ಕೆ.ಆರ್.ಪೇಟೆ,ಫೆ.09: ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟಂಗೆರೆ ಗ್ರಾಮದ ಬಳಿ ಸುಮಾರು 2 ಕಿ.ಮೀ ದೂರದಷ್ಟು ಸುರಂಗವನ್ನು ಕೊರೆದು ಹೇಮಾವತಿ ಕಾಲುವೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಕಾಲುವೆಯ ಮೂಲಕ ಸಾವಿರಾರು ಹೆಕ್ಟೇರ್ ಭೂಮಿ ನೀರು ಹರಿಸಲಾಗುತ್ತದೆ ಆದರೆ ಸದರಿ ಸುರಂಗದ ಮೇಲ್ಬಾಗದಲ್ಲಿ ಏತ ನೀರಾವರಿ ಯೋಜನೆಗೆ ಪೈಪ್ಲೈನ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಆದರೆ ಗುತ್ತಿಗೆದಾರರು ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಕಾಮಗಾರಿ ನಡೆಸುತ್ತಿದ್ದ ಯಾವುದೇ ಕ್ಷಣದಲ್ಲೂ ಸುರಂಗ ಮಾರ್ಗದ ಕಾಲುವೆಗೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಶೀಳನೆರೆ ಹೋಬಳಿಗೆ ಹೇಮಾವತಿ ನದಿ ನೀರನ್ನು ಏತ ನೀರಾವರಿ ಮೂಲಕ ಪೂರೈಕೆ ಮಾಡಲು ಸುಮಾರು 165ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಆದರೆ ಸದರಿ ಕಾಮಗಾರಿ ನಡೆಸುತ್ತಿರುವ ಮಾರ್ಗದಲ್ಲಿ ಚಟ್ಟಂಗೆರೆ ಸುರಂಗ ಮಾರ್ಗದ ಕಾಲುವೆ ಇರುವ ಕಾರಣ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದುಕೊಂಡು ಸುರಂಗ ಸಂರಕ್ಷಣಾ ಪರಿಣಿತ ಇಂಜಿನಿಯರ್ ಅನ್ನು ಸ್ಥಳದಲ್ಲಿ ನಿಯೋಜನೆ ಮಾಡಿಕೊಂಡು ಕಾಮಗಾರಿ ನಡೆಸಬೇಕು ಆದರೆ ಏನ ನೀರಾವತಿ ಗುತ್ತಿಗೆದಾರನು ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಸುರಂಗ ಮಾರ್ಗದಲ್ಲಿ ಬೃಹತ್ ಹಿಟಾಚಿ ಬಳಸಿ, ಬಂಡೆಗಳನ್ನು ಕೊರೆದು, ಬ್ಲಾಸ್ಟ್ ಮೂಲಕ ಕಲ್ಲುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾನೆ ಇದು ಸುರಂಗ ಮಾರ್ಗದ ಕಾಲುವೆಗೆ ಅಪಾಯವನ್ನು ಆಹ್ವಾನ ನೀಡಿದಂತಾಗಿದೆ.

ಹಾಗಾಗಿ ಕೂಡಲೇ ಅಗತ್ಯ ಸುರಂಗ ತಜ್ಞ ಇಂಜಿನಿಯರ್ ಅನ್ನು ಸ್ಥಳದಲ್ಲಿ ನಿಯೋಜಿಸಿಕೊಂಡು ತಜ್ಞರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಸಬೇಕು ಈ ಮೂಲಕ ಸುರಂಗ ಮಾರ್ಗದ ಹೇಮಾವತಿ ಕಾಲುವೆಯನ್ನು ಸಂರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಸುರಂಗ ಮಾರ್ಗದ ಕಾಲುವೆಗೆ ಅಪಾಯ ಎದುರಾದರೆ ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಎಂದು ರೈತರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಕೂಡಲೇ ಹೇಮಾವತಿ ಜಲಾಶಯ ಯೋಜನೆಯ ನಂ.23ರ ಬೂಕನಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೇ ಸುರಂಗ ಮಾರ್ಗದಲ್ಲಿ ಬಂಡೆಗಳನ್ನು ಸಿಡಮದ್ದು ಬಳಸಿ ಹಾಗೂ ಬೃಹತ್ ಹಿಟಾಚಿ ಬಳಸಿ ಬಂಡೆಗಳನ್ನು ಕೊರೆಯುತ್ತಿರುವ ಗುತ್ತಿಗೆದಾರನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ತಾಲ್ಲೂಕು ಆಡಳಿತವು ಸುಮಾರು 50ರಿಂದ 60ವರ್ಷಗಳ ಇತಿಹಾಸವನ್ನು ಹೊಂದಿರುವ ಚಟ್ಟಂಗೆರೆ ಸುರಂಗ ಮಾರ್ಗವು ಸಂರಕ್ಷಿತ ಪ್ರದೇಶವಾಗಿದೆ. ಹಾಗಾಗಿ ಕೂಡಲೇ ಸೂಕ್ತ ಕ್ರಮ ಕೈಗೊಂಡು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಸುವಂತೆ ಆದೇಶ ನೀಡಬೇಕು ಎಂದು ಚಟ್ಟಂಗೆರೆ ಸುತ್ತಮುತ್ತಲ ಗ್ರಾಮದ ರೈತರು ತಾಲ್ಲೂಕು ತಹಸೀಲ್ದಾರ್ ಅವರನ್ನು ಒತ್ತಾಯ ಮಾಡಿದ್ದಾರೆ.
– ಶ್ರೀನಿವಾಸ್ ಆರ್.
