ಕೊರಟಗೆರೆ: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ, ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕೊರಟಗೆರೆ ತಾಲ್ಲೂಕು ವಕೀಲರ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಯಿತು.
ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ ಮಂಗಳವಾರ ಬೆಳಿಗ್ಗೆ ಕೊರಟಗೆರೆಯ ಜೆಎಂಎಫ್ಸಿ ನ್ಯಾಯಾಲಯದ ಆವರಣದಿಂದ ತಾಲ್ಲೂಕು ಕಚೇರಿವರೆಗೆ ವಕೀಲರು ಬ್ಯಾನರ್ಗಳನ್ನು ಹಿಡಿದು ಜಾಥಾ ನಡೆಸಿದರು.
ನಂತರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ಪಟ್ಟಣದ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ವಕೀಲರ ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಗೌರಿಬಿದನೂರಿನ ಹಿರಿಯ ವಕೀಲ ವೆಂಕಟರಮಣ ಸಣ್ಣಕ್ಕಿ ಅವರ ಮೇಲಿನ ಕೊಲೆ ಯತ್ನ ಹಾಗೂ ಬೆಂಗಳೂರಿನ ವೈಟ್ಫೀಲ್ಡ್ನ ವಕೀಲ ಮಂಜುನಾಥ್ ಶ್ರೀರಾಮ್ ಮತ್ತು ಅನ್ನಪೂರ್ಣೇಶ್ವರಿ ನಗರದ ವಕೀಲರ ಹತ್ಯೆ ಪ್ರಕರಣಗಳನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ಸಂತೋಷ್ ಮಾತನಾಡಿ, ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ಇಂದು ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ವಕೀಲರ ಮೇಲಿನ ಹಲ್ಲೆ ಎಂದರೆ ಅದು ನ್ಯಾಯ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಸರ್ಕಾರ ಕೂಡಲೇ ವಕೀಲರ ಸುರಕ್ಷತಾ ಕಾಯ್ದೆಯನ್ನು ಬಲಪಡಿಸಿ, ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ವಕೀಲ ಟಿ. ಕೃಷ್ಣಮೂರ್ತಿ ಮಾತನಾಡಿ, ವಕೀಲ ವೃತ್ತಿ ಸಮಾಜದ ನ್ಯಾಯದ ಕಣ್ಣು ಇದ್ದಂತೆ. ವಕೀಲರನ್ನು ಬೆದರಿಸುವುದು, ಹಲ್ಲೆ ನಡೆಸುವ ಮೂಲಕ ನ್ಯಾಯದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಗೌರಿಬಿದನೂರು ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳು ಇಡೀ ವಕೀಲ ಸಮುದಾಯವನ್ನು ಆತಂಕಕ್ಕೀಡು ಮಾಡಿವೆ. ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಲ್. ನಾಗರಾಜು ಮಾತನಾಡಿ, ವಕೀಲರ ಮೇಲಿನ ದಾಳಿ ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ; ಅದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ವಾದ ಮಂಡಿಸುವ ವಕೀಲರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಖಂಡನೀಯ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಲಾಪ ಬಹಿಷ್ಕಾರ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ಸಲ್ಲಿಸಿದ ಮನವಿಯ ಪ್ರಮುಖ ಬೇಡಿಕೆಗಳು:
- – ರಾಜ್ಯದಲ್ಲಿ ವಕೀಲರ ಸುರಕ್ಷತಾ ಕಾಯ್ದೆಯನ್ನು ಕೂಡಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
- – ವಕೀಲರ ಮೇಲಿನ ನಿರಂತರ ಹಲ್ಲೆ ಮತ್ತು ದೌರ್ಜನ್ಯಗಳನ್ನು ತಡೆಯಲು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
- – ವಕೀಲರ ಜೀವ ಮತ್ತು ವೃತ್ತಿಪರ ಸುರಕ್ಷತೆಗೆ ವಿಶೇಷ ಕಾನೂನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಎನ್. ಹನುಮಂತರಾಜು, ಕಾರ್ಯದರ್ಶಿ ಎಂ.ಎಚ್. ಮಂಜುನಾಥ್, ಜಂಟಿ ಕಾರ್ಯದರ್ಶಿ ಡಿ.ಕೆ. ಕೃಷ್ಣ, ಡಿ.ಜಿ. ತಿಮ್ಮರಾಜು, ಜಿ.ಎಂ. ಕೃಷ್ಣಮೂರ್ತಿ, ಮಧುಸೂಧನ್, ಕೆ.ಜೆ. ನಾಗರಾಜ್, ಸಂತೋಷ್ ಲಕ್ಷ್ಮಿ, ಶಿಲ್ಪಾ, ಕೆಂಪರಾಜು, ಮಂಜುಳ, ಮನು, ಕೃಷ್ಣಮೂರ್ತಿ, ನಾಗೇಂದ್ರಪ್ಪ, ಅನಿಲ್, ಮಲ್ಲಿಕಾರ್ಜುನಯ್ಯ, ಪುಟ್ಟರಾಜು, ಹರೀಶ್, ಶಿವರಾಮಯ್ಯ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಭಾಗವಹಿಸಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
