ರಾಮನಾಥಪುರ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು “ಮೊಬೈಲ್ ಬಿಡಿ… ಪುಸ್ತಕ ಹಿಡಿ” ಕಾರ್ಯಕ್ರಮಕ್ಕೆ ಹನ್ಯಾಳು ಗ್ರಾಮದ ದಿ. ಗೌರಮ್ಮ ಪುಟ್ಟಸ್ವಾಮಪ್ಪ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ಎನ್. ರವಿಕುಮಾರ್ ಅವರು ಸಹಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಈ ವೇಳೆ ಮಾತನಾಡಿದ ಅವರು, ಎಸ್ಎಸ್ಎಲ್ಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಗಳಿಸುವತ್ತ ಗಮನಹರಿಸಬೇಕು ಎಂದರು.
ಮೊಬೈಲ್ ಹಾಗೂ ಟಿವಿ ಬಳಕೆ ಅಧ್ಯಯನಕ್ಕೆ ಮಾರಕವಾಗಿರುವುದರಿಂದ ಅವುಗಳನ್ನು ತಾತ್ಕಾಲಿಕವಾಗಿ ದೂರವಿಟ್ಟು ಓದಿನತ್ತ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು. ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಮೂರು ಪ್ರಶ್ನೆ ಪತ್ರಿಕೆಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ ಎಂದು ಹೇಳಿದರು. ಪೋಷಕರು ಕೂಡ ಮಕ್ಕಳಿಗೆ ಮನೆಯಲ್ಲಿ ಓದಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು ಎಂದು ವಿನಂತಿಸಿದರು.
ಇನ್ನೋರ್ವ ಶಿಕ್ಷಕಿ ಗೀತಾ ಡಿ.ಎಚ್. ಮಾತನಾಡಿ, ಯಾವುದೇ ವಿಷಯವಾಗಲಿ ವಿದ್ಯಾರ್ಥಿಗಳು ಬರೆದು ಅಭ್ಯಾಸ ಮಾಡಿದರೆ ಅದು ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿದು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸುಬ್ಬಲಕ್ಷ್ಮಿ, ಯತೀಶ್, ಕುಮಾರ್, ಭವ್ಯ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
– ಕುಮಾರಸ್ವಾಮಿ.
