ಹಾಸನ: ಜಿಲ್ಲೆಯ ಕಲ್ಕೆರೆ ಕೆರೆ ಬಳಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬ ದೂರಿನಿಂದ ಆರಂಭವಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಪೂರ್ವಯೋಜಿತವಾಗಿ ಓಡಿ ಹೋಗಿದ್ದ ಘಟನೆ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಕೆರೆ ಬಳಿ ಶೋಧ ಕಾರ್ಯಾಚರಣೆ ನಡೆಸಿದಾಗ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದ್ದು ಪ್ರಕರಣ ಗಂಭೀರತೆ ಪಡೆದುಕೊಂಡಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಲೊಕೇಶನ್ ಪರಿಶೀಲನೆ ವೇಳೆ ಯುವತಿ ಕುಣಿಗಲ್ ಪಟ್ಟಣದ ಲಾಡ್ಜ್ನಲ್ಲಿ ಪ್ರಿಯಕರನೊಂದಿಗೆ ತಂಗಿರುವುದು ಪತ್ತೆಯಾಯಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವತಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿದರು.
ಮನೆಯವರಿಗೂ ಪೊಲೀಸರಿಗೂ ದಿಕ್ಕು ತಪ್ಪಿಸಲು ಯುವತಿ ಕೆರೆ ಬಳಿ ಬಟ್ಟೆ-ಚಪ್ಪಲಿ ಬಿಟ್ಟು ನಾಟಕ ರೂಪಿಸಿ ಬಳಿಕ ಪ್ರಿಯಕರನೊಂದಿಗೆ ತೆರಳಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣವನ್ನು ಬೇಧಿಸುವಲ್ಲಿ ತಂಡ ಪ್ರಮುಖ ಪಾತ್ರವಹಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಗಂಗಾಧರಪ್ಪ, ಪಿಎಸ್ಐ ವಿನಯ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಪ್ರಕರಣದ ನಿಜಾಂಶ ಬಹಿರಂಗವಾಗುತ್ತಿದ್ದಂತೆ ಅತ್ಯಾಚಾರ-ಕೊಲೆ ಶಂಕೆ ನಿವಾರಣೆಯಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
