ಚನ್ನರಾಯಪಟ್ಟಣ: ಬಾಗಿವಾಳು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರ ವತಿಯಿಂದ ಉಚಿತ ಮೊಟ್ಟೆ ವಿತರಣೆ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀಯುತ ಭರತ್ ಕುಮಾರ್ ಹೆಚ್. ಜಿ ರವರು ಹಾಗೂ ವೇದಿಕೆ ಗಣ್ಯರು ಉದ್ಘಾಟಿಸಿದರು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ್ ಕುಮಾರ್ ಹೆಚ್. ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರವರು ಇಂದು ಹೊಸ ವರ್ಷದ ಅಂಗವಾಗಿ ನಮ್ಮ ಸಂಸ್ಥೆಯು ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರವನ್ನು ನೀಡುವುದರ ಮೂಲಕ ಆಚರಿಸುತ್ತಿದ್ದೇವೆ.
ಮಹಿಳೆಯರ ಜೀವನದಲ್ಲಿ ಗರ್ಭಿಣಿ ಸಂದರ್ಭವು ಅತಿ ಅಮೂಲ್ಯವಾದ ಸಮಯ, ಜೀವನದ ಅತಿ ದೊಡ್ಡ ಆಶಾಕಿರಣ ಹಾಗೂ ಭರವಸೆಯ ಬದುಕಾಗಿರುತ್ತದೆ, ಪ್ರತಿ ತಾಯಿಯು ತನ್ನ ನೋವನ್ನು ನುಂಗಿ ಇನ್ನೊಂದು ಜೀವಕ್ಕೆ ಜೀವ ನೀಡುತ್ತಾಳೆ ಅವಳ ತ್ಯಾಗಕ್ಕೆ ಕೋಟ್ಯಾನು ಕೋಟಿ ದೇವತೆಗಳೇ ತಲೆ ಬಾಗಿದ್ದಾರೆ ಇಂಥ ಒಂದು ಗರ್ಭಿಣಿ ಮಹಿಳೆಯರೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಿರುವುದು ನಮ್ಮ ಸಂಸ್ಥೆಗೆ ಕೃಷಿಯ ವಿಚಾರ ಎಂದು ತಿಳಿಸಿದರು, ಮತ್ತು ಬೇಸರದ ಸಂಗತಿ ಏನೆಂದರೆ ವಾಸ್ತವಿಕವಾಗಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಹಾಗೂ ಭರವಸೆಯನ್ನು ಕಳೆದುಕೊಂಡಿದ್ದಾರೆ, ಕಾರಣ ಏನೆಂದು ವಿವರಿಸಲು ಅಸಾಧ್ಯ, ಸರ್ಕಾರಿ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಗೆ ಅಭಿಪ್ರಾಯವೂ ಬದಲಾಗಬೇಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಅತ್ಯುತ್ತಮ ಜ್ಞಾನ ಭಂಡಾರವನ್ನು ಹೊಂದಿರುವ ವೈದ್ಯರಾಗಿರುತ್ತಾರೆ. ಇದರ ಬಗ್ಗೆ ಅನುಮಾನವೇ ಬೇಡ, ಸಾರ್ವಜನಿಕರು ಸರಕಾರದಿಂದ ದೊರಕುವ ಎಲ್ಲಾ ಆರೋಗ್ಯ ಚಿಕಿತ್ಸೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಸರ್ಕಾರಿ ಶಾಲೆಗಳು ಮುಚ್ಚಿದಂತೆ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚುವ ಸಂದರ್ಭವು ಎದುರಾಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಕೃತಿ ಆಡಳಿತ ವೈದ್ಯಧಿಕಾರಿಗಳು ಸರ್ಕಾರಿ ಆಸ್ಪತ್ರೆ ಬಾಗಿವಾಳು ರವರು ಮಾತನಾಡಿ ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರ ಮೂರು ವರ್ಷದಿಂದ ಹಲವಾರು ಆರೋಗ್ಯ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾನ್ಸರ್ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ನಮ್ಮ ಆಸ್ಪತ್ರೆಯಲ್ಲಿ ವಿಶೇಷವಾಗಿ ಆಚರಿಸುವ ಸೀಮಂತ ಕಾರ್ಯಕ್ರಮಗಳಿಗೆ ಮತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ ಸಹಕರಿಸುತ್ತಲೇ ಬಂದಿರುತ್ತಾರೆ. ಇವರ ಈ ಸೇವೆಯು ನೂರಾರು ಬಡವರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ, ಅದೇ ನಿಟ್ಟಿನಲ್ಲಿ ಇಂದು ನಮ್ಮ ಆಸ್ಪತ್ರೆಯ ಸುಮಾರು 25ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಮೊಟ್ಟೆಯನ್ನು ನೀಡಿದ್ದಾರೆ ಇವರಿಗೆ ನಮ್ಮ ಆಸ್ಪತ್ರೆಯ ವತಿಯಿಂದ ಧನ್ಯವಾದಗಳು ತಿಳಿಸಲು ಇಚ್ಛಿಸುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಯುತ ಜಬಿವುಲ್ಲಾ ಬೇಗ್ ಸಿ .ಎನ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರ ನಮ್ಮ ಸಂಸ್ಥೆಯು ಚನ್ನರಾಯಪಟ್ಟಣ ತಾಲೂಕಿನಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ, ನಮ್ಮ ಸಂಸ್ಥೆಯು ಅತಿ ಹೆಚ್ಚು ಆರೋಗ್ಯ ಶಿಬಿರ ಮತ್ತು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಕಿಶೋರ್ ಕುಮಾರ್ ಸಿ.ಎಸ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ, ಶ್ರೀ ನಟರಾಜ್ ನಿರ್ದೇಶಕರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ, ಶ್ರೀಮತಿ ತನುಜ ಪ್ರಯೋಗ ಶಾಲಾ ತಜ್ಞರು ಬಾಗಿವಾಳು ಆಸ್ಪತ್ರೆ ಹಾಗೂ ಆಶಾ ಕಾರ್ಯಕರ್ತರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.
– ಮಂಜುನಾಥ್ ಐ ಕೆ
