ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯ ನಾಲ್ಕೂ ಕಾರಿಡಾರ್ಗಳನ್ನು 2030ರೊಳಗೆ ಪೂರ್ಣಗೊಳಿಸುವ ಹೊಸ ಗುರಿಯನ್ನು ಕೆ–ರೈಡ್ (K-RIDE) ನಿಗದಿಪಡಿಸಿದೆ. ಎರಡನೇ ಕಾರಿಡಾರ್ನ ಚಿಕ್ಕಬಾಣಾವರ–ಯಶವಂತಪುರ ವಿಭಾಗದಲ್ಲಿ 2027ರ ಡಿಸೆಂಬರ್ ಒಳಗೆ ಮೊದಲ ರೈಲು ಸಂಚರಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು 2022ರ ಆಗಸ್ಟ್ನಲ್ಲಿ ಯೋಜನೆಗೆ ಚಾಲನೆ ನೀಡುವ ವೇಳೆ 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಘೋಷಿಸಿದ್ದರು. ಆದರೆ 2025ರ ಡಿಸೆಂಬರ್ಗೆ ಮುಕ್ತಾಯವಾಗಬೇಕಿದ್ದ ಗಡುವು ಹಲವು ಕಾರಣಗಳಿಂದ ತಪ್ಪಿದೆ. ಕಾಯಂ ವ್ಯವಸ್ಥಾಪಕ ನಿರ್ದೇಶಕರ ಕೊರತೆ, ತಾಂತ್ರಿಕ ಪರಿಣತಿ ಇಲ್ಲದವರಿಗೆ ಜವಾಬ್ದಾರಿ ನೀಡಿರುವುದು, ಗುತ್ತಿಗೆ ಕಂಪನಿಗಳ ನಿಧಾನಗತಿ ಹಾಗೂ ಕೆಲವು ಗುತ್ತಿಗೆದಾರರು ಯೋಜನೆಯಿಂದ ಹಿಂದೆ ಸರಿದಿರುವುದು ವಿಳಂಬಕ್ಕೆ ಕಾರಣಗಳಾಗಿವೆ.
ಭಾರತೀಯ ರೈಲ್ವೆ ಸೇವೆಯ ಎಂಜಿನಿಯರ್ (ಐಆರ್ಎಸ್ಇ) ಲಕ್ಷ್ಮಣ್ ಸಿಂಗ್ ಅವರು ಕಾಯಂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಜನೆಗೆ ಹೊಸ ನಿರೀಕ್ಷೆ ಮೂಡಿದೆ. ಅವರು ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ ಎಂದು ಯೋಜನಾ ಆಸಕ್ತರು ತಿಳಿಸಿದ್ದಾರೆ.
ಕಾರಿಡಾರ್–2ರ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗವನ್ನು 2029ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿರುವ ಅವರು, ಇದೇ ಕಾರಿಡಾರ್ನ ಮೊದಲ 7 ಕಿ.ಮೀ. ಭಾಗವನ್ನು ಮುಂದಿನ ವರ್ಷದ ಅಂತ್ಯದೊಳಗೆ ಆರಂಭಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದಾಗಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. 2030ರ ವೇಳೆಗೆ ಎಲ್ಲಾ ಕಾರಿಡಾರ್ಗಳು ಪೂರ್ಣಗೊಳ್ಳುವಂತೆ ಕೆ–ರೈಡ್ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

“ಮೊದಲು ನಿಗದಿಪಡಿಸಿದ್ದ ಗಡುವು ಕಡಿಮೆಯಾಗಿತ್ತು. ವಿವಿಧ ಕಾರಣಗಳಿಂದ ವಿಳಂಬ ಉಂಟಾಗಿದೆ. ಸ್ವಲ್ಪ ಹೆಚ್ಚುವರಿ ಅವಧಿಯನ್ನು ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವ ಸವಾಲು ನಮ್ಮ ಮುಂದೆ ಇದೆ. ಕೆ–ರೈಡ್ ಕಾರ್ಯವು ಕೇವಲ ರೈಲು ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಲ್ಲ; ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರೊಂದಿಗೆ ನಿರಂತರ ಸಂಪರ್ಕದ ಮೂಲಕ ಸಾರ್ವಜನಿಕ ವಿಶ್ವಾಸ ಬೆಳೆಸುವುದು ನಮ್ಮ ಉದ್ದೇಶ. ದೀರ್ಘಕಾಲೀನ ಸುಸ್ಥಿರತೆಯಲ್ಲೂ ಕೆ–ರೈಡ್ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
‘ಸಂಪರ್ಕ’ ಸುದ್ದಿ ಪತ್ರಿಕೆ ಬಿಡುಗಡೆ
ಯೋಜನೆಯ ಪ್ರಗತಿ ಮತ್ತು ಪ್ರಮುಖ ಮೈಲುಗಲ್ಲುಗಳ ಮಾಹಿತಿ ನೀಡುವ ಕೆ–ರೈಡ್ನ ಸುದ್ದಿ ಪತ್ರಿಕೆ ‘ಸಂಪರ್ಕ’ವು ಸುಮಾರು ಒಂದು ವರ್ಷದ ಬಳಿಕ ಬುಧವಾರ ಪುನರ್ಬಿಡುಗಡೆಯಾಗಿದೆ. https://kride.in/samparka-newsletter ವೆಬ್ಸೈಟ್ನಲ್ಲಿ ಮಾಹಿತಿ ಲಭ್ಯವಿದ್ದು, ಮುದ್ರಿತ ಪ್ರತಿಯನ್ನು ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೆ–ರೈಡ್ ನಿರ್ದೇಶಕರಾದ ರಾಜೇಶ್ ಕುಮಾರ್ ಸಿಂಗ್, ಅವದೇಶ್ ಮೆಹ್ತಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎರಡನೇ ಹಂತದ ವಿಸ್ತರಣೆಗೆ ಬೇಡಿಕೆ
ಮೊದಲ ಹಂತದ ನಾಲ್ಕು ಕಾರಿಡಾರ್ಗಳ ಕಾಮಗಾರಿ ವಿಳಂಬವಾದರೂ ಮೆಟ್ರೊ ಸೇರಿದಂತೆ ಇತರೆ ಸಾರಿಗೆ ಸಂಪರ್ಕಗಳಿರುವುದರಿಂದ ಹೆಚ್ಚಿನ ತೊಂದರೆ ಆಗಿಲ್ಲ. ಆದರೆ ಬೆಂಗಳೂರಿಗೆ ಸಮೀಪದ ಕೋಲಾರ, ಬಂಗಾರಪೇಟೆ, ತುಮಕೂರು, ಮಾಗಡಿ, ಹೊಸೂರು ಮತ್ತು ಗೌರಿಬಿದನೂರುವರೆಗೆ ಉಪನಗರ ರೈಲು ವಿಸ್ತರಣೆಗಾಗಿ ಎರಡನೇ ಹಂತದ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದರಿಂದ ಜನಸಂಚಾರ ಉಪನಗರಗಳಿಗೆ ವಿಸ್ತರಿಸಿ ನಗರದಲ್ಲಿನ ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
