ಹಾಸನ, ಫೆ.13: ವಿಶ್ವ ರೇಡಿಯೋ ದಿನದ ಅಂಗವಾಗಿ Rotary Club of Hassan Sun Rise ತಂಡವು ಹಾಸನದ All India Radio Hassan (ಆಕಾಶವಾಣಿ ಕೇಂದ್ರ)ಕ್ಕೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಶುಭಾಶಯ ಕೋರಿತು.
ಸಂಜೆ 5 ಗಂಟೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೇಡಿಯೋ ಮಾಧ್ಯಮದ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಲಾಯಿತು. ರೇಡಿಯೋ ಪ್ರಮುಖ ಸಂವಹನ ಸಾಧನವಾಗಿದ್ದು, ವಿಶೇಷವಾಗಿ ಹಾಸನ ಆಕಾಶವಾಣಿ ಕೇಂದ್ರವು ಉತ್ತಮ ಪ್ರಸಾರ ನಿರ್ವಹಣೆಯ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ಬಿತ್ತರಿಸಿ ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆಕಾಶವಾಣಿ ಕೇಂದ್ರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ, ನಿಲಯದ ನಿರ್ದೇಶಕರಿಗೆ ಹೂಗುಚ್ಛ ನೀಡಿ ವಿಶ್ವ ರೇಡಿಯೋ ದಿನದ ಶುಭಾಶಯಗಳನ್ನು ತಿಳಿಸಲಾಯಿತು.
ತಾಂತ್ರಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಉಷಾ ಅವರು ಮಾತನಾಡಿ, ಸನ್ ರೈಸ್ ಕ್ಲಬ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮ ನಿರ್ವಾಹಕ ಶ್ರೀ ಅರಕಲಗೂಡು ವಿ. ಮಧುಸೂದನ್ ಅವರು ರೇಡಿಯೋ ದಿನದ ಹಿನ್ನೆಲೆ ಹಾಗೂ ಆಕಾಶವಾಣಿ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮ ಮುಖ್ಯಸ್ಥೆ ಶ್ರೀಮತಿ ಸುಜಾತ ತಳವಾರ್ ಅವರು ರೋಟರಿ ತಂಡದ ಅಭಿನಂದನೆಗಳಿಗೆ ಕೃತಜ್ಞತೆ ಸಲ್ಲಿಸಿ, ಈ ಕಾರ್ಯಕ್ರಮವು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ರೋಟರಿ ಸನ್ ರೈಸ್ ಕ್ಲಬ್ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ. ಅವರು ಮಾತನಾಡಿ, ರೇಡಿಯೋ ಕಾರ್ಯಕ್ರಮಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿವೆ ಎಂದು ತಿಳಿಸಿ, ಹಾಸನ ಆಕಾಶವಾಣಿ ಕೇಂದ್ರದ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ರೋ. ಯೋಗೇಶ್ ಕೆ.ಎಸ್., ಖಜಾಂಚಿ ರೋ. ವಿ.ಎಂ. ಗವಿಗೌಡ, ನಿರ್ದೇಶಕರಾದ ರೋ. ಭುವನೇಶ್, ರೋ. ರಾಜಣ್ಣ ಎಂ.ಸಿ., ರೋ. ಸಿದ್ದನಂಜಪ್ಪ, ರೋ. ಗುರುಮೂರ್ತಿ, ರೋ. ಶಶಿಂದ್ರನಾಥನ್ ಎಂ.ಡಿ., ರೋ. ಬೂದೇಶ್, ರೋ. ರಾಜೇಶ್ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಆಕಾಶವಾಣಿ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೂಗುಚ್ಛ ಹಾಗೂ ಸಿಹಿ ವಿತರಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
