ಕೊರಟಗೆರೆ:- ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಕೊರಟಗೆರೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಗಾಯನ ನಮನ’ ಕಾರ್ಯಕ್ರಮದಲ್ಲಿ ಕಲಾವಿದರು ಅವರ ಅಮರ ಗೀತೆಗಳನ್ನು ಹಾಡುವ ಮೂಲಕ ಭಾವಪೂರ್ಣ ಸಂಗೀತ ನಮನ ಸಲ್ಲಿಸಿದರು.
ಕೊರಟಗೆರೆ ತಾಲ್ಲೂಕು ಕಲಾವಿದರು, ಸಂಕಲ್ಪ ಚಾರಿಟೇಬಲ್ ಟ್ರಸ್ಟ್, ಸ್ನೇಹ ಮೆಲೋಡಿ ಆರ್ಕೆಸ್ಟ್ರಾ ಹಾಗೂ ಕುರಂಗರಾಜು ಕುಟುಂಬದವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಸಂಕಲ್ಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸುಮಾರು 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡುವ ಮೂಲಕ ಎಸ್. ಜಾನಕಿ ಭಾರತೀಯ ಸಂಗೀತ ಲೋಕದಲ್ಲಿ ಅಜರಾಮರ ಸಾಧನೆ ಮಾಡಿದ್ದಾರೆ. ಅವರ ಸುಮಧುರ ಗಾಯನ ಇಂದಿಗೂ ಸಂಗೀತಾಸಕ್ತರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು, ಅವರ ಸಾಧನೆ ಪ್ರತಿಯೊಬ್ಬ ಕಲಾವಿದರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಮಣಿಕಂಠ ಸ್ವಾಮಿ ಮಾತನಾಡಿ, ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ. ಎಸ್. ಜಾನಕಿ ಅವರ ಗಾಯನ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು, ಅವರ ಜೀವನ ಮತ್ತು ಸಾಧನೆ ಯುವ ಕಲಾವಿದರಿಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ಗಾಯಕಿ ರತ್ನಮ್ಮ ಮಾತನಾಡಿ, ಎಸ್. ಜಾನಕಿ ಅವರ ಹಾಡುಗಳು ಪ್ರತಿಯೊಬ್ಬ ಗಾಯಕರಿಗೂ ಮಾರ್ಗದರ್ಶಕವಾಗಿದ್ದು, ಅವರ ಗಾಯನ ಶೈಲಿ ಮತ್ತು ಭಾವಾಭಿವ್ಯಕ್ತಿ ಸದಾ ಮಾದರಿಯಾಗಿದೆ ಎಂದು ಹೇಳಿದರು.
ಕಲಾವಿದ ರಾಮಣ್ಣ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ನಂತರ ಸ್ಥಳೀಯ ಗಾಯಕ–ಗಾಯಕಿಯರು ಎಸ್. ಜಾನಕಿ ಅವರು ಹಾಡಿದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ರಂಜಿಸಿದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕುರಂಗರಾಜು ಕುಟುಂಬದವರ ವತಿಯಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು. ಉಳಿದ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ಸ್ನೇಹ ಮೆಲೋಡಿ ಆರ್ಕೆಸ್ಟ್ರಾ ಸಂಸ್ಥೆಯ ಮಾಲೀಕರು, ನಟರಾಜು, ವೆಂಕಟೇಶ್, ಕುರಂಗರಾಜು ಕುಟುಂಬದ ಹನುಮಂತಮ್ಮ, ರಾಘವೇಂದ್ರ, ಧನುಷ್ ಕುರಂಗ, ಕಾರ್ತಿಕ್ ಕುರಂಗ, ವಿಘ್ನೇಶ್, ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯರು ಮತ್ತು ಯುವ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿ ಗಾನಕೋಗಿಲೆ ಎಸ್. ಜಾನಕಿ ಅವರ ಅಮರ ಗಾಯನವನ್ನು ಸ್ಮರಿಸಿ ಭಾವಪೂರ್ಣ ನಮನ ಸಲ್ಲಿಸಿದರು.
– ಶ್ರೀನಿವಾಸ್ ಕೊರಟಗೆರೆ.
