ಹಾಸನ: ಶಾಲಾ ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಚನ್ನಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಚನ ಗಾಯನ, ವಚನ ನೃತ್ಯ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಹಾಸನ ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚನ್ನಪಟ್ಟಣ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶರಣೆ ಸೌಭಾಗ್ಯ ಅವರು “ನಿತ್ಯ ಬದುಕಿನಲ್ಲಿ ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳು” ವಿಷಯದ ಕುರಿತು ಉಪನ್ಯಾಸ ನೀಡಿದರು. ಅಕ್ಕಮಹಾದೇವಿಯವರ ವಚನವನ್ನು ಉದಾಹರಿಸಿ, ಮಕ್ಕಳಲ್ಲಿ ವಚನಗಳನ್ನು ರೂಢಿಸಿಕೊಂಡು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಬೆಳಗ್ಗೆಯಿಂದ ರಾತ್ರಿ ವರೆಗೆ ಮಾಡಿದ ಒಳ್ಳೆಯ ಕೆಲಸಗಳನ್ನು ಆತ್ಮಪರಿಶೀಲನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಕ್ಕಳೊಂದಿಗೆ ಸಂವಾದ ನಡೆಸಿ ಹಂಚಿಕೊಳ್ಳುವ ಮನೋಭಾವದ ಮಹತ್ವವನ್ನೂ ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಕುಮಾರಸ್ವಾಮಿ ಅವರು, ಶರಣ ಸಾಹಿತ್ಯ ಪರಿಷತ್ತಿನ 40ನೇ ವರ್ಷದ ಸಂಭ್ರಮವನ್ನು ಸ್ಮರಿಸಿ, ಶಾಲಾ ಮಕ್ಕಳಲ್ಲಿ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶರಣ ಕಟ್ಟಾಯ ಶಿವಕುಮಾರ್ ಅವರು ಬಸವಣ್ಣನವರ ವಚನವನ್ನು ಮಕ್ಕಳಿಗೆ ಹೇಳಿಕೊಟ್ಟು, ವಚನ ಸಾಹಿತ್ಯದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಶರಣೆ ಬಿ.ಎಸ್. ಸುನಂದ ಅವರು ಸಹ ವಚನ ಪಾಠ ಮಾಡಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ಗಿರಿಜ ನಿರ್ವಾಣಿ ಅವರು ಅಕ್ಕಮಹಾದೇವಿಯವರ ಜೀವನ ಸಾಧನೆ ಹಾಗೂ ಕದಳಿ ಕ್ಷೇತ್ರದ ಮಹತ್ವವನ್ನು ವಿವರಿಸಿದರು.
12ನೇ ಶತಮಾನದ ಪ್ರಮುಖ ಶರಣೆಯಾದ ಅಕ್ಕಮಹಾದೇವಿಯವರು ರಚಿಸಿದ ವಚನಗಳಲ್ಲಿ ಭಕ್ತಿ, ಜ್ಞಾನ ಮತ್ತು ವೈರಾಗ್ಯ ತುಂಬಿಕೊಂಡಿದ್ದು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು.
ಪಠ್ಯಪುಸ್ತಕದಲ್ಲಿಯೂ ವಚನ ಸಾಹಿತ್ಯವನ್ನು ವಿಷಯವಾಗಿ ಸೇರಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 30 ವಿದ್ಯಾರ್ಥಿಗಳು ವಚನ ಗಾಯನ ಹಾಗೂ ವಚನ ವಾಚನದಲ್ಲಿ ಭಾಗವಹಿಸಿ ಗಮನ ಸೆಳೆದರು. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶರಣೆ ಅನುಪಮಾ, ಪ್ರಾರ್ಥನೆಯನ್ನು ಶರಣಿ ಭಾರತಿ, ಸ್ವಾಗತವನ್ನು ಶರಣ ಹರೀಶ್ ಕಲ್ಲಹಳ್ಳಿ ಹಾಗೂ ವಂದನಾರ್ಪಣೆಯನ್ನು ಶರಣೆ ರುಕ್ಮಿಣಿ ಅವರು ನೆರವೇರಿಸಿದರು.
ಶರಣೆ ಗೀತಾ, ಶರಣೆ ರಕ್ಷಾ, ಶರಣೆ ಶೋಭಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಶರಣೆ ಶೋಭಾ ಅವರು ಶುಭಾಶಯ ಕೋರಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಕಾರ್ಯಕ್ರಮವನ್ನು ಸಮಾಪಿಸಲಾಯಿತು.
ವರದಿ: ಶರಣೆ ಗಿರಿಜ ನಿರ್ವಾಣಿ, ಅಧ್ಯಕ್ಷರು, ಹಾಸನ ತಾಲೂಕು ಕದಳಿ ಮಹಿಳಾ ವೇದಿಕೆ.
