್ಷಿಸಿ ಇಡಲಾಗಿದೆ ಮತ್ತು ಅವನ ಹೆಸರಿನಲ್ಲಿ ಸುಂದರವಾದ ಸ್ತೂಪವನ್ನು ನಿರ್ಮಿಸಿದ್ದಾರೆ.
ಈಗ ಇಲ್ಲಿನ ಪ್ರಧಾನಮಂತ್ರಿಯನ್ನು ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಚುನಾಯಿಸುತ್ತಾರೆ. ಅಲ್ಲಿನ ಪ್ರಧಾನಿ ಯಾವುದೇ ಬ್ಯಾನರ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಂದಿನ ರಾಜ 9ನೇ ರಾಮನ ಚಿತ್ರಪುಟಗಳೇ ಎಲ್ಲೆಡೆ ರಾರಾಜಿಸುತ್ತವೆ. ರಾಜರೆಂದರೆ ಅಲ್ಲಿನ ಜನರಿಗೆ ತುಂಬಾ ಗೌರವ.
ನಾನು ಮೊದಲೇ ಹೇಳಿದ ಹಾಗೆ ಅಲ್ಲಿನ ಧರ್ಮ `ಬೌದ್ಧ’ ಧರ್ಮ. ಭಾರತೀಯರನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ. ಕಾರಣ ಬುದ್ಧ ಹುಟ್ಟಿದ್ದು, ಬುದ್ಧನಿಗೆ ಜ್ಞಾನೋದಯವಾಗಿದ್ದು ಮತ್ತು ಬುದ್ಧ ಕಾಲವಾಗಿದ್ದು ಭಾರತದಲ್ಲಿ. ಹಾಗಾಗಿ ಆತ್ಮೀಯತೆ. ಆದರೆ ಅಲ್ಲಿಗೆ ಪ್ರವಾಸಿಗರಾಗಿ ಹೋದ ಭಾರತೀಯರು ಎಲ್ಲೆಡೆ ಚೌಕಾಸಿ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬೇರೆ ಬೇರೆ ದೇಶಗಳ ಹಲವು ಭಂಗಿಯ ಬುದ್ಧನ ವಿಗ್ರಹಗಳನ್ನು ಅಲ್ಲಿ ಕಾಣಬಹುದು. ಅಲ್ಲಿನ ದೇವಾಲಯಗಳ ಹೊಸ್ತಿಲನ್ನು ತುಳಿಯುವ ಹಾಗಿಲ್ಲ. ಬುದ್ಧನಿಗೆ ಮಾತ್ರ ಪರಮ ಭಕ್ತರು. ವಿಗ್ರಹಕ್ಕೆ ತಾವರೆ ಹೂ ಇಡುವರು. ಇಲ್ಲವಾದಲ್ಲಿ ಮೂರು ಅಗರಬತ್ತಿಗಳನ್ನು ಹಚ್ಚಿಡುವರು. ಮೂರು ಏಕೆ ಎಂದು ನಮ್ಮ ಮಾರ್ಗದರ್ಶಕಿಯನ್ನು ಕೇಳಿದ್ದಕ್ಕೆ,
Buddha is Clever or Intelligent
Buddha is Compossionate or Forgive
Buddha is for Peace or Meditative
ಎಂದು ಉತ್ತರಿಸಿದಳು.

ಕ್ರಿ.ಪೂ. 200-600 ಕ್ಕಿಂತ ಮೊದಲು ಶ್ರೀಲಂಕಾದಿಂದ ಬಂದ ಬೌದ್ಧ ಗುರುಗಳು ಬುದ್ಧನ ಧರ್ಮವನ್ನು ಸಾರಿದರು. ಇಲ್ಲಿನ ಜನ ಅದನ್ನು ಅನುಕರಿಸಿದರು. ಪ್ರಸ್ತುತದಲ್ಲಿ ಬುದ್ಧನೆ ಇವರ ಆರಾಧ್ಯ ದೇವ ಮತ್ತು ಬೌದ್ಧ ಗುರುಗಳೇ ಇವರ ಗುರುಗಳು. ವಿವಿಧ ಮನೋವ್ಯಾಧಿಗಳಿಗೂ ಗುರುಗಳ ಧ್ಯಾನ ಔಷಧಿಯಾಗಿದೆ.
ಅಲ್ಲಿನ ಹಣ್ಣು ಸಿಹಿ ಹಾಗೂ ರುಚಿ. ಹೆಣ್ಣು ಶ್ರಮಜೀವಿ ಮತ್ತು ಸೌಂದರ್ಯವತಿ. ಶೇ. 7೦ ರಷ್ಟು ವ್ಯವಹಾರವನ್ನು ಹೆಣ್ಣು ನೋಡಿಕೊಳ್ಳುತ್ತಾಳೆ. ಇದನ್ನು ದಕ್ಷಿಣ ಹಾಗೂ ಪೂರ್ವ ರಾಷ್ಟ್ರಗಳಲ್ಲಿಯೂ ಕಾಣಬಹುದು.
ಎತ್ತ ಕಣ್ಣಾಯಿಸಿದರೂ Thai massage ಫಲಕಗಳೇ ರಾರಾಜಿಸುತ್ತವೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಪ್ರವಾಸಿಗನ ಬಾಳು ನರಕಯಾತನೆಯಾಗುವ ಸಾಧ್ಯತೆಗಳಿರುತ್ತವೆ. ನಶೆ ಪದಾರ್ಥಗಳು ಮತ್ತು ಭೂಗತ ಜಗತ್ತು ಇಲ್ಲಿನ ಮಿತಿಗಳು ಎನ್ನಬಹುದು.
ಅವರ ಸಂಸ್ಕೃತಿ, ವೇಷಭೂಷಣ, ರಾಮಾಯಣ, ಮಹಾಭಾರತ, ಬುದ್ಧನ ಬಗ್ಗೆ ಇರುವ ಗೌರವ ಭಾರತೀಯರನ್ನು ನಾಚಿಸುವಂತಹದ್ದಾಗಿದೆ. ನಮ್ಮ ನಂಬಿಕೆಯ ಮಹಾನ್ ಶಕ್ತಿ ರಾಜರಾಜೇಶ್ವರಿಯನ್ನು ಅಲ್ಲಿನ ಹೆಣ್ಣು ಮಕ್ಕಳಲ್ಲಿ ಕಾಣಬಹುದಾಗಿದೆ.
ಅಲ್ಲಿ ವೇಶ್ಯಾವಾಟಿಕೆ ಒಂದು ಮುಖ್ಯ ವೃತ್ತಿ. ಆದರೆ ಕಾನೂನುಬಾಹಿರ. ಬುದ್ಧನು ಮಹಾನ್ ಅಹಿಂಸಾ ದೇವ. ಆದರೆ ಅಲ್ಲಿನ ಜನ ಮಾಂಸಾಹಾರಿಗಳು. ಕಾರಣ ಕೇಳಿದ್ದಕ್ಕೆ ಎಲ್ಲವನ್ನೂ ಲವಲವಿಕೆಯಿಂದ ನಿಖರವಾಗಿ ಉತ್ತರ ಹೇಳುತ್ತಿದ್ದವಳು ಈ ವಿಷಯಕ್ಕೆ ನಿರುತ್ತರ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

