ಬೆಳಗಾವಿ: ಎರಡು ಕಂಟೇನರ್ನಲ್ಲಿ ಅಕ್ರಮವಾಗಿ 400 ಕೋಟಿ ರೂ. ಸಾಗಿಸಿದ ಪ್ರಕರಣವೊಂದು ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ನಡೆದಿರುವ ದೇಶದ ಅತಿದೊಡ್ಡ ದರೋಡೆ ಕೇಸ್ ಎನ್ನಲಾಗಿದೆ. ಸದ್ಯ ಈ ಕೇಸ್ ಬೆನ್ನತ್ತಿರುವ ಖಾಕಿ ಪಡೆಗೆ ಇದೆಲ್ಲಿಂದ ಆರಂಭವಾಯಿತು?
ಯಾವಾಗ ಸಂಭವಿಸಿತು? ಎಂಬ ಸಂಪೂರ್ಣ ಚಿತ್ರಣ ಈಗಾಗಲೇ ಲಭಿಸಿದೆ. ಈ ಮಧ್ಯೆ, ಬೆಳಗಾವಿಯ ಎಸ್ಪಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ಬೆಳಗಾವಿ ಎಸ್ಪಿ ಕಚೇರಿಗೆ ಜ.6ರಂದು ಮಹಾರಾಷ್ಟ್ರದ ನಾಸಿಕ ಜಿಲ್ಲಾ ವರಿಷ್ಠಾಧಿಕಾರಿ ಪತ್ರ ಬರೆದಿದ್ದಾರೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚೋರ್ಲಾ ಘಾಟ್ ಬಳಿ ಒಂದು 400 ಕೋಟಿ ರೂಪಾಯಿ ರಾಬರಿ ಆಗಿರುವ ಮಾಹಿತಿ ನಮಗೆ ಲಭಿಸಿತು. ಕೇಸ್ ಬಗ್ಗೆ ಸಂದೀಪ್ ಪಾಟೀಲ ಎಂಬುವವರು ನಾಶಿಕ್ ಪೊಲೀಸರಿಗೆ ದೂರು ನೀಡುವ ಮೂಲಕ ಘಟನೆಯನ್ನು ಬೆಳಕಿಗೆ ತಂದಿದ್ದಾರೆ” ಎಂದರು.
ಅಕ್ಟೋಬರ್ 22ರಂದು ಕಿಡ್ನ್ಯಾಪ್
“ಕಳೆದ ವರ್ಷ ಅಕ್ಟೋಬರ್ 22ರಂದು ವಿಶಾಲ ನಾಯ್ಡು ಎನ್ನುವ ವ್ಯಕ್ತಿ ತನ್ನನ್ನು ಕಿಡ್ನಾಪ್ ಮಾಡಿದ ಬಗ್ಗೆ ಸಂದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿರಾಟ ಗಾಂಧಿ ಎಂಬಾತನ ಸೂಚನೆಯ ಮೇರೆಗೆ ಸಂದೀಪ್ ಪಾಟೀಲ್ರನ್ನು ಕರೆದಿರುತ್ತಾರೆ. ಈ ವೇಳೆ ವಿಶಾಲ್ ಮತ್ತು ಆತನ ಸಹಚರರು ತಮ್ಮ ಪಾರ್ಚೂನರ್ ಕಾರಿನಲ್ಲಿ ಪಾಟೀಲ್ರನ್ನು ಅಪಹರಿಸಿದ್ದರು. ಆ ನಂತರ ಕಂಟೇನರ್ ಕಳ್ಳತನ ಆರೋಪವನ್ನು ಹೊತ್ತುಕೊಳ್ಳುವಂತೆ ಒತ್ತಾಯಿಸಿದ್ದಾರೆ” ಎಂದರು.
“ಕಂಟೇನರ್ ಕಳ್ಳತನ ಒಪ್ಪಿಕೊಳ್ಳುವಂತೆ ಹಲ್ಲೆಗೈದಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೊರ ಬಂದಿರುವ ಸಂದೀಪ್, ನೇರವಾಗಿ ನಾಶಿಕ್ ಪೊಲೀಸರಿಗೆ ದೂರು ಸಲ್ಲಿಸಿದ. ಕಿಡ್ನ್ಯಾಪ್ ಮಾಡಿದಾಗ ಈ 400 ಕೋಟಿ ರೂ. ರಾಬರಿ ಮಾಡಿರುವುದು ಪ್ರಸ್ತಾಪ ಮಾಡಿದ್ದರಂತೆ. ಇದೇ ವಿಷಯವನ್ನು ಸಂದೀಪ್, ನಾಶಿಕ್ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಮಗೂ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ” ಎಂದು ಹೇಳಿದರು.
ಐ ವಿಟ್ನೆಸ್
“ಸದ್ಯದ ಬೆಳವಣಿಗೆಯಲ್ಲಿ ದರೋಡೆ ಕೇಸ್ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದೆ. ಇದಕ್ಕೆ ತಂಡ ರಚನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಮಗೆ ಬಂಧಿತರ ವಿಚಾರಣೆಗೆ ಅವಕಾಶ ಸಿಕ್ಕಿಲ್ಲ. ಈ ಕುರಿತಂತೆ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ಸಹಕಾರ ಕೊಡಲಿಕೆ ನಾವು ರೆಡಿ ಇದ್ದೇವೆ ಎಂದು ಪತ್ರ ಬರೆದಿದ್ದೇನೆ. ಭಾರತೀಯ ಸಾಕ್ಷಿ ಅಧಿನಿಯಮ ಐ ವಿಟ್ನೆಸ್ (ನೋಡಿರುವವರು) ಬಂದ್ರೆ ಕೇಸ್ ದಾಖಲು ಮಾಡಿಕೊಳ್ಳುತ್ತೇವೆ. ಪ್ರಸ್ತುತ, ಈ ಕೇಸಲ್ಲಿ 198 ಬಿಎನ್ಎಸ್ಎಸ್ ದಾಖಲಾಗಿದೆ” ಎಂದು ಹೇಳಿದರು.
ಹಳೆ ನೋಟುಗಳು?
“ಸದ್ಯದ ಮಟ್ಟಿಗೆ ಮೂರು ರಾಜ್ಯಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ನಡೀತಿದೆ. ನಮ್ಮಲ್ಲಿ ಕೇಸ್ ಆಗಿರುವುದರಿಂದ ನಾವು ವಿಚಾರಣೆ ಮಾಡಲು ಸಿದ್ದರಿದ್ದೇವೆ. ಈ ಹಣ ಎಲ್ಲಿಂದ ಬಂತು? ಎಲ್ಲಿಗೆ ತಲುಪಲು ಹೊರಟ್ಟಿತ್ತು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. 400 ಕೋಟಿ ರೂ. ಹಳೇ ನೋಟುಗಳು ಎಂದು ನಾಶಿಕ್ ಪೊಲೀಸರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎಷ್ಟು ಮುಖ ಬೆಲೆಯ ಕರೆನ್ಸಿ ಎಂಬುದಿನ್ನು ಖಚಿತವಾಗಿಲ್ಲ. ಈ ಬಗ್ಗೆ ನಾವೂ ಸಮಗ್ರವಾಗಿ ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
