ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಸ್ಥೆಯ ವತಿಯಿಂದ ಪೋಷಕರ ಸಭೆ ನಡೆಯಿತು.
ಈ ವೇಳೆ ಸಂಸ್ಥೆಯ ನಿರ್ದೇಶಕರಾದ ಕಾಳೇನಹಳ್ಳಿ ಆನಂದ್ ಕುಮಾರ್ ಮಾತನಾಡಿ, ಸಂಸ್ಥೆಯ ಗತವೈಭವವನ್ನು ಮರುಸ್ಥಾಪಿಸಲು ಅಧ್ಯಕ್ಷರಾದ ಮುರಾಜಿ ಮಂಜಣ್ಣ ಅವರ ನೇತೃತ್ವದಲ್ಲಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು. ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆಯನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಉದ್ದೇಶವಿದೆ ಎಂದರು.
ಮುಂದಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ತರುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾಜಸೇವಕ ಹಾಗೂ ಬೆಕ್ಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೇಶವಮೂರ್ತಿ ಅವರು ಸಂಸ್ಥೆಯ ಅಭಿವೃದ್ಧಿಗೆ 4 ಟನ್ ಕಬ್ಬಿಣ ನೀಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ನಾಕಲಗೂಡು ರವಿ ಮಾತನಾಡಿ, ನವೋದಯ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಈ ವರ್ಷದಿಂದ ದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.
ನಿವೃತ್ತ ಕಮಾಂಡರ್ ವೆಂಕಟೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಸ್ಥೆಯ ಆವರಣದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಯಕಲಗೋಡು, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿಜೆ ಮಂಜುನಾಥ್, ನಿರ್ದೇಶಕರಾದ ಮರುವನಹಳ್ಳಿ ಸಂತೋಷ್, ಗನ್ನಿ ಗಿರೀಶ್, ಪ್ರಾಂಶುಪಾಲ ಸಂಜಯ್ ಕುಮಾರ್, ಉಪ ಪ್ರಾಂಶುಪಾಲ ಸ್ವಾಗತಹಳ್ಳಿ ಎಸ್.ಸಿ. ಸುರೇಶ್, ಮುಖ್ಯೋಪಾಧ್ಯಾಯ ಸೀತಾರಾಮ್ ನಾಯಕ್, ಹಾಸನ ಎಕ್ಸ್ಪ್ರೆಸ್ ಸಂಪಾದಕ ನಾಗರಾಜು ಸೇರಿದಂತೆ ಹಲವಾರು ಹಾಜರಿದ್ದರು.
– ಮಂಜುನಾಥ್ ಐ.ಕೆ.
