ಹೊಳೆನರಸೀಪುರ ಪಟ್ಟಣದಲ್ಲಿ ಪರಿಚಯಸ್ಥ ವ್ಯಕ್ತಿಯ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಲು ಯತ್ನಿಸಿದ ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರು ಆರೋಪಿಗಳ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಉಪನ್ಯಾಸಕಿ ನಾಗಲಕ್ಷ್ಮಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಪಣಿ (ಧರ್ಮರಾಜ್) ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಪಟ್ಟಣದಲ್ಲಿ ವಾಸವಿರುವ ಮಹಿಳೆಯೊಬ್ಬರಿಗೆ ಅತ್ತೆಯೊಂದಿಗೆ ಆಗುತ್ತಿದ್ದ ಕುಟುಂಬ ಕಲಹದ ಹಿನ್ನೆಲೆಯಲ್ಲಿ, ಈ ಹಿಂದೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ನಾಗಲಕ್ಷ್ಮಿ ಅವರ ಸಂಪರ್ಕಕ್ಕೆ ಕುಟುಂಬಸ್ಥರು ಹೋಗಿದ್ದರು. ನಾಗಲಕ್ಷ್ಮಿ ಅವರು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಮಹಿಳೆಯನ್ನು ಕೆಲಕಾಲ ತಮ್ಮ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಬಳಿಕ ಮಹಿಳೆ ತನ್ನ ಗಂಡನೊಂದಿಗೆ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದರು.
ಈ ನಡುವೆ ಮಹಿಳೆಯ ಪರಿಚಯಸ್ಥ ಮಹದೇವ ಎಂಬ ವ್ಯಕ್ತಿ ಮನೆಗೆ ಬರುತ್ತಿದ್ದುದನ್ನು ನೆಪವನ್ನಾಗಿ ಮಾಡಿಕೊಂಡು ನಾಗಲಕ್ಷ್ಮಿ ಹಾಗೂ ಅವಳ ಗಂಡ ಸಿದ್ದಿಕ್ ಮಹಿಳೆಗೆ ಮಹದೇವನ ವಿರುದ್ಧ ಅತ್ಯಾಚಾರ ದೂರು ನೀಡುವಂತೆ ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಮಹಿಳೆ ನಿರಾಕರಿಸಿದಾಗ ಬೆದರಿಕೆ ಹಾಕಿ, ಸುಳ್ಳು ಪ್ರಕರಣ ದಾಖಲಿಸಲು ಸಂಚು ರೂಪಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಳ್ಳು ಸಾಕ್ಷ್ಯ ಸೃಷ್ಟಿ ಆರೋಪ
ಮಹಿಳೆ ಒಪ್ಪದ ಹಿನ್ನೆಲೆಯಲ್ಲಿ ಆರೋಪಿಗಳು ಪೇಟೆ ಬೀದಿಯಲ್ಲಿರುವ ಲ್ಯಾಬ್ ಟೆಕ್ನಿಷಿಯನ್ ಪಣಿ (ಧರ್ಮರಾಜ್) ಎಂಬಾತನನ್ನು ಕರೆಸಿ, ಅತ್ಯಾಚಾರ ನಡೆದಂತೆ ತೋರಿಸುವ ರೀತಿಯಲ್ಲಿ ವರ್ತಿಸಿ, ಬಳಿಕ ಮಹಿಳೆಯಿಂದ ಬಲವಂತವಾಗಿ ಹೇಳಿಕೆ ಪಡೆದು ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮಹದೇವನಿಂದ ಹಣ ಬೇಡಿಕೆ ಇಡುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಠಾಣೆಯಲ್ಲಿ ಬಯಲಾದ ಸತ್ಯ
ಫೆಬ್ರವರಿ 15ರಂದು ಮಹಿಳೆಯನ್ನು ದೂರು ನೀಡಲು ಪೊಲೀಸ್ ಠಾಣೆಗೆ ಕಳುಹಿಸಲಾಗಿತ್ತು. ಆದರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಚಾರಿಸಿದಾಗ ಮಹಿಳೆ ಸಂಪೂರ್ಣ ಸತ್ಯವನ್ನು ಹೇಳಿಕೊಂಡಿದ್ದು, ಮಹಿಳಾ ಸಾಂತ್ವನ ಕೇಂದ್ರದ ಪೊಲೀಸರ ವಿಚಾರಣೆಯಲ್ಲಿ ಪ್ರಕರಣ ಬಹಿರಂಗವಾಗಿದೆ. ಮಹಿಳೆಯ ಹೇಳಿಕೆಯ ಆಧಾರದಲ್ಲಿ ನಾಗಲಕ್ಷ್ಮಿ, ಅವಳ ಗಂಡ ಸಿದ್ದಿಕ್, ಪಣಿ (ಧರ್ಮರಾಜ್) ಹಾಗೂ ಮತ್ತೊಬ್ಬ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಣ ವಸೂಲಿ ಸಂಚು
ಮಹದೇವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರೆ ಆತ ರಾಜಿಗೆ ಬರುತ್ತಾನೆ. ಬಳಿಕ 5 ರಿಂದ 6 ಲಕ್ಷ ರೂಪಾಯಿ ಹಣ ಕೇಳಬಹುದು, ಹಣ ಸಿಕ್ಕರೆ ನಿನ್ನ ಜೀವನ ಸರಿಯಾಗುತ್ತದೆ ಎಂದು ಆರೋಪಿಗಳು ಮಹಿಳೆಗೆ ಹೇಳಿದ್ದರು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ರಕ್ಷಣೆ ಕೋರಿದ ಮಹಿಳೆ
ನಾಗಲಕ್ಷ್ಮಿ ಹಾಗೂ ಸಿದ್ದಿಕ್ನಿಂದ ಜೀವಭಯವಿದ್ದು, ತಮ್ಮಿಗೆ ರಕ್ಷಣೆ ನೀಡಬೇಕು ಹಾಗೂ ಎಲ್ಲ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಎಫ್.ಐ.ಆರ್ನಲ್ಲಿ ಮನವಿ ಮಾಡಿದ್ದಾರೆ.
