ಕೆ.ಆರ್.ಪೇಟೆ,ಫೆ.09: ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಬಣವು ಪ್ರಚಂಡ ಜಯಭೇರಿ ಬಾರಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ರಾಯಮಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2026-2031ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ 10 ಸ್ಥಾನಗಳಲ್ಲಿ ಪೈಕಿ ಎಲ್ಲಾ ಹತ್ತೂ ಸ್ಥಾನಗಳನ್ನು ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಬಣಕ್ಕೆ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಸಂಘಕ್ಕೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸಾಮಾನ್ಯ ಕ್ಷೇತ್ರದಿಂದ ಆರ್.ವೈ.ಮಹೇಶ್, ಆರ್.ಎಂ.ವೆಂಕಟೇಶ್, ದಿನೇಶ್, ಮಧು.ಆರ್.ಎನ್, ರವಿ, ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ಮಲ, ನೇತ್ರಾವತಿ, ಹಿಂದುಳಿದ ವರ್ಗದಿಂದ ಎ.ಮಂಗಳಮ್ಮ, ಹಿಂದುಳಿದ ವರ್ಗ ಬಿ ವರ್ಗದಿಂದ ಆರ್.ಎ.ರವಿ ಕುಮಾರ್, ಪರಿಶಿಷ್ಟ ಜಾತಿ ಮೀಸಲಿಂದ ನೀಲಮ್ಮ ಅವರು ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಅಂಬರೀಶ್ ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ ಸಂಘಕ್ಕೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಲು ಶ್ರಮಿಸಿದ ಹಾಲು ಉತ್ಪಾದಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಯಾವುದೇ ಕಾರಣಕ್ಕೂ ಡೈರಿ ವಿಚಾರದಲ್ಲಿ ರಾಜಕಾರಣ ಬೆರೆಸಬೇಡಿ ಎಂದು ಮೊದಲಿಂದಲೂ ಹೇಳುತ್ತಿದ್ದೇನೆ. ಈಗಲೂ ಸಂಘದ ವಿಚಾರದಲ್ಲಿ ರಾಜಕಾರಣ ಬೇಡ. ಚುನಾವಣಾ ಸಂದರ್ಭದಲ್ಲಿ ರಾಜಕಾರಣ ಮಾಡಿ ನಂತರ ದ್ವೇಷ ಹಾಗೂ ಪಕ್ಷವನ್ನು ಬದಿಗೊತ್ತಿ ಸಂಘದ ಅಭಿವೃದ್ಧಿಯ ಕಡೆ ಗಮನ ನೀಡುವಂತೆ ಸಲಹೆ ನೀಡಿದರು. ಡೈರಿ ವಿಚಾರದಲ್ಲಿ ಏನೇ ಸಮಸ್ಯೆ ಬಂದರೂ ನಿಮ್ಮ ಗ್ರಾಮದ ಜೊತೆಗೆ ನಿರಂತರ ಸಂಪರ್ಕದಲ್ಲಿ ನನ್ನ ಜೊತೆಗೆ ಎಂ.ಬಿ.ಹರೀಶ್ ಅವರು ಜೊತೆಯಲ್ಲಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮನ್ಮುಲ್ ನಿರ್ದೇಶಕರಾದ ಎಂ.ಬಿ.ಹರೀಶ್ ಮಾತನಾಡಿ ರಾಯಸಮುದ್ರ ಗ್ರಾಮಸ್ಥರಿಗೆ ನನ್ನ ಅನಂತ ಅನಂತ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ ಚುನಾವಣೆಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೇ ನಮ್ಮ ಟೀಂ ನ್ನು ಸಂಪೂರ್ಣವಾಗಿ ಕ್ಲೀನ್ ಸ್ವೀಪ್ ಗೆಲ್ಲಿಸುವ ಮೂಲಕ ನಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿದ್ದೀರಿ. ಇದಕ್ಕೆ ಚ್ಯುತಿ ಬಾರದಂತೆ ನಿರ್ಮಲ ಮನಸ್ಸಿನಿಂದ ಕೆಲಸವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಅಂಬರೀಶ್ ಮಾತನಾಡಿ ರಾಯಸಮುದ್ರ ಗ್ರಾಮ ನಮ್ಮನ್ನು ಯಾವಾಗಲೂ ಕೈಬಿಟ್ಟಿಲ್ಲ. ನನ್ನನ್ನು ಮನ್ಮುಲ್ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ನನಗೆ ರಾಯಸಮುದ್ರ ಅಚ್ಚು ಮೆಚ್ಚಿನ ಗ್ರಾಮಗಳಲ್ಲಿ ಇದು ಒಂದು.ಡೈರಿ ವಿಚಾರ, ಸೊಸೈಟಿ ವಿಚಾರದಲ್ಲಿ ನಿಮ್ಮ ಜೊತೆಗೆ ನನ್ನ ಸಹಕಾರ ಇದ್ದೇ ಇರುತ್ತದೆ. ಕ್ಷೇತ್ರದ ಶಾಸಕರಿಗೆ ಡೈರಿ ಚುನಾವಣೆ ಮೂಲಕ ತಕ್ಕ ಉತ್ತರವನ್ನು ನೀಡಿರುವ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಮುಂದೆ ಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಇದೇ ರೀತಿ ಒಗ್ಗಟ್ಟಿನಲ್ಲಿ ಮತ ನೀಡುವ ಮೂಲಕ ನಮಗೆ ನಿಮ್ಮ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜಣ್ಣ, ನವೀನ್, ಹರೀಶ್, ಶ್ರೀನಿವಾಸ್, ಕುಮಾರ್, ವೆಂಕಟೇಶ್, ಟೈಗರ್ ಪ್ರಭಾಕರ್, ಪುರುಷೋತ್ತಮ್, ಶೇಖರ್,ಲೋಕೇಶ್, ಹೊಂಬಾಳೆ ಹೊನ್ನಪ್ಪ, ಪೋಸ್ಟ್ ಶಿವರಾಮ್, ಡೈರಿ ಮಾಜಿ ಅಧ್ಯಕ್ಷ ಕುಮಾರ್, ಹರೀಶ್, ಪ್ರಸನ್ನ, ಕೇಬಲ್ ರಾಜು, ಮುರುಗನಕೊಪ್ಪಲು ಗ್ರಾಮದ ಸೋಮು, ನಿಂಗರಾಜು, ಶಿವರಾಮು, ಗುಂಡ, ಲಕ್ಷ್ಮಣ, ಚಂದ್ರು ಯೋಗಣ್ಣ ಸೇರಿದಂತೆ ರಾಯಸಮುದ್ರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
