ಕೆ.ಆರ್.ಪೇಟೆ,ಫೆ.17: ರಾಜ್ಯ ಕಾಂಗ್ರೆಸ್ ಸರ್ಕಾರವು ಅಸ್ಥಿತ್ವಕ್ಕೆ ಬಂದು ಮೂರು ವರ್ಷದ ಸನಿಹಕ್ಕೆ ಬರುತ್ತದೆ. ಆದರೆ ಸರ್ಕರವು ಕೇವಲ ಗ್ಯಾರಂಟಿ ಯೋಜನೆಗಳಲ್ಲಿಯೇ ಮುಳುಗಿದೆ. ಇತರೆ ಅಭಿವೃದ್ದಿ ಶೂನ್ಯವಾಗಿದೆ. ಮಕ್ಕಳ ವಿದ್ಯಾಭ್ಯಾಸದ ವಿದ್ಯಾರ್ಥಿ ವೇತನವನ್ನೂ ಸಹ ನೀಡದೇ ಓದುವ ವಿದ್ಯಾರ್ಥಿಗಳಿಗೂ ತೊಂದರೆ ನೀಡುತ್ತಿದೆ ಎಂದು ಶಾಸಕ ಹೆಚ್.ಟಿ.ಮಂಜು ರಾಜ್ಯ ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ವಸಂತಪುರ ಗ್ರಾಮದ ಪ್ರಮುಖ ಮುಖಂಡರಾದ ರಮೇಶ್, ಉದ್ಯಮಿ ರಾಮಣ್ಣ, ಸತೀಶ್ ಶಿವಣ್ಣ ,ಮಂಜುನಾಥ್, ಪ್ರದೀಪ್, ಮಹೇಶ್ ಕೆಂಪೇಗೌಡ ,ಬೋರೇಗೌಡ, ರಮೇಶ್, ರವಿ ,ಕುಮಾರ್,ಅವಿನಾಶ್ ,ಯೋಗೇಶ್ ಮತ್ತಿತರರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜನಪರ ಆಡಳಿತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತವನ್ನು ಟೀಕೆ ಮಾಡಿದರು.
ಕಾಂಗ್ರೆಸ್ ಪಕ್ಷವು ದಲಿತರಿಗೆ ಮೀಸಲಿಟ್ಟ ಸುಮಾರು 20ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದೆ. ಗ್ರಾಮ ಪಂಚಾಯಿಗಳಿಗೆ ಒಂದೇ ಒಂದು ಅಶ್ರಯ ಮನೆ ನೀಡಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಸರ್ಕಾರದ ವಿರುದ್ದ ಹಿಡಿಶಾಪ ಹಾಕಿ ತಮ್ಮ ಐದು ವರ್ಷದ ಅಧಿಕಾರದಿಂದ ಇಳಿಯುವಂತಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿರುವ ಸರ್ಕಾರ ಕೇವಲ ತಮ್ಮ ಪಕ್ಷದ ಪ್ರಣಾಳಿಕೆಯ ಐದು ಗ್ಯಾರಂಟಿ ಯೋಜನೆಗಳನ್ನು ಮಾತ್ರ ಗುಣಗಾನ ಮಾಡುತ್ತಿದೆ ಇತರೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಭಾರೀ ಹಿನ್ನೆಡೆ ಉಂಟು ಮಾಡಿದೆ. ಇದರಿಂದ ಗ್ರಾಮೀಣ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ ಅನುಧಾನ ಇಲ್ಲದೇ ಇದ್ದಿದ್ದರೆ ಗ್ರಾಮ ಪಂಚಾಯಿತಿಗಳು ಬಾಗಿಲು ಮುಚ್ಚುವ ಸ್ಥಿತಿ ಉಂಟಾಗುತ್ತಿತ್ತು. ಇದನ್ನು ಮನಗಂಡು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೆ ಮುಂದೆ ಬರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ಶೀಳನೆರೆ ಹೋಬಳಿಯ ವಸಂತಪುರ ಗ್ರಾಮದ ಹಲವಾರು ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ ನಮ್ಮನ್ನು ನಂಬಿ ಬಂದಿರುವ ಮುಖಂಡರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
2028ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬರುವುದು ನೂರಕ್ಕೆ 100ರಷ್ಟು ಸತ್ಯವಾಗಿದೆ. ಹಾಗಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೈನಿಕರಂತಹ ಗಟ್ಟಿ ಕಾರ್ಯಕರ್ತರು, ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿರುವ ಮತದಾರರನ್ನು ಸೆಳೆಯುವ ಕೆಲಸವನ್ನು ಈಗಿನಿಂದಲೇ ಆರಂಭಿಸಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನಾನು ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತಪುರ ಗ್ರಾಮದ ರಮೇಶ್, ಉದ್ಯಮಿ ರಾಮಣ್ಣ, ಸತೀಶ್, ಶಿವಣ್ಣ, ಮಂಜುನಾಥ್, ಪ್ರದೀಪ್, ಮಹೇಶ್, ಕೆಂಪೇಗೌಡ, ಬೋರೇಗೌಡ, ರಮೇಶ್, ರವಿ ,ಕುಮಾರ್,,ಅವಿನಾಶ್ ,ಯೋಗೇಶ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಹೆಳವೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ನಿರ್ದೇಶಕ ಹೆಚ್.ಟಿ.ಲೋಕೇಶ್ ಇತರರು ಇದ್ದರು.
– ಶ್ರೀನಿವಾಸ್ ಆರ್.
