ಕೆ.ಆರ್.ಪೇಟೆ,ಜ.24 : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಶ್ರೀನಿವಾಸ್ ಅವರು ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣ ಹೊಂದುವ ಬಗ್ಗೆ ಹಾಗೂ ಉತ್ತಮ ಮಾನವೀಯ ಗುಣಗಳನ್ನು ಕಲಿತು ಸಂಸ್ಕಾರ ಪಡೆದುಕೊಂಡು ಜೀವನದಲ್ಲಿ ಉತ್ತೀರ್ಣ ಹೊಂದುವ ಬಗ್ಗೆ ಸತತ 1ಗಂಟೆಗಳ ವಿಶೇಷ ಉಪನ್ಯಾನ ನೀಡಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ಬೇರೆ ಕಡೆಗೆ ಆಕರ್ಷಿತರಾಗದೇ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಉತ್ರಮ ಅಂಕಗಳೊಂದಿಗೆ ಉತ್ತೀರ್ಣ ಹೊಂದುವ ಮೂಲಕ ಒಳ್ಳೆಯ ಹುದ್ದೆಗಳನ್ನು ಗಿಟ್ಡಿಸಬಹುದು.ಈ ಮೂಲಕ ನಮಗಿಂತಲೂ ಹೆಚ್ಚಿನ ಗೌರವ ಸಂಪಾದನೆ ಮಾಡಬಹುದು.ಶಿಕ್ಷಣ ಎಂಬುದು ಮನುಷ್ಯನ ಜ್ಞಾನಾರ್ಜನೆಗಾಗಿ ಲೋಕ ಜ್ಞಾನ ತಿಳಿದುಕೊಳ್ಳಲು ಅಗತ್ಯವಾಗಿದೆ. ಶಿಕ್ಷಣ ಕೇವಲ ಅಂಕ ಗಳಿಸಿ ಉದ್ಯೋಗ ಪಡೆದುಕೊಳ್ಳಲು ಅಲ್ಲ. ಶಿಕ್ಷಣ ಪಡೆದ ವ್ಯಕ್ತಿ ಇಡೀ ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಬದುಕುವ ಅರ್ಹತೆ ಮತ್ತು ಛಲ ಇರುತ್ತದೆ. ಆದರೆ ಶಿಕ್ಷಣ ಇಲ್ಲದ ವ್ಯಕ್ತಿಗಳು ಕತ್ತಲೆಯಲ್ಲಿ ಪಯಣ ಬೆಳೆಸಿದಂತೆ.

ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲಿ ಮೊಬೈಲ್, ಫೇಸ್ ಬುಕ್, ವಾಟ್ಸಪ್ ಗೀಳಿನಿಂದ ದೂರವಿರಬೇಕು. ಹಾಗಂತ ಮೊಬೈಲ್ ಬೇಡ ಎಂದು ಹೇಳಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಬಳಕೆ ಮಾಡಬೇಕು. ಯಾವಾಗಲೂ ಮೊಬೈಲ್ ದಾಸರಾಗಬಾರದು. ಸಾಧನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್, ಸರ್.ಎಂ.ವಿಶ್ವೇಶ್ವರಯ್ಯ ಮತ್ತಿತರ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಅವರಂತೆ ನಾವೇಕೆ ಸಾಧನೆ ಮಾಡಬಾರದು ಎಂಬ ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತಾ ತಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಉಪ ವಿಭಾಗಾಧಿಕಾರಿಗಳು ಮಕ್ಕಳಿಗೆ ಹಲವು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.
ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಗಾಧೆಯ ಮಾತಿನಂತೆ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು. ಅಂದು ಶಾಲೆಯಲ್ಲಿ ಗುರುಗಳು ಹೇಳಿಕೊಟ್ಟ ಪಾಠವನ್ನು ಅಂದೇ ಪುನರ್ ಮನನ ಮಾಡಿಕೊಂಡು ಒಂದೆರಡು ಭಾರಿ ಬರೆದು ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಸುಲಭವಾಗಿ ಚೆನ್ನಾಗಿ ಉತ್ತರ ಬರೆಯಬಹುದು. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶಿಕ್ಷಣವು ಪ್ರಬಲವಾದ ಶಕ್ತಿಯಾಗಿದೆ. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಲೋಕಜ್ಞಾನದ ಬಗ್ಗೆಯೂ ಅರಿವು ಹೊಂದಬೇಕು. ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಕ್ರೀಡಾ ಚಟುವಟಿಕೆ ಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಸಾಧನೆ ಮಾಡಿ ಗುರಿ ಮುಟ್ಟಬಹುದಾಗಿದೆ. ವಿದ್ಯಾರ್ಥಿ ಗಳು ನಾಗರೀಕ ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು ಸಮಾಜ ಮುಖಿಯಾಗಿ ಹೆಜ್ಜೆ ಹಾಕಬೇಕು. ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ರಾಘವೇಂದ್ರ ಕೆಪಿಎಸ್ ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:24.ಕೆ.ಆರ್.ಪಿ-02: ಕೆ.ಆರ್.ಪೇಟೆ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಶ್ರೀನಿವಾಸ್ ಅವರು ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣ ಹೊಂದುವ ಬಗ್ಗೆ ಹಾಗೂ ಉತ್ತಮ ಮಾನವೀಯ ಗುಣಗಳನ್ನು ಕಲಿತು ಸಂಸ್ಕಾರ ಪಡೆದುಕೊಂಡು ಜೀವನದಲ್ಲಿ ಉತ್ತೀರ್ಣ ಹೊಂದುವ ಬಗ್ಗೆ ಸತತ 1ಗಂಟೆಗಳ ವಿಶೇಷ ಉಪನ್ಯಾನ ನೀಡಿದರು.
ವರದಿ : ಶ್ರೀನಿವಾಸ್ ಆರ್
========================
