ಕೆ.ಆರ್.ಪೇಟೆ: ಪಟ್ಟಣದ ಪ್ರಗತಿ ಶಾಲೆಯಲ್ಲಿ ಮಕ್ಕಳ ಬಿಸಿ ಊಟ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ದಾನಿಗಳಾದ ರಾಜೇಶ್, ಕೆ.ಬಿ. ನಂದೀಶ್ ಹಾಗೂ ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ತಟ್ಟೆಗಳನ್ನು ವಿತರಿಸಿದರು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರು ಹಾಗೂ ಸಮಾಜಸೇವಕರಾದ ಕೆ.ಎಸ್. ರಾಜೇಶ್ ಉದ್ಘಾಟಿಸಿ ಮಾತನಾಡಿದರು. ಸಮಾಜದ ಸುಸ್ಥಿರ ಅಭಿವೃದ್ಧಿಗೆ ಸಮಾಜಸೇವೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಭಾಗವನ್ನು ದಾನವಾಗಿ ನೀಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು. ಇದರಿಂದ ಸಮಾಜದಲ್ಲಿ ಪರಸ್ಪರ ಸಹಕಾರ ಮತ್ತು ಮಾನವೀಯತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರು ಹಾಗೂ ಲೇಖಕರಾದ ಕೆ. ಕಾಳೇಗೌಡ ವಹಿಸಿದ್ದರು. ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅಗತ್ಯವಾದ ಪೂರಕ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಮುಖ್ಯವಾಗಿದ್ದು, ಸರ್ಕಾರ ನೀಡುವ ಬಿಸಿ ಊಟ ಕಾರ್ಯಕ್ರಮವು ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರವಾಗಿ ತಲುಪಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದ ದಾನಿಗಳನ್ನು ಅವರು ಅಭಿನಂದಿಸಿದರು.

ಸಮಾಜದಲ್ಲಿ ಉತ್ತಮ ಕಾರ್ಯಗಳಿಗೆ ಗೌರವ ನೀಡಿದಾಗ ಸಮಾಜವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನರಿಗೆ ಸುಲಭವಾಗಿ ದೊರಕಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆತಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಕನ್ನಡ ಮಾಧ್ಯಮದ ಪ್ರಗತಿ ಶಾಲೆಯ ಸೇವೆಯನ್ನು ಅವರು ಮೆಚ್ಚಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯರಾದ ಕೆ.ಬಿ. ನಂದೀಶ್ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ಬಿ.ಸಿ.ಎಸ್. ಕುಮಾರ್, ಪ್ರಗತಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್. ಮಂಜುನಾಥ್, ಮುಖ್ಯ ಶಿಕ್ಷಕ ಎಚ್.ಆರ್. ಗೋಪಾಲಕೃಷ್ಣ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಂದಿನಿ, ಶಿಕ್ಷಕಿಯರಾದ ಎಚ್.ಆರ್. ಸೋಭಾ, ಧನಲಕ್ಷ್ಮಿ, ಎಂ. ಲಕ್ಷ್ಮೀದೇವಿ, ಎಚ್.ಎ. ವನಿತಾ ಹಾಗೂ ಸಬೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ನಂದಿನಿ ಹಾಗೂ ಪೂರ್ವಿಕಾ ಸ್ವಾಗತಿಸಿದರು. ವಿಜಯಲಕ್ಷ್ಮಿ ವಂದಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.
– ಶ್ರೀನಿವಾಸ್ ಆರ್.
