ಮೂರ್ನಾಲ್ಕು ದಶಕಗಳ ಹಿಂದೆ ನಮ್ಮ ದೇಶದಲ್ಲಿ ತುಂಬಾ ಬಡತನವಿತ್ತು. ಹೊಟ್ಟೆ ಬಟ್ಟೆಗೆ ತತ್ವಾರದ ಸ್ಥಿತಿಯಿತ್ತು. ಈಗಿನಂತೆ ಪಡಿತರ ದವಸ ಧಾನ್ಯಗಳು, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಇತ್ಯಾದಿ ಯಾವುದೇ ಫ್ರೀಬೀಸ್ಗಳು ಇರಲಿಲ್ಲ. ನಮ್ಮ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರದಿದ್ಡ ಕಾಲಘಟ್ಟವದು. ಶಾಲೆಗಳಲ್ಲಿ ಅಮೇರಿಕಾ ದೇಶದಿಂದ ತರಿಸಿಕೊಳ್ಳುತ್ತಿದ್ದರೆನ್ನಲಾದ ದಪ್ಪ ಗೋಧಿ ನುಚ್ಚಿನಿಂದ ತಯಾರಿಸಿ ಮಧ್ಯಾಹ್ನದ ಉಪಾಹಾರವಾಗಿ ಮಕ್ಕಳಿಗೆ ಮೇಷ್ಟ್ರೇ ಸಿದ್ಧಪಡಿಸಿ ನೀಡುತ್ತಿದ್ದರು. ಮನೆಗಳಲ್ಲಿ ಕುಟುಂಬ ಯೋಜನೆಯ ತಿಳುವಳಿಕೆ ಇಲ್ಲದಿದ್ದ ಕಾರಣದಿಂದ ಮಕ್ಕಳ ಸಂಖ್ಯೆಯೂ ಹೆಚ್ಚಾಗಿಯೇ ಇತ್ತು.
ಅಪ್ಪನ ಎರಡು ಕೈಗಳ ಮೂರು ಕಾಸಿನ ದುಡಿಮೆಯು ಇಡೀ ಕುಟುಂಬದ ಹತ್ತಾರು ಬಾಯಿಗಳಿಗೆ ಸಾಕಾಗುತ್ತಿರಲಿಲ್ಲ. ಆಗಾಗ ಕಾಡುತ್ತಿದ್ದ ಕ್ಷಾಮ ಡಾಮರಗಳು ಬದುಕಿನ ಚಿತ್ರಣವನ್ನು ಬಣಗುಟ್ಟಿಸಿ ಹಸಿವಿನ ಹಾವು ಬುಸುಗುಟ್ಟುವಂತೆ ಮಾಡುತ್ತಿದ್ದವು. ಒಂದೊಪ್ಪತ್ತಿಗೆ ತಿಂದರೆ ಉಳಿದ ಒಪ್ಪತ್ತಿನ ಊಟಕ್ಕೆ ಕೊರತೆಯಾಗುತ್ತಿತ್ತು. ಹೆಚ್ಚಾಗಿ ಕಣಜಗಳಲ್ಲಿ ತುಂಬಿಸಿರುತ್ತಿದ್ದ ಜೋಳ, ಬೇಳೆ, ರಾಗಿಯಂತಹ ಆಹಾರ ಪದಾರ್ಥಗಳು ಮೂರ್ನಾಲ್ಕು ತಿಂಗಳಿಗೆ ಖಾಲಿಯಾಗಿ ವರ್ಷದ ಕೊನೆಯ ಹೊತ್ತಿಗೆ ಉಳ್ಳವರ ಮನೆ ಬಾಗಿಲಿಗೆ ಹೋಗಿ ಸಾಲವಾಗಿ ಪಡೆಯುವುದು ತೀರಾ ಸಾಮಾನ್ಯವಾಗಿರುತ್ತಿತ್ತು. ಮನೆಯಲ್ಲಿ ಕೆಲವೊಮ್ಮೆ ಏನೇನೂ ಇಲ್ಲದಿರುವಾಗ ಅಮ್ಮಂದಿರು ಹೊಲ ಗದ್ದೆಗಳ ಬದುಗಳಲ್ಲಿ ಸ್ವಾಭಾವಿಕವಾಗಿ ಬೆಳೆದ ಬಗೆ ಬಗೆಯ ಸೊಪ್ಪುಗಳನ್ನು ವಿವಿಧ ಕಾಳುಗಳ ಜೊತೆಗೆ ಬೇಯಿಸಿ ತೆಂಗಿನ ತುರಿಯನ್ನು ಬೆರೆಸಿ ತಿನ್ನುವುದೇ ಮೃಷ್ಟಾನ್ನವಾಗುತ್ತಿತ್ತು. ಇದಿಷ್ಟು ಹೊಟ್ಟೆಪಾಡಾಯಿತು.
ಇನ್ನು ಬಟ್ಟೆಗಳ ಕಥೆಯೇನೂ ಭಿನ್ನವಾಗಿರಲಿಲ್ಲ. ಆಗಿನ ಕಾಲದಲ್ಲಿ ದೊಡ್ಡವರಿಗಾಗಲಿ ಮಕ್ಕಳಿಗಾಗಲಿ ಒಂದೆರಡು ಜೊತೆ ಬಟ್ಟೆ ಇದ್ದರೆ ಅದೇ ಹೆಚ್ಚು. ಯಾವುದೋ ಹಬ್ಬದ ಸಂದರ್ಭದಲ್ಲಿ ಹೆತ್ತವರು ಸಿರಿವಂತರಿಂದ ಮತ್ತೆ ಸಾಲ ಪಡೆದು ಬಟ್ಟೆ ತಂದು ಹೊಲಿಸುತ್ತಿದ್ದರು. ಹೊಸ ಬಟ್ಟೆ ಎಂದರೆ ಆಗ ಮಕ್ಕಳಿಗೆ ಎಲ್ಲಿಲ್ಲದ ಸಡಗರ. ಕೆಲವೊಮ್ಮೆ ಪಕ್ಕದ ಊರಿನಲ್ಲಿ ವಾರದ ಸಂತೆಗೆ ಹೋಗಿ ಮಾರಿಗೆ ಬಟ್ಟೆ ಖರೀದಿಸಿ ತರುತ್ತಿದ್ದುದೂ ಉಂಟು. ಮಾರಿಗೆ ಬಟ್ಟೆ ಎಂದರೆ ಆಗೆಲ್ಲ ಬಡವರ ಪ್ರತೀಕದಂತಿದ್ದವು. ಈಗಿನ ಸಿದ್ಧ ಉಡುಪುಗಳೇ ಅವು. ಫಿಟಿಂಗ್ ಹೀಗೇ ಇರಬೇಕು, ಕಲರ್ ಕೂಡಾ ಇದೇ ಆಗಬೇಕು, ಕ್ವಾಲಿಟಿ ಇಂಥದ್ದೇ ಇರಬೇಕು ಎಂಬ ಆಯ್ಕೆಯ ಸ್ವಾತಂತ್ರ್ಯ ಯಾರಿಗೂ ಇರುತ್ತಿರಲಿಲ್ಲ. ಮನೆಯ ಹಿರಿಯರು ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ತಮಗೆ ಅನಿಸಿದ್ದನ್ನು ತಂದು ಕೊಟ್ಟರೆ ಸಾಕು. ಮಕ್ಕಳು ಖುಷಿಪಟ್ಟು ಧರಿಸಿಕೊಂಡು ಊರ ತುಂಬಾ ಓಡಾಡಿ ಒಡನಾಡಿಗಳಿಗೆ ತೋರಿಸಿ ‘ಹೊಸಂಗಿ ಗುದ್ದು’ (ಅಂದರೆ ಮೊದಲು ಧರಿಸಿದ ಅಂಗಿಯ ಮೇಲೆ ಬೆನ್ನಿನ ಭಾಗಕ್ಕೆ ರಪ್ಪನೆ ಜೋರಾಗಿಯೇ ಹೊಡೆಯುವುದು) ಪಡೆಯುತ್ತಿದ್ದರು. ಆಗ ಕೊಂಚ ನೋವಾದರೂ ಹೊಸಬಟ್ಟೆ ತೊಟ್ಟ ಖುಷಿಯು ಮರೆಸಿಬಿಡುತ್ತಿತ್ತು. ಆಗೆಲ್ಲಾ ದೊಡ್ಡವರು ಮಾತ್ರ ತುಂಬು ತೋಳಿನ ಶರ್ಟ್ ಮತ್ತು ಬಿಳಿ ಪಂಚೆ ಧರಿಸುವುದು ಸಾಮಾನ್ಯವಾಗಿರುತ್ತಿತ್ತು. ದಿನನಿತ್ಯದ ಉಡುಪಾಗಿ ಲಾಡಿಯಿಂದ ಕಟ್ಟುತ್ತಿದ್ದ ಪಟಾಪಟಿ ಚಡ್ಡಿ ಹಾಗೂ ತುಂಬು ಬನಿಯನ್ ಹಾಕಿಕೊಳ್ಳುತ್ತಿದ್ದರು. ಮಕ್ಕಳು ಮಾತ್ರ ಬಣ್ಣದ ಚಡ್ಡಿ, ಶರ್ಟ್ ಗಳನ್ನು ಹಾಕಿಕೊಳ್ಳುತ್ತಿದ್ದರು. ಶಾಲೆಗೆ ಹೋಗುತ್ತಿದ್ದ ಮಕ್ಕಳು ಬಿಳಿಯ ಶರ್ಟ್- ಖಾಕಿ ಚಡ್ಡಿಯನ್ನು ಯೂನಿಫಾರ್ಮ್ ಆಗಿ ಧರಿಸುತ್ತಿದ್ದರು.
ಆಗೆಲ್ಲಾ ಸರ್ಕಾರದ ವತಿಯಿಂದ ಸಮವಸ್ತ್ರಗಳು ಉಚಿತವಾಗಿ ದೊರೆಯುತ್ತಿರಲಿಲ್ಲ. ವಿಶೇಷ ಎಂದರೆ ಒಂದೇ ಒಂದು ಅಂಗಿ, ಚಡ್ಡಿಯನ್ನು ವರ್ಷಪೂರ್ತಿ ಹಾಕಿಕೊಳ್ಳುವುದು ರೂಢಿಯಾಗಿತ್ತು. ‘ಹಾಕಿದ್ದೇ ಹಾಕಬೇಕಲ್ಲ’ ಎಂಬ ಬೇಸರ ಯಾರಿಗೂ ಇರಲಿಲ್ಲ. ವರ್ಷ ಮುಗಿಯುತ್ತ ಬಂದಂತೆ ಚಡ್ಡಿಯ ಬ್ಯಾಕ್ ಸವೆದರೆ ಟೈಲರ್ ಬಳಿ ಹೋಗಿ ತೂತು ಮುಚ್ಚಿಸಿ (ತೇಪೆ ಹಾಕಿಸಿ) ಅದನ್ನೇ ಹಿಂಜರಿಕೆ ಇಲ್ಲದೆ ಹಾಕಿಕೊಳ್ಳುವ ಮೂಲಕ ಮಾನ ಮುಚ್ಚಿಕೊಳ್ಳುತ್ತಿದ್ದರೂ ಈ ಅವಸ್ಥೆಗೆ ಯಾರೂ ನಗೆಯಾಡುತ್ತಿರಲಿಲ್ಲ, ಹೀಗಳೆಯುವಂತಿರಲಿಲ್ಲ. ಏಕೆಂದರೆ ಬಹುತೇಕ ಎಲ್ಲರ ಚಡ್ಡಿಗಳೂ ತೂತಾಗಿಯೇ ಇರುತ್ತಿದ್ದವು. ಕೆಲವೊಮ್ಮೆ ಪ್ಯಾಂಟ್ ಹೊಲಿಸಿದವರ ಜಿಪ್ ಹಾಳಾಗಿದ್ದರೆ ಪಿನ್ ಹಾಕಿಕೊಂಡು ಹೋಗುತ್ತಿದ್ದುದೂ ಇತ್ತು.
ವಿಪರ್ಯಾಸ ಎಂದರೆ ಈಗಿನ ಕಾಲಘಟ್ಟದಲ್ಲಿ ಎಲ್ಲವೂ ಇವೆ. ಆನಂದ, ಆರೋಗ್ಯ, ಆತ್ಮತೃಪ್ತಿ ಮಾಯವಾಗಿದೆ. ಮನೆಯಲ್ಲಿ ಎಲ್ಲಾ ದವಸ ಧಾನ್ಯಗಳು ತುಂಬಿರುತ್ತವೆ.ಜೊತೆಗೆ ಸರ್ಕಾರದ ಕಡೆಯಿಂದ ಉಚಿತವಾಗಿ ಪಡಿತರ ಕೂಡಾ ಲಭ್ಯವಿದೆ. ಅಪರೂಪಕ್ಕೆ ಇರುತ್ತಿದ್ದ ದೋಸೆ, ಇಡ್ಲಿ ಚಪಾತಿಗಳೆಲ್ಲವೂ ದಿನನಿತ್ಯದ ಆಹಾರವಾಗಿವೆ. ಅದರಲ್ಲೇನೂ ತಪ್ಪಿಲ್ಲ. ಆಗಿನ ನೈಸರ್ಗಿಕ, ಸಾವಯವ ಬೇಸಾಯ ಪದ್ಧತಿಯಿಂದ ಕಡಿಮೆ ಫಸಲು ಪಡೆದಿದ್ದರೂ, ಒಂದೆರಡು ಹೊತ್ತು ಮಾತ್ರವೇ ಊಟ ಮಾಡಿದರೂ ದೇಹ ಸದೃಢವಾಗಿಯೇ ಇರುತ್ತಿತ್ತು. ಆ ಆಹಾರವು ಸತ್ವಭರಿತವಾಗಿದ್ದು ಆರೋಗ್ಯ ಚೆನ್ನಾಗಿಯೇ ಇರುತ್ತಿತ್ತು. ಈಗಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಹೇರಳವಾದ ಫಸಲು ಸಿಗುವುದಾದರೂ ಅದರಲ್ಲಿ ರಾಸಾಯನಿಕಗಳು, ವಿಷಾಂಶಗಳು ಸೇರಿ ದಿನಕ್ಕೆ ನಾಲ್ಕೈದು ಬಾರಿ ಊಟ ಮಾಡಿದರೂ ದೇಹದ ಮೇಲೆ ದುಷ್ಪರಿಣಾಮಗಳೇ ಉಂಟಾಗಿ ರೋಗ ರುಜಿನಗಳ ಆಗರವಾಗುತ್ತಿದೆ. ಜೊತೆಗೆ ಫಾಸ್ಟ್ ಫುಡ್ ವ್ಯಾಮೋಹ ಅತಿಯಾಗಿ ನಾಲಿಗೆ ಚಪಲಕ್ಕೆ ಮಾರುಹೋಗಿ ಅನಾರೋಗ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯವಾಗಿದೆ.
ಮಾನ ಮತ್ತು ರಕ್ಷಣೆಗಾಗಿ ತೊಡುತ್ತಿದ್ದ ಬಟ್ಟೆಗಳಲ್ಲಿ ಯಾವುದೇ ತಾರತಮ್ಯ, ಆಯ್ಕೆ ಹಂಬಲ ಇಲ್ಲದೆ ತೇಪೆ ಹಾಕಿಕೊಂಡರೂ ಮುಜುಗರಪಡದೆ ಖುಷಿಯಿಂದ ಇದ್ದ ಮನಸ್ಥಿತಿ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಫ್ಯಾಶನ್ ಹೆಸರಿನಲ್ಲಿ ರೆಡಿಮೇಡ್ ಡ್ರೆಸ್ ಗಳು, ಥರಾವರಿ ವಿನ್ಯಾಸದ ಬೆನ್ನು ತೋರಿಸುವ ಬ್ಲೌಸ್ ಗಳು, ಮಂಡಿಯ ಜಾಗದಲ್ಲಿ ಹರಿದ ಪ್ಯಾಂಟ್, ಸೊಟ್ಟಗಿನ ಜಾಗದಲ್ಲಿರುವ ಬಟನ್ ಗಳ ಶರ್ಟ್ ಗಳನ್ನು ತೊಡುವುದೇ ಇಂದಿನ ಟ್ರೆಂಡ್ ಆಗಿಹೋಗಿದೆ. ಯಾರೋ ಒಬ್ಬ ಟೈಲರ್ ಮಾಡಿದ ಅಳತೆ ವ್ಯತ್ಯಾಸದ ಕಾರಣದಿಂದ ಹುಟ್ಟಿಕೊಂಡ ಈ ಫ್ಯಾಶನ್ ಮೋಹ ಈಗಿನ ಯುವ, ಮಧ್ಯ ವಯಸ್ಸಿನ ಎಲ್ಲರನ್ನೂ ಸೆಳೆದು ಅದೇ ಟ್ರೆಂಡ್ ಆಗಿರುವುದು ಸಜ್ಜನ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಹಿಂದೆ ಇದ್ದ ಮುಂಗೈವರೆಗೆ ತೋಳು, ಮೈತುಂಬ ಆವರಿಸುವ ರವಿಕೆ ತೊಡುತ್ತಿದ್ದ ಸಂಪ್ರದಾಯ ಇಲ್ಲವಾಗಿ ಸ್ಲೀವ್ ಲೆಸ್, ಬೆನ್ನು ಕಾಣುವ ಬ್ಲೌಸ್ ಗಳು ರಾರಾಜಿಸುತ್ತಿವೆ. ಹೀಗೆ ಒಂದೆರಡಲ್ಲ, ಹತ್ತು ಹಲವು ವಿಚಾರಗಳಲ್ಲಿ ಬದಲಾವಣೆಗಳು ಊಹೆಗೂ ಮೀರಿದಂತೆ ಆಗಿವೆ. ಈಗಿನ ಹಿರಿಯ ತಲೆಮಾರಿನ ಹಳೆಯ ಸವಿನೆನಪುಗಳು ಮಾಸಿದರೆ ಮುಂದಿನ ಪೀಳಿಗೆಗೆ ಹಿಂದಿನ ಯಾವ ಕುರುಹುಗಳೂ ಇಲ್ಲದಂತಾಗುವುದರಲ್ಲಿ ಸಂದೇಹವೇ ಇಲ್ಲ. ಒಟ್ಟಿನಲ್ಲಿ ಸಭ್ಯತೆ ಸಂಸ್ಕೃತಿ ಎಂಬುದು ಸಂಪೂರ್ಣವಾಗಿ ತನ್ನ ಮಾನದಂಡವನ್ನು ಬದಲಿಸಿಕೊಂಡಂತಾಗಿರುವುದು ಕಟು ಸತ್ಯ, ಅರಗಿಸಲಾಗದ ಅವಾಂತರವಾಗಿದೆ.
~~~~~
~ಹೊ.ರಾ.ಪರಮೇಶ್ ಹೊಡೇನೂರು
