ತಂತ್ರ ಶಾಸ್ತ್ರದ ಪ್ರಕಾರ ‘ಲೈಂಗಿಕತೆ’ ಹಿನ್ನುಡಿ ಎಂಬುದನ್ನು ನಮ್ಮ ಜೀವತಂತುವಿನಲ್ಲೇ ಬರೆದಿದೆ, ಆದರೇ ನಮ್ಮ ನಮ್ಮ ಸಂಸಾರಗಳಲ್ಲಿ ಇದೇ ಲೈಂಗಿಕತೆ ಮುನ್ನುಡಿ ಎಂಬುದನ್ನು ನಾವು ಮರೆಯಬಾರದು. ಈ ಕಾರಣದಿಂದ ಏನೋ ಲೈಂಗಿಕತೆಯನ್ನು ಸಂಭ್ರಮಿಸುವ ವಿಚಾರ ಆದಿ ಕಾಲದಿಂದ ಬಂದಿದೆ. ಕಾಮ ಅಥವ ಇಂದ್ರಿಯ ತೃಷೆ ಇತ್ತೀಚಿನದ್ದು. ನಮ್ಮ ಜೀವನದಲ್ಲಿ ಲೈಂಗಿಕ ವಿಚಾರಕ್ಕೆ ಬಂದಾಗ ಲೈಂಗಿಕತ್ವ ತನ್ನದೇ ಆದ ಛಾಪು ಅಥವ ಬ್ರಾಂಡ್ ಮೂಡಿಸಿದೆ. ಉದಾಹರಣೆಗೆ, ಹೇಗೆ ‘ಲೆಗೊ’ ಬ್ರಾಂಡಿನ ಆಟಿಕೆ ಸಾಮಾನುಗಳನ್ನು ಮಕ್ಕಳು ಕಂಡು ವಿಜೃಂಭಿಸುತ್ತಾರೋ ಹಾಗೆ. ಲೈಂಗಿಕತೆಯನ್ನು ನಾನು ಯಾವಾಗ ಬ್ರಾಂಡ್ ಎಂದು ಕರೆದನೋ ಅಂದೇ ಲೈಂಗಿಕ ನಡುವಳಿಕೆಗೆ ತನ್ನದೇ ಆದ ಚೌಕಟ್ಟನ್ನು ನಿರ್ಮಿಸಿದೆ. ಇದನ್ನು ಮೀರುವಹಾಗಿಲ್ಲ. ಈ ಕಾರಣಕ್ಕೆ ಮುಂದುವರಿದು ‘ಪ್ರೀತಿ ಅಥವ ಪ್ರೇಮ’ ವನ್ನು ನೋಡುವುದಾದರೆ ಇಲ್ಲಿ ಯಾವ ಚೌಕಟ್ಟು ಇಲ್ಲ. ಸಂಭ್ರಮಿಸುವ ಪ್ರಶ್ನೆಯೇ ಇಲ್ಲ. ನಮ್ಮ ವೇದಾಂತದ ಪ್ರಕಾರ ಪ್ರೇಮವನ್ನು ಅಂದಿನ ಋಷಿಗಳು ದೈವಿಕ ಸ್ವರೂಪ ಅಥವ ಭಗವಂತನ ಸ್ವರೂಪ ಎಂದಿದ್ದರು. ಪ್ರೀತಿಯನ್ನು ಅಖಂಡ ವಿದ್ಯೆಯೆ ಸರಿ ಎಂದು ಅಂದಿನ ಮುನಿವರ್ಯರು ಹೇಳಿರುವ ವಾಖ್ಯಾನಗಳು ಇವೆ. ಇಂತಹ ವಿವರಣಾತ್ಮಕ ವಿಚಾರಗಳಿಂದ ಲೈಂಗಿಕತೆಯನ್ನು ಅನುಭೋಗಿಸಬಹುದು ಆದರೆ ಪ್ರೇಮವನ್ನು ಅಸ್ವಾಧಿಸಬಹುದು.
ಕಾಮಕೇಳಿ ಅಥವ ತೃಷೆ ಈವತ್ತಿನ ಪದ. ಹಿಂದೆ ಇರಲಿಲ್ಲ. ಹಿಂದೆ ಇದ್ದಿದ್ದೇ ‘ಪ್ರೇಮ’. ಪ್ರೇಮಾಂಕುಶ ದೈವ ಪ್ರಧಾನವಾದದ್ದು. ಪ್ರೇಮಾನುಬಂಧ ತ್ವರಿತವಾಗಿ ಆಗುವ ಕ್ರಿಯೆ ಅಲ್ಲ. ಸಮಯ ಮತ್ತು ಸ್ಥಳವಿರಬೇಕು. ಇಂದು ಇವರೆಡರ ಅಭಾವದಿಂದ ಪ್ರೇಮ ಪ್ರೇಮವಾಗಿ ಇರದೆ ತ್ವರಿತ ಲೈಂಗಿಕೋತ್ಸವ ಆಗಿ ಮಾರ್ಪಡಾಗಿದೆ.
ನಮಗೆ ಸೃಷ್ಟಿಕರ್ತ ಕಣ್ಣು ಕೊಟ್ಟಿದ್ದಾನೆ. ಭೌತಶಾಸ್ತ್ರದಲ್ಲಿ ನಾವು ನೋಡುವ ದೃಷ್ಟಿ ನೆಟ್ಟಗೆ ಇರುವದು. ದೃಷ್ಟಿಗೆ ಅಂಕು ಡೊಂಕುಗಳು ಇರುವುದಿಲ್ಲ. ಈ ಕಾರಣದಿಂದ ನಾವು ನಮ್ಮ ಮುಖವನ್ನು ನೋಡಲು ಅಸಾಧ್ಯ. ನಮ್ಮ ಮುಖದ ಚಿತ್ರಣ ನೋಡಬೇಕಾದರೆ ಕನ್ನಡಿಯಲ್ಲಿ ನೋಡಬೇಕು. ಸಹಸ್ರಾರು ವರ್ಷಗಳ ಹಿಂದೆ ಕನ್ನಡಿ ಎಲ್ಲಿ ಇತ್ತು? ಆಗ ಕನ್ನಡಿ ಯಾವುದೆಂದರೆ ಪ್ರತಿಫಲಿಸುವ ನಮ್ಮ ನಮ್ಮ ಕಣ್ಣುಗಳೇ ಆಗಿದ್ದವು. ಈ ಕಣ್ಣುಗಳ ಮೂಲಕವೇ ಮಾನವರು ತಮ್ಮ ತಮ್ಮ ಮುಖದ ಛಾಯೆಯನ್ನು ಗ್ರಹಿಸುತ್ತಿದ್ದರು. ಇದರಿಂದಲೇ ಏನೋ ಮಾನವನ ಪ್ರೇಮೋತ್ಸವ ಕಣ್ಣಲ್ಲಿ ಕಣ್ಣು ಇಡುವುದರಿಂದ ಆಗುತ್ತದೆ ಎಂದು ಹಿಂದೆ ಹೇಳುತ್ತಿದ್ದರು. ಪ್ರಾಣಿಗಳಲ್ಲಿ ಮಿಥನೋತ್ಸವವು ಹಿಂಬದಿಯಿಂದ ಇರುತ್ತೆ. ಆದರೆ ಮಾನವನಲ್ಲಿ ಮಾತ್ರ ಮುಖಾ ಮುಖಿಯಾಗಿ ಅಥವ ಕಣ್ಣು ಕಣ್ಣಿನ ನಡುವೆ ಮಿಲನೋತ್ವವ ಆಗುತ್ತದೆ. ಈ ಭಂಗಿಗೆ ಇಂಗ್ಲಿಷ್ನಲ್ಲಿ “ಮಿಶನ್ ಅಪ್ರೋಚ್” ಎಂದು ಕರೆಯುತ್ತಾರೆ. ತಂತ್ರ ಸಿದ್ಧಾಂತದಲ್ಲಿ ಈ ‘ಮಿಶನ್’ ನ್ನು ‘ಮ್ಯೆಕಾನಿಕ್ಸ’ ಎಂದನ್ನಬಹುದೇ? ನಾನು ವಿಶ್ವದ ಯಾವುದೇ ಜೀವಿಯ ಜೈವಿಕ ವಿನ್ಯಾಸದ ತಾಂತ್ರಿಕ ಪ್ರಗತಿಯನ್ನು ‘ಮ್ಯೆಕಾನಿಕ್ಸ ಆಫ್ ಲೈಫ್’ ಅಂತ ಇಂಗ್ಲಿಷ್ನಲ್ಲಿ ಕರೆದಿದ್ದೇನೆ.
ಮೂಲತಹ ಹಿಂದು ಧರ್ಮ ಗ್ರಂಥಗಳಲ್ಲಿ ಮಾನವನ ಮಿಲನವನ್ನು ‘ಪ್ರೇಮ’ ವೆಂದೇ ದಾಖಲಾಗಿದೆ. “ವಾತ್ಸಾಯಾನ” ನಿಘಂಟಿನಲ್ಲಿ ಹಲವಾರು ಭಂಗಿಗಳನ್ನು ಮಿಥನೋತ್ಸವೆಂದೇ ಬಣ್ಣಿಸಲಾಗಿದೆ. “ಇಂದ್ರಿಯ ತೃಷ್ಣೆ” ಅಥವಾ “ಲಸ್ಟ್” ಎಂದು ವಾತ್ಸಾಯಾನ ನಿಘಂಟಿನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.
ಸ್ವಾಮಿ ವಿವೇಕಾನಂದರು ಪ್ರೇಮವನ್ನು ಕುರಿತು “ಪ್ರೇಮ ಪರರಿಗೆ ನೀಡುವಂತಾದ್ದು, ಅದನ್ನು ಕೊಟ್ಟಮೇಲೆ ಮತ್ತೆ ನಿರೀಕ್ಷಿಸುವುಂತಾದ್ದು ಅಲ್ಲ”. ಈ ನಿರೂಪಣೆಗಳಿಗೆ ಸಮಾನಾಂತರವಾದ ತಂತ್ರಜ್ಞಾನ ವಿವರಣೆ ನೀಡುವ ಪ್ರಯತ್ನ ಮಾಡುವುದೇ ಈ ನನ್ನ ಲೇಖನ.
ತಂತ್ರ ವಿಜ್ಞಾನದಲ್ಲಿ ಜೀವೋದ್ದಾರಕೆಯಾದ ‘ಪಾರ್ವತಿ’ ಯು ಯಾವಾಗಲೂ ಅತಿ ಮಾತನಾಡುವ ಮಾತೆ. ಆದರೆ ಜಗತ್ತೊದ್ದಾರಕ ‘ಶಿವ’ ಯಾವಾಗಲೂ ಸೌಮ್ಯ ಮೂರ್ತಿ. ಜಗನ್ಮಾತೆ ಪಾರ್ವತಿಯ ಪ್ರಶ್ನೆಗಳಿಗೆ ಮತ್ತು ಹೇಳಿಕೆಗಳಿಗೆ ಶಿವನು ಹೌದು ಅಥವ ಇಲ್ಲ ಎಂದು ತಲೆ ತೂಗುವುದರೊಂದಿಗೆ ಉತ್ತರವನ್ನು ನೀಡುತ್ತಿದ್ದನು. ಶಿವನು ಎಷ್ಟರ ಮಟ್ಟಿಗೆ ಶಕ್ತಿಶಾಲಿ ಎಂದು ಪಾರ್ವತಿ ಮಾತೆಗೆ ಅರಿವಿತ್ತು. ಪಾರ್ವತಿ ಮಾತೆ ಶಿವನಿಗೆ ಸಿಟ್ಟು ಬಾರದಂತೆ ನೋಡಿಕೊಳ್ಳುತ್ತಿದ್ದಳು. ಶಿವ ತನ್ನ ಕೋಪದಲ್ಲಿ ಮೂರನೆ ಕಣ್ಣನ್ನು ಬಿಟ್ಟರೆ ವಿಶ್ವವೇ ಸುಟ್ಟು ಬೂದಿಯಾಗುವುದು ಖಚಿತ. ಈ ಕಾರಣದಿಂದ ಮಾತೆ ಯಾವಾಗಲೂ ತನ್ನ ಸೆರಗನ್ನು ತೆರೆದೇ ಇಡುತ್ತಿದ್ದಳು. ಸ್ವಲ್ಪ ಅಥವ ಅಲ್ಪ ಕೋಪದ ಶಕ್ತಿಯನ್ನು ತನ್ನ ಸೆರೆಗಿನಲ್ಲಿ ಹಿಡಿದು ಜೀವೋದ್ದಾರಕಿ ಆದಳೆಂಬುದು ತಂತ್ರ ಸಿದ್ಧಾಂತ ತಿಳಿಸಿದೆ. ಇದೇ ಕಾರಣದಿಂದ ನಾವು ಪೂಜೆ ಮಾಡುವ ಲಿಂಗಾಕೃತಿ ನಮಗೆ ಶಕ್ತಿ ಮತ್ತು ಸೆರೆಗಿನ ಭಾವ ಸಂಕೇತವಾಗಿದೆ.
ನಾನು ಚಾರ್ ಧಾಮ್ ಪ್ರವಾಸದಲ್ಲಿ ಇದ್ದಾಗ ‘ಗುಪ್ತ ಕಾಶಿ’ ಗೆ ಬೇಟಿ ನೀಡಿದ್ದೆ. ಅಲ್ಲಿ “ಅರ್ಧ ನಾರೀಶ್ವರ” ನ ದೇವಸ್ಥಾನವಿದೆ. ಈ ಅರ್ಧ ನಾರೀಶ್ವರನನ್ನು ಪ್ರತಿಷ್ಠಾಪನೆ ಮಾಡಿದ್ದು ಪಾಂಡವರೆಂದು ಪುರಾಣದಲ್ಲಿ ಹೇಳಲಾಗಿದೆ. ಕುರುಕ್ಷೇತ್ರ ಯುದ್ಧ ಶುರು ಆಗೋ ಮುನ್ನ ಪಾಂಡವರು ಶಿವನ ಆಶೀರ್ವಾದ ಪಡೆಯಲು ಗುಪ್ತ ಕಾಶಿಗೆ ಹೋಗಿ ಶಿವನನ್ನು ಪ್ರಾರ್ಥಿಸಿದರು. ಇವರ ಇಷ್ಟದಂತೆ ಶಿವ ದರ್ಶನ ಕೊಡಲೇ ಇಲ್ಲ. ಒಂದು ವದಂತಿ ಇದೆ. ಈ ಪಾಂಡವರು ತಮ್ಮ ಆಡಳಿತಾರೂಢ ಸಮಯದಲ್ಲಿ ಅವರ ಬಂಧುಗಳನ್ನು ಕೊಂದಿದ್ದರು ಎನ್ನುವದು. ಇದರಿಂದ ಶಿವನಿಗೆ ಕೋಪವಿತ್ತು ಎಂಬುದರ ಉಲ್ಲೇಖ ಪುರಾಣದಲ್ಲಿ ಇದೆಯಂತೆ. ಪಾಂಡವರ ಅತಿಯಾದ ಪ್ರಯತ್ನದಿಂದ ಶಿವ ಒಪ್ಪಿ ತನ್ನ ನಿಜ ಸ್ವರೂಪದಲ್ಲಿ ಪ್ರತ್ಯಕ್ಷನಾಗದೆ ‘ಅರ್ಧ ನಾರೀಶ್ವರ’ ನ ರೂಪದಲ್ಲಿ ಪ್ರತ್ಯಕ್ಷನಾಗಿ ಆಶೀರ್ವಾದ ಮಾಡಿದ್ದ ಎಂದು ಅಲ್ಲಿನ ಶಾಸ್ತ್ರಿಗಳು ಹೇಳುತ್ತಾರೆ.
ಈ ಅರ್ಧ ನಾರೀಶ್ವರ ಯಾರು? ಇವನು ಆತ್ಮ ಲಿಂಗವೇ? ಅದ್ವೈತ ತಂತ್ರ ವಿಚಾರದಲ್ಲಿ ‘ಲಿಂಗ’ ಜೀವನೋದ್ದಾರದ ಸಂಕೇತ. ವೈಜ್ಞಾನಿಕವಾಗಿ ನೋಡುವುದಾದರೆ ಹೆಣ್ಣು ಮತ್ತು ಗಂಡಸರ ಒಳಗೆ ಶಕ್ತಿ ಮತ್ತು ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಸೃಷ್ಟಿಕರ್ತ ಕೊಟ್ಟು ಬಿಟ್ಟಿದ್ದಾನೆ. ಈ ಶಕ್ತಿ ಯಾವುದು? ಹಿಡಿದಿಟ್ಟುಕೊಳ್ಳುವ ವಸ್ತು ಯಾವುದು? ನಾನು ವೈದ್ಯನಾಗಿ ಇವುಗಳನ್ನು ಹಾರ್ಮೋನ್ಸಗೆ ಹೋಲಿಸಿದಾಗ “ಟೆಸ್ಟೋಸ್ಟೀರೋನ್” ಮತ್ತು “ಎಸ್ಟ್ರೋಜನ್” ಗೆ ಹೋಲಿಸುವೆನು. ಗಂಡಸರಿಗೆ ಟೆಸ್ಟೋಸ್ಟಿರೋನ್ ಹೆಚ್ಚಿನ ಅಂಶದಲ್ಲಿ ಇರುತ್ತಾದರು ಕಡಿಮೆ ಅಂಶದಲ್ಲಿ ಎಸ್ಟ್ರೋಜನ್ ಇರುತ್ತೆ. ಹೆಂಗಸರಲ್ಲಿ ತದ್ವಿರುದ್ದ. ಈ ಹಾರ್ಮೋನ್ಗಳ ನೈಜ ಸ್ಥಿತಿಯನ್ನು ತಿಳಿಸಿದ ಮೊದಲನೆ ವಿಜ್ಞಾನಿ “ಭಗವಾನ್ ಬುದ್ಧ”. ಚೀನಾ ಕಾನ್ಫುಸಿಯಸ್ ಧರ್ಮದ ಪ್ರಕಾರ ಮಾನವನನ್ನು “ಯಂಗ್ ಮತ್ತು ಯಿನ್” ಸಂಕೇತದಲ್ಲಿ ಗುರುತಿಸಲಾಗಿದೆ. ಅಂದರೆ ಹೆಣ್ಣು ಮತ್ತು ಗಂಡಸಿನ ಅಂಶ ಇಬ್ಬರಲ್ಲೂ ಇರುತ್ತೆ ಎಂದು. ಮಹಾನ್ ಚೇತನಮಯಿ ಬುದ್ಧ ಈ ಪರಿಕಲ್ಪನೆಯನ್ನು “ತಿಳಿ, ತಿಳಿದಿದ್ದನ್ನು ವಿಮರ್ಶಿಸು. ವಿಮರ್ಶಿಸಿದ ನಂತರ ಉತ್ತರವನ್ನು ನೀಡು” ಎಂದಿದ್ದರು. ಇದೇ ಕಲ್ಪನೆ ಹಿಂದು ಶಾಸ್ತ್ರದಲ್ಲಿ “ಶ್ರವಣ, ಮನನ ಮತ್ತು ಆಗಮನ” ಎಂದು ಹೇಳಲಾಗಿದೆ. ನಾನು ಮನೋ ವೈದ್ಯನಾದ್ದರಿಂದ ಈ ವಿಷಯವನ್ನು ನನ್ನ “ಓಪನ್ ಮೆಡಿಟೇಷನ್” ಅಥವ “ಕಣ್ಣು ತೆರೆದು ಧ್ಯಾನಿಸು” ತಂತ್ರಗಾರಿಕೆಯಲ್ಲಿ “ಪರ್ಷಪ್ಶನ್, ಕನ್ಷಪ್ಶನ್ ಮತ್ತು ರೀಸನಿಂಗ್ (ಗ್ರಹಿಸು, ಅರ್ಥಮಾಡಿಕೊ, ಉತ್ತರಿಸು)” ಎಂದು ವಿವರಿಸಿದ್ದೇನೆ. ಈ ಸಮೀಕರಣವೇ “ಯೋಗ” …
ಮುಂದುವರಿಯುವುದು..
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

