ಹಾಸನ – ಒಂದು ದೇಶದ ಹಿರಿಮೆ ಆ ದೇಶದಲ್ಲಿ ವಾಸಿಸುತ್ತಿರುವ ವಿದ್ಯಾವಂತರನ್ನು ಅವಲಂಬಿಸಿದೆ ಎಂದು ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾoಶುಪಾಲ ಡಾ ಆದರ್ಶ ಅಭಿಪ್ರಾಯಪಟ್ಟರು.
ಆಚಾರ್ಯ ಕಾಮರ್ಸ್ ಕಾಲೇಜಿನವರು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನ್ನಾಡುತ್ತ ಇಂದು ವಾಣಿಜ್ಯ ಶಾಸ್ತ್ರವನ್ನು ಕಲಿತ ಪದವೀಧರರಿಗೆ ಬಹಳಷ್ಟು ಅವಕಾಶಗಳಿವೆ.ಈ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಿಬಹುದು.ಸಮಾಜಕ್ಕೆ ಹಾಗೂ ನಿಮ್ಮ ಕುಟುಂಬದ ನಡುವೆ ಜೀವಿಸುತ್ತಿರುವ ಯುವಶಕ್ತಿ ದೇಶದ ಆಸ್ತಿಯಾಗಿ ಬದುಕಬಹುದು ಎಂದು ಮಾರ್ಮಿಕವಾಗಿ ನುಡಿದರು. ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷವೂ ಪ್ರತಿಶತ ನೂರರಷ್ಟು ಫಲಿತಾಂಶ ಬರುತ್ತಿದೆ ಹಾಗಾಗಿ ದಾಖಲಾತಿ ಆರೋಗ್ಯಕರವಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ್ ಮಾತನಾಡುತ್ತಾ ಪಿಯುಸಿ ನಂತರ ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಸೇರ್ಪಡೆ ಹೊಂದಿ ಪದವಿಯನ್ನು ಪಡೆದ ನಂತರ ಹಲವಾರು ಉದ್ಯೋಗಗಳನ್ನು ಹರಸಿ ಯಾವುದಾದರೂ ಒಂದು ಉದ್ಯೋಗವನ್ನು ಗಿಟ್ಟಿಸಿಕೊಳ್ಳುವಿರಿ.
ದ್ವಿತೀಯ ಪಿಯುಸಿ ನಿಮ್ಮ ಮುಂದಿನ ಜೀವನದ ಪರ್ವಕಾಲ. ಈ ಸಮಯದಲ್ಲಿ ನೀವು ತೆಗೆದುಕೊಂಡ ನಿರ್ಧಾರ ನಿಮ್ಮನ್ನು ಆ ನಿಟ್ಟಿನಲ್ಲಿ ಕೊಂಡೊಯ್ಯಬಲ್ಲದು. ನೀವು ತೆಗೆದುಕೊಳ್ಳುವ ನಿರ್ಧಾರ ಒಳ್ಳೆಯದಾಗಿರಬೇಕಷ್ಟೆ. ಕೇವಲ ನಿರ್ಧಾರ ತೆಗೆದುಕೊಂಡರೆ ಸಾಲದು ಅದನ್ನು ಬೆನ್ನಟ್ಟಬೇಕು ಆಗ ಮಾತ್ರ ನಿಮ್ಮ ಗುರಿ ಸಾಧಿತವಾಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾದ ಹಾಸನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಹರೀಶ್ ಗೌಡ ಕೆ ಆರ್ ಮಾತನಾಡುತ್ತಾ ನಾವು ಕಲಿತ ವಿದ್ಯೆ ಕೇವಲ ನಮ್ಮನ್ನಷ್ಟೇ ಉದ್ದಾರ ಮಾಡಲು ಅಲ್ಲ ಇದು ಸಮಾಜೋದ್ಧಾರಕ್ಕೆ ಪೂರಕವಾಗಿರಬೇಕು. ಆಗ ಮಾತ್ರ ನಿಜವಾದ ವಿದ್ಯಾವಂತ ಎಂದೆನಿಸಿಕೊಳ್ಳಲು ಸಾಧ್ಯ. ವಿದ್ಯಾಭ್ಯಾಸವೆಂದರೆ ಕೇವಲ ಪಠ್ಯಪುಸ್ತಕದ ಶಿಕ್ಷಣವಲ್ಲ. ಅದರ ಆಚೆ ಸುಸಂಸ್ಕೃತ ತಿಳುವಳಿಕೆಯನ್ನು ಪಡೆದುಕೊಂಡು ಸಮಾಜದ ಆಸ್ತಿಯಾಗಿ ಬದಲಾಗುವುದು ಎಂದರ್ಥ ಎಂದು ನುಡಿದರು.

ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ವಿದಾಯದಿನದ ಪ್ರಯುಕ್ತ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿದ್ದರು ಈ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವುದರೊಂದಿಗೆ ಸಂಪನ್ನಗೊಂಡಿತು.
