ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ‘ಗಗನಯಾನ’ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಮೊದಲ ಮಾನವರಹಿತ ಮಿಷನ್ (G1) ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಹಂತದ ಸಿದ್ಧತೆಗಳಲ್ಲಿ ತೊಡಗಿದೆ.
ಈ ಕುರಿತು ಇಸ್ರೋ ಮಹತ್ವದ ಮಾಹಿತಿ ನೀಡಿದ್ದು, ಮಾನವ ಸಂಚಾರಕ್ಕೆ ಅಗತ್ಯವಿರುವ ರಾಕೆಟ್ ಇಂಜಿನ್ಗಳ ಎಲ್ಲಾ ಪ್ರೊಪಲ್ಷನ್ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ತಿಳಿಸಿದೆ. ಇದು ಗಗನಯಾನ ಯೋಜನೆಯಲ್ಲಿನ ಪ್ರಮುಖ ಮೈಲಿಗಲ್ಲು ಎಂದು ಇಸ್ರೋ ಹೇಳಿದೆ.
8,000ಕ್ಕೂ ಹೆಚ್ಚು ನೆಲಮಟ್ಟದ ಪರೀಕ್ಷೆಗಳು
ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಮುನ್ನ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈವರೆಗೆ 8,000ಕ್ಕೂ ಹೆಚ್ಚು ನೆಲಮಟ್ಟದ (ಗ್ರೌಂಡ್ ಟೆಸ್ಟ್) ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರಲ್ಲಿ ರಚನಾತ್ಮಕ ಸಾಮರ್ಥ್ಯ, ಸಾಫ್ಟ್ವೇರ್ ಸಿಮ್ಯುಲೇಶನ್, ಪರಿಸರ ಮತ್ತು ಸುರಕ್ಷತಾ ಪರೀಕ್ಷೆಗಳು ಸೇರಿವೆ.
ಯೋಜನೆಯ ಪ್ರತಿಯೊಂದು ಹಂತದಲ್ಲೂ ಯಾವುದೇ ತಾಂತ್ರಿಕ ಲೋಪದೋಷಗಳು ಉಂಟಾಗದಂತೆ ನೋಡಿಕೊಳ್ಳಲು ‘ಇಂಟಿಗ್ರೇಟೆಡ್ ಮಿಷನ್ ರಿವ್ಯೂ ಕಮಿಟಿ’ಯನ್ನು ರಚಿಸಲಾಗಿದ್ದು, ಸಮಿತಿಯು ಎಲ್ಲಾ ಹಂತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ಬಾಹ್ಯಾಕಾಶಕ್ಕೆ ತೆರಳಲಿರುವ ‘ವ್ಯೋಮಮಿತ್ರ’
ಮುಂಬರುವ ಮಾರ್ಚ್ 2026ರಲ್ಲಿ ಗಗನಯಾನದ ಮೊದಲ ಹಂತದ ಮಾನವರಹಿತ ಮಿಷನ್ (G1) ಉಡಾವಣೆ ನಡೆಯುವ ಸಾಧ್ಯತೆಯಿದೆ. ಈ ಮಿಷನ್ನಲ್ಲಿ ಮಾನವರ ಬದಲಾಗಿ ‘ವ್ಯೋಮಮಿತ್ರ’ ಎಂಬ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಮೂರು ದಿನಗಳ ಕಾಲ ಸಂಚರಿಸುವ ಈ ಯಾನದಲ್ಲಿ ಜೀವ ರಕ್ಷಕ ವ್ಯವಸ್ಥೆಗಳು, ಮರು-ಪ್ರವೇಶ (ರೀ-ಎಂಟ್ರಿ) ಹಾಗೂ ಸಮುದ್ರದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಮರಳಿ ಪಡೆಯುವ ಪ್ರಕ್ರಿಯೆಗಳನ್ನು ಪರೀಕ್ಷಿಸಲಾಗುತ್ತದೆ.
2027ರಲ್ಲಿ ಮಾನವ ಸಹಿತ ಐತಿಹಾಸಿಕ ಯಾನ
ಯೋಜನೆಯ ವೇಳಾಪಟ್ಟಿಯಂತೆ, 2026ರ ಅಂತ್ಯದ ವೇಳೆಗೆ ಎರಡನೇ ಮಾನವರಹಿತ ಮಿಷನ್ (G2) ನಡೆಸಲು ಇಸ್ರೋ ಯೋಜಿಸಿದೆ. ಈ ಎರಡು ಪ್ರಯೋಗಗಳು ಯಶಸ್ವಿಯಾದ ಬಳಿಕ, 2027ರಲ್ಲಿ ಭಾರತದ ನಾಲ್ವರು ಗಗನಯಾನಿಗಳು—ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್ ಹಾಗೂ ಅಂಗದ್ ಪ್ರತಾಪ್—ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಮತ್ತು ತಾಂತ್ರಿಕ ಸವಾಲುಗಳಿಂದಾಗಿ ಕೆಲವಷ್ಟು ವಿಳಂಬಗೊಂಡಿದ್ದ ಗಗನಯಾನ ಯೋಜನೆ ಇದೀಗ ವೇಗ ಪಡೆದುಕೊಂಡಿದ್ದು, ಈ ಸಾಧನೆಯೊಂದಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಂಡ ವಿಶ್ವದ ಆಯ್ದ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ ಎಂಬ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ.
