ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಆತ್ಮ ಸರ್ವಾಂತರ್ಯಾಮಿ
ಆತ್ಮ ಎಂದರೇನು?
ಇದರ ಉತ್ತರ ಎಲ್ಲರಿಗೂ ಬೇಕಾಗಿರುವ ವಿಷಯ. ಈ ಆತ್ಮವನ್ನು ಆಧ್ಯಾತ್ಮದ ಚೌಕಟ್ಟಿನಲ್ಲಿ ನೋಡಿದರೆ ಬಹಳಷ್ಟು ವಿವರಗಳು ಸಿಗುತ್ತವೆನ್ನುವ ನಂಬಿಕೆಯಿದ್ದರೆ, ಆತ್ಮದ ವಿಮರ್ಶೆಯು ವಿಭಿನ್ನ ಸಿದ್ಧಾಂತದಡಿ, ಯೋಗ ದರ್ಶನಗಳ ಮೂಲಕ, ಕಂಡುಕೊಂಡ ಜ್ಞಾನದ ಮೇಲೆ, ಜೀವನದಲ್ಲಿ ಅರಿತ ವಿಚಾರಧಾರೆಗಳ ಒಳಗೊಂಡಂತೆ ಸಮಾಜ ಪರಿಸರ ಹಾಗೂ ಮನೋಶಾಸ್ತ್ರಗಳ ಮೂಲಕ ಆತ್ಮದ ಬಗ್ಗೆ ಉತ್ತರ ಹೇಳಿಕೊಡುವ ಪ್ರಯತ್ನಗಳು ಸಾಗುತ್ತಲೇ ಇವೆ. ಈ ಪ್ರಯತ್ನಗಳು ಔಪಚಾರಿಕ, ಚರ್ಚಾಸ್ಪದ. ತರ್ಕಕ್ಕೆ ನಿಲುಕದ, ಮೌಢ್ಯತೆಗಳ ಆಗರ, ಅವೈಜ್ಞಾನಿಕ ಭಂಡಾರ ಇತ್ಯಾದಿ ಟೀಕೆಗಳು ಹಿಂದಿನಿಂದಲೂ ಬಂದಿರುವುದನ್ನು ಕಾಣಬಹುದು.
ಇವೆಲ್ಲವುಗಳನ್ನು ಬದಿಗಿಟ್ಟು, ಈ ಆತ್ಮವನ್ನು ಸುಲಭೋಪಾಯದಲ್ಲಿ ಕಾಣುವ ದಾರಿ ಇದೆಯೇ ಅಥವಾ ಇಲ್ಲವೇ ಎನ್ನುವ ಪ್ರಯತ್ನವನ್ನು ಮಾಡೋಣ. ಎಲ್ಲಾ ಧರ್ಮದವರೂ ನಂಬುವ ಮುಖ್ಯ ಸಂಗತಿ ‘ದೇವರು ಇದ್ದಾನೆ’ ಎಂಬುದು. ವಾಸ್ತವದಲ್ಲಿ ಯಾರೂ ದೇವರನ್ನು ನೋಡಿಲ್ಲ. ಅವನನ್ನು ಸರ್ವಾಂತರ್ಯಾಮಿ ಎಂದು ಕರೆಯುವೆವು. ಇದು ನಿಜವಾದರೆ ಆತ್ಮವೂ ಕಾಣುವುದಿಲ್ಲ. ಏಕೆಂದರೆ, ಆತ್ಮವೂ ಸರ್ವಾಂತರ್ಯಾಮಿ. ದೇವರಿಗೆ ಸಾವಿಲ್ಲ ಎಂದು ನಂಬಿದರೆ ‘ಆತ್ಮ’ ಇದೆ ಅನ್ನುವುದರಲ್ಲಿ ತಪ್ಪೇನಿದೆ? ಪರಮಾತ್ಮನನ್ನು ನಾವು ಮಹಾನ್ ಶಕ್ತಿವಂತನು, ಜೀವ ಸಂಕುಲದ ಸಂರಕ್ಷಕನು, ಪಾಪಿಗಳ ಸಂಹಾರಕನೂ (ಇದನ್ನೇ ಇಂಗ್ಲಿಷ್ನಲ್ಲಿ GOD-Generator Operator Destroyer ಎನ್ನುತ್ತಾರೆ) ಆಗಿದ್ದಾನೆ ಎನ್ನುತ್ತೇವೆ.
ಅವನಿಗೆ ತಿಳಿಯುವ ಮತ್ತು ಅರಿವುಳ್ಳಂತಹ ಒಂದು ವಸ್ತು ಬೇಡವೇ? ಈ ನಿರ್ಜೀವ ವಸ್ತುವಿಗೆ ಅರಿವಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯವೇ. ಆತ್ಮವನ್ನು ದೇವರಿಗೆ ಹೋಲಿಸಿದ ನಾವು, ಆತ್ಮವು ಇಡೀ ವಿಶ್ವವನ್ನೇ ಆವರಿಸಿದೆ ಅನ್ನುವುದರಲ್ಲಿ ಸಂದೇಹವೇನು? ಪರಮಾತ್ಮನು ವಿಶ್ವ ರೂಪಿಯಾಗಿದ್ದರೆ, ಆತ್ಮ ರೂಪಿ ಯಾರು? ಜೀವ ತುಂಬಿದ ಒಂದು ವಸ್ತುವೇ ಆ ಆತ್ಮರೂಪಿ. ಅಂತಹ ರೂಪಿಗಳೇ ನಾವು-ನೀವು ಮತ್ತು ಎಲ್ಲಾ ಜೀವಿಗಳು.

ಪ್ರಕೃತಿಯು ಮಹಾನ್ ತಾಯಿ ಮತ್ತು ಬುದ್ಧಿವಂತೆ ಕೂಡ. ಆ ಮಹಾ ತಾಯಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಈ ಆತ್ಮರೂಪಿಗಳು ಇರಲೇಬೇಕು. ಪ್ರಿಯ ಓದುಗರೇ, ನಾವಿಲ್ಲದ ಪಕ್ಷದಲ್ಲಿ ಈ ಪ್ರಕೃತಿ ಇರುತ್ತಿತ್ತೇ? ಈ ಕಾರಣದಿಂದ ನಮಗೆಲ್ಲಾ ಒಂದು ರೂಪ, ಹೆಸರು ಕೊಟ್ಟು, ಆ ಮಹಾನ್ ತಾಯಿ ನಿರ್ದಿಷ್ಟ ಕಾಲ, ಸ್ಥಳಗಳಲ್ಲಿ ತುಂಬಿ ಬಿಟ್ಟಿರುವಳು. ಆಕೆಯ ಇಚ್ಛೆಯಂತೆ ನಮಗೆ ನೂರು ವರ್ಷಗಳ ಇಂಧನವನ್ನು ಬಳುವಳಿಯಾಗಿ ನೀಡಿರುವಳು.
ಈ ಇಂಧನವನ್ನು ಅವಧಿ ಮುಗಿದ ಬಳಿಕ ಬೇರೊಂದು ಜೀವದಲ್ಲಿ ಸೇರಿಸುತ್ತಾ ನಡೆವಳು. ಈ ಇಂಧನವೇ ಆತ್ಮಶಕ್ತಿ ಅಥವ ಅದ್ಭುತ ಶಕ್ತಿ. ಕಾಣದೆ ಇರುವ AMINO ACID ಚಿಪ್ ((Genes)ನಲ್ಲಿ ಒಂದು ಜೀವದಿಂದ ಇನ್ನೊಂದು ಜೀವಕ್ಕೆ ನಿರಂತರವಾಗಿ ತುಂಬುತ್ತಾ ಬಂದಿರುವಳು. ಈ ವರ್ಗಾವಣೆ ನಿಂತರೆ ಅಲ್ಲಿಗೆ ನಾನು ಸತ್ತೆ ಎಂಬ ಅಳಲು ಈ ಮಹಾತಾಯಿಗೆ ಉಂಟಾಗುತ್ತದೆ. ಈ ಕಾರಣದಿಂದಲೇ ನಾನು, ‘ಆತ್ಮಕ್ಕೆ ಸಾವಿಲ್ಲ’ ಎಂದು ಹೇಳಿದ್ದು.
ಪ್ರಕೃತಿ ಮಹಾನ್ ವಿಸ್ಮಯಕರ ಸೊಬಗಿನ ಅವತಾರ. ನಮಗೆ ಬಟ್ಟೆ ಅಳೆಯಲು ಗಜಕಡ್ಡಿ ಇದೆ. ಧಾನ್ಯಗಳನ್ನು ತೂಗಲು ಕೆ.ಜಿ.ಯ ಬಟ್ಟುಗಳಿವೆ. ಆದರೆ ಈ ಪ್ರಕೃತಿ ಸೌಂದರ್ಯದ ಸೊಬಗನ್ನು ಅಳೆಯಲು ಯಾವುದಾದರೂ ಅಳತೆಗೋಲಿದೆಯೇ? ಇದೆ, ಅದು ನಿರ್ಜೀವ ಅರಿಯದಂತಹ ವಸ್ತುವು ಆಗಿರಬಾರದು. ಅರಿಯುವಂತಹ ಜೀವ ವಸ್ತುವಾಗಿ ಸೊಬಗನ್ನು ಅಳೆಯುವಂತಹ ಸಾಧನ ಇದ್ದರೆ ಅದು ಆಕಾರವುಳ್ಳ ಆತ್ಮದಲ್ಲಿ ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಯುಗಗಳು ನಾಶವಾಗಲಿ, ಪುನರಾವರ್ತಿಸಲಿ, ಆಕಾರ ಮತ್ತು ಹೆಸರುಳ್ಳ ನಾವು ಜೀವ ಅಥವಾ ಆತ್ಮವೆಂಬ ಬೀಜವನ್ನು ಸದಾ ಬಿಟ್ಟು ಹೋಗುತ್ತಲೇ ಇರುತ್ತೇವೆ. ಈ ಬೀಜವು ಮುಂದಿನ ಯುಗದಲ್ಲಿ ಹೆಮ್ಮರವಾಗಿ ಬೆಳೆದು ಹೂವು, ಫಲಗಳನ್ನು ನೀಡುತ್ತಾ ಮತ್ತೆ ಮತ್ತೆ ಬೀಜ ಹರಡಿ, ಮತ್ತೆ ಮತ್ತೆ ಆತ್ಮವು ಪುನರ್ ಸ್ಥಾಪಿತಗೊಂಡು ಈ ವಿಶಾಲವಾದ ಅಖಂಡ ಬ್ರಹ್ಮಾಂಡವನ್ನು ಸವಿದು, ಅಳೆದು ಸಾಗುತ್ತಾ ಹೋಗುವುದರಲ್ಲಿ ಎಳ್ಳಷ್ಟು ಸಂದೇಹ ಬೇಡ ಅನ್ನುವುದೇ ನನ್ನ ಆತ್ಮವಿಮರ್ಶೆ. ಈ ಕಾರಣದಿಂದಲೇ ಆತ್ಮಕ್ಕೆ ಅಥವಾ ಮನಸ್ಸಿಗೆ ಸಾವಿಲ್ಲ ಎನ್ನುವುದು. ಇದು ಸತ್ಯ, ನಿರಂತರ, ಶಾಶ್ವತ.
ಮನೆ ಮತ್ತು ವಾಹನಗಳಲ್ಲಿ ಉಪಯೋಗಿಸುವ ಬ್ಯಾಟರಿ, ಮಾನವನ ಸಂಶೋಧನೆಯಿAದ ಫಲಿಸಿದ ವಸ್ತು. ಇದು ಎಷ್ಟೇ ಬಲಶಾಲಿಯಾಗಿದ್ದರೂ ನಿರಂತರವಾಗಿ Charge (ಶಕ್ತಿ ತುಂಬುವುದು) ಮಾಡಬೇಕಾಗುತ್ತದೆ. ಆದರೆ ನಮ್ಮ ‘ಆತ್ಮ’ವೆಂಬ ಬ್ಯಾಟರಿ ನಿರಂತರವಾಗಿ ನೂರು ವರ್ಷಗಳು ಸಾಗುವುದು. ಈ ಬ್ಯಾಟರಿ ನಮ್ಮ ಕರ್ಮದ ಫಲ.
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾನವ ನಿರ್ಮಿತ Silicon Chip ಎಂಬ ಪೂರ್ವ ನಿಯೋಜಿತ ಸಾಧನವು ಲಭ್ಯ. ಸೃಷ್ಟಿಕರ್ತನು ಹಿರಣ್ಯ ಗರ್ಭ ಸ್ಫೋಟಗೊಂಡ ಕಾಲದಿಂದಲೂ ನಮ್ಮೊಳಗೆ ಅಳವಡಿಸಿದ ಶ್ರೇಷ್ಠ Corbon chip ಅನ್ನು ಬಳುವಳಿಯಾಗಿ ನೀಡಿರುವನು. ಇದು ನಿಜವಾದರೆ ‘ನಾವು ನಿನ್ನಿಂದ, ನಮ್ಮಿಂದ ನಿನಗೇನು?’ ಎಂಬುದು ಜ್ಞಾನಜೀವಿಯ ಪ್ರಶ್ನೆ. ಈ ಪ್ರಶ್ನೆ ಹಾಗಿರಲಿ, ಅದನ್ನು ಮುಂದೊಂದು ಅಂಕಣದಲ್ಲಿ ಚರ್ಚಿಸೋಣ.
ಆ ಆತ್ಮದ ಬಗ್ಗೆ ಗಾಬರಿ ಬೇಡ. ಅದನ್ನು ತುಂಬಾ ತಿಳಿದುಕೊಳ್ಳುವುದೂ ಬೇಡ. ಆದರೆ ಎಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕಾಗಿರುವ ವಿಷಯವೆಂದರೆ,
ಚೇತೋನ್ಮಯಾ ಸ್ವರೂಪೇನ್ಮಯಾ
ತೇಜೋನ್ಮಯಾ ಕಾರ್ಯೋನ್ಮಯಾ
ಶೀಲೋನ್ಮಯಾ ಆಧ್ಯಾತ್ಮಯಾನ ಪುರುಷಃ
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

