ನವದೆಹಲಿ: ದೇಶದ ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನವೀಕರಿಸಬಹುದಾದ ಇಂಧನ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ಸೋಮವಾರ ನಡೆದ ‘ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ-2026’ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯಿಂದ ಉಂಟಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ ಶುದ್ಧ ಇಂಧನದ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

ಪಳೆಯುಳಿಕೆ ಇಂಧನಗಳ ನಿಕ್ಷೇಪಗಳು ಸೀಮಿತವಾಗಿದ್ದು, ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಹೀಗಾಗಿ ಅವುಗಳ ಮೇಲಿನ ಅತಿಯಾದ ಅವಲಂಬನೆಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ನವೀಕರಿಸಬಹುದಾದ ಇಂಧನವು ಜಗತ್ತಿನಾದ್ಯಂತ ಲಭ್ಯವಿರುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇಂಧನ ಭದ್ರತೆಯ ಭವಿಷ್ಯ ಶುದ್ಧ ಇಂಧನದಲ್ಲಿದೆ ಎಂದು ಅವರು ತಿಳಿಸಿದರು.
ಸೌರಶಕ್ತಿಯ ಬಳಕೆಯಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಸ್ಟಾರ್ಟ್ಅಪ್ಗಳು, ಐಐಟಿಗಳು, ಸಂಶೋಧಕರು, ಆವಿಷ್ಕಾರಕರು ಹಾಗೂ ಉದ್ಯಮಿಗಳು ಸೌರಶಕ್ತಿಯ ಮೂಲಕವೇ ಮನೆಗಳ ಗರಿಷ್ಠ ಇಂಧನ ಅಗತ್ಯಗಳನ್ನು ಪೂರೈಸುವ ಮಾದರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
ಮನೆಯ ಮೇಲ್ಛಾವಣಿ ಸೌರಶಕ್ತಿಯ ಮೂಲಕ ಅಡುಗೆ ವ್ಯವಸ್ಥೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಚಾರ್ಜಿಂಗ್ ಸೌಲಭ್ಯ ಸೇರಿದಂತೆ ದಿನದ 24 ಗಂಟೆಯೂ ಹಾಗೂ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಗಳನ್ನು ರೂಪಿಸಬೇಕು. ಇದರಿಂದ ಆಮದು ಮಾಡಿಕೊಳ್ಳುವ ಅನಿಲದ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಮಧ್ಯಮ ವರ್ಗದ ಕುಟುಂಬಗಳು ಪ್ರತಿ ವರ್ಷ ಸಾವಿರಾರು ರೂಪಾಯಿಗಳನ್ನು ಉಳಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ನವೀಕರಿಸಬಹುದಾದ ಇಂಧನ, ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ, ಕಳೆದ 12 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಇಂಧನ ಕ್ಷೇತ್ರಕ್ಕೆ ಹೊಸ ದಿಕ್ಕು ಮತ್ತು ವೇಗ ದೊರೆತಿದೆ ಎಂದರು.
ಪ್ರಧಾನಮಂತ್ರಿಯವರು ₹5,000 ಕೋಟಿಗೂ ಅಧಿಕ ವೆಚ್ಚದ ‘ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ’ಗೆ ಅನುಮೋದನೆ ನೀಡಿದ್ದು, ಇದರಡಿ 5,000 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೌರ ವಿದ್ಯುತ್ ಘಟಕಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ₹1.86 ಲಕ್ಷ ಕೋಟಿ ಹೂಡಿಕೆಯ ಗ್ರೀನ್ ಎನರ್ಜಿ ಕಾರಿಡಾರ್ ಹಂತ-3 ಯೋಜನೆಗೂ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ಭಾರತದ ಆರ್ಥಿಕ ಬೆಳವಣಿಗೆಯೊಂದಿಗೆ ಇಂಧನದ ಬೇಡಿಕೆಯೂ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ.7ಕ್ಕೆ ಪರಿಷ್ಕರಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಸುಸ್ಥಿರವಾಗಿ ಪೂರೈಸಲು ನವೀಕರಿಸಬಹುದಾದ ಇಂಧನ ಕ್ಷೇತ್ರದ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ಹೇಳಿದರು.
2024ರ ಸೆಪ್ಟೆಂಬರ್ನಲ್ಲಿ ಭಾರತದ ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ 200 ಗಿಗಾವ್ಯಾಟ್ ದಾಟಿತ್ತು. ಇದೀಗ ಅದು 310 ಗಿಗಾವ್ಯಾಟ್ಗೆ ತಲುಪಿದ್ದು, ಕೇವಲ ಎರಡು ವರ್ಷಗಳಲ್ಲಿ 110 ಗಿಗಾವ್ಯಾಟ್ಗೂ ಅಧಿಕ ಸಾಮರ್ಥ್ಯ ಸೇರ್ಪಡೆಯಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಆರು ದಿನಗಳಿಗೊಮ್ಮೆ ಒಂದು ಲಕ್ಷಕ್ಕೂ ಅಧಿಕ ಘಟಕಗಳ ಸ್ಥಾಪನೆಯಾಗುತ್ತಿದೆ ಎಂದು ವಿವರಿಸಿದರು.
ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಲ್ಲಿ 67 ಬಿಲಿಯನ್ ಅಮೆರಿಕನ್ ಡಾಲರ್ಗೂ ಅಧಿಕ ಹೂಡಿಕೆ ಹರಿದುಬಂದಿದೆ. ಇದೇ ಅವಧಿಯಲ್ಲಿ 6.2 ಬಿಲಿಯನ್ ಅಮೆರಿಕನ್ ಡಾಲರ್ ನೇರ ವಿದೇಶಿ ಹೂಡಿಕೆಯೂ ಆಗಿದೆ. ಇದು ಈ ಕ್ಷೇತ್ರದ ಮೇಲಿನ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದರು.
ಕಳೆದ 12 ವರ್ಷಗಳಲ್ಲಿ ಭಾರತದ ಪಳೆಯುಳಿಕೆಯೇತರ ಇಂಧನ ಸ್ಥಾಪಿತ ಸಾಮರ್ಥ್ಯ 80.3 ಗಿಗಾವ್ಯಾಟ್ನಿಂದ 310 ಗಿಗಾವ್ಯಾಟ್ಗೆ ಏರಿಕೆಯಾಗಿದ್ದು, ಶೇ.280ರಷ್ಟು ಬೆಳವಣಿಗೆ ದಾಖಲಿಸಿದೆ. ಸೌರ ವಿದ್ಯುತ್ ಸಾಮರ್ಥ್ಯ 2.8 ಗಿಗಾವ್ಯಾಟ್ನಿಂದ 171 ಗಿಗಾವ್ಯಾಟ್ಗೆ ಏರಿಕೆಯಾಗಿದ್ದು, ಶೇ.5,800ರಷ್ಟು ವೃದ್ಧಿಯಾಗಿದೆ. ಪವನ ವಿದ್ಯುತ್ ಸಾಮರ್ಥ್ಯ 21 ಗಿಗಾವ್ಯಾಟ್ನಿಂದ 60 ಗಿಗಾವ್ಯಾಟ್ಗೆ ತಲುಪಿದ್ದು, ಶೇ.176ರಷ್ಟು ಪ್ರಗತಿ ಸಾಧಿಸಿದೆ ಎಂದು ಮಾಹಿತಿ ನೀಡಿದರು.
ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ 2 ಗಿಗಾವ್ಯಾಟ್ನಿಂದ 225 ಗಿಗಾವ್ಯಾಟ್ಗೆ ಏರಿಕೆಯಾಗಿದ್ದು, ಸೌರ ಸೆಲ್ ಉತ್ಪಾದನಾ ಸಾಮರ್ಥ್ಯ ಶೂನ್ಯದಿಂದ 45 ಗಿಗಾವ್ಯಾಟ್ಗೆ ತಲುಪಿದೆ. ಪವನ ವಿದ್ಯುತ್ ಟರ್ಬೈನ್ ಉತ್ಪಾದನಾ ಸಾಮರ್ಥ್ಯವೂ 10 ಗಿಗಾವ್ಯಾಟ್ನಿಂದ 24 ಗಿಗಾವ್ಯಾಟ್ಗೆ ಹೆಚ್ಚಾಗಿದೆ ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ಉತ್ಪಾದನಾ ವೆಚ್ಚದಲ್ಲಿಯೂ ಗಣನೀಯ ಇಳಿಕೆಯಾಗಿದೆ. 2011-12ರಲ್ಲಿ ಪ್ರತಿ ಯೂನಿಟ್ ಸೌರ ವಿದ್ಯುತ್ ದರ ₹10ರಿಂದ ₹11ರಷ್ಟಿದ್ದರೆ, 2024-25ರಲ್ಲಿ ಅದು ₹2.15ಕ್ಕೆ ಇಳಿಕೆಯಾಗಿದೆ. ಗ್ರೀನ್ ಹೈಡ್ರೋಜನ್ ಪ್ರತಿ ಕೆ.ಜಿ.ಗೆ ₹279 ಹಾಗೂ ಗ್ರೀನ್ ಅಮೋನಿಯಾ ಪ್ರತಿ ಕೆ.ಜಿ.ಗೆ ₹49.75ರ ದರದಲ್ಲಿ ಲಭ್ಯವಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ದರವಾಗಿದೆ. ಗ್ರೀನ್ ಹೈಡ್ರೋಜನ್ ಖರೀದಿ ಬದ್ಧತೆಗಳಲ್ಲಿಯೂ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಸಾಧನೆ ವಿಸ್ತರಣೆ, ವೇಗ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ನಾಯಕತ್ವದ ಫಲವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ-2026 ದೇಶದಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಆವಿಷ್ಕಾರಕ್ಕೆ ಉತ್ತೇಜನ ನೀಡುವ ಪ್ರಮುಖ ವೇದಿಕೆಯಾಗಿದೆ. ಜಾಗತಿಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ, ಆವಿಷ್ಕಾರ ನಡೆಸಿ, ಭಾರತದ ಬೆಳವಣಿಗೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಆಹ್ವಾನ ನೀಡಿದರು.
ಈ ಶೃಂಗಸಭೆಯು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಒಂಬತ್ತನೇ ಸಮಾವೇಶ ಹಾಗೂ ಗ್ರೀನ್ ಹೈಡ್ರೋಜನ್ ಕುರಿತ ನಾಲ್ಕನೇ ಸಮಾವೇಶದ ಪ್ರತಿನಿಧಿಗಳ ಭಾಗವಹಿಸುವಿಕೆಯಿಂದ ವಿಶೇಷ ಮಹತ್ವ ಪಡೆದಿದೆ.
