ಮಂಡ್ಯ, ಮಾ.17: ಕದಂಬ ಸೈನ್ಯ ಕನ್ನಡ ಸಂಘಟನೆಯ ವತಿಯಿಂದ ನಗರದ ಡಾ. ಹರ್ಡಿಕರ್ ಭವನದಲ್ಲಿ ಮಾರ್ಚ್ 11ರಂದು ನಾಡಗೀತೆ ಅರ್ಥ ಬರೆಯುವ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶಾಲ್ ರಘು, ನ್ಯಾಯವಾದಿಗಳು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಕದಂಬ ಸೈನ್ಯವು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಕನ್ನಡ ನಾಡಗೀತೆ ಅರ್ಥ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ನೂರಾರು ವಿದ್ಯಾರ್ಥಿಗಳು ಭಾಗವಹಿಸಿರುವುದು ಕನ್ನಡ ನಾಡು ಹೆಮ್ಮೆಪಡುವ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ನಾಡಗೀತೆಯ ಪರಿಚಯವನ್ನು ಸವಿಸ್ತಾರವಾಗಿ ಮಾಡಿಕೊಟ್ಟರು. ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕದಂಬ ಸೈನ್ಯ ಕನ್ನಡ ಸಂಘಟನೆ ಕದಂಬರು, ಗಂಗರು, ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಇತಿಹಾಸವನ್ನು ಜನರಿಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ನಾಡಿನ ಚಕ್ರವರ್ತಿಗಳಾದ ಕದಂಬ ಮಯೂರವರ್ಮ, ಕಾಕುತ್ಸವರ್ಮ, ತಲಕಾಡು ಗಂಗ ಧುರ್ವನೀತ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ, ರಾಷ್ಟ್ರಕೂಟ ನೃಪತುಂಗ, ಹಾಗೂ ವೀರರಾಣಿಯರಾದ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ರಾಣಿ ಚೆನ್ನಭೈರಾದೇವಿ ಮತ್ತು ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಪೂಜ್ಯ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಅಪ್ಪಾಜಿಗೌಡ, ಲಯನ್ ಗೋಲ್ಡನ್ ಟಿ. ಸುರೇಶ್, ಕದಂಬ ಸೈನ್ಯ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ (ವಿಜಯಪುರ), ಹೊಳೆನರಸೀಪುರ ತಾಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಾಟಕಕಾರ ಎಸ್.ಎಸ್. ಪುಟ್ಟೀಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಈರಯ್ಯ ಶಾಂತಯ್ಯ ಹಿರೆಮಠ ದಂಪತಿಗಳಿಗೆ ಚಾಲುಕ್ಯ ದಂಪತಿಗಳ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ. ದೌಲತ್ ರಾವ್ ರೇವಣ್ಣ ಸಿದ್ಧಪ್ಪ, ಮುದ್ದೇಬಿಹಾಳ, ಬೋರೇಗೌಡ ತಾವರಗೆರೆ ಅವರಿಗೆ ಕಾಕುತ್ಸವರ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ರಂಗಭೂಮಿ ಮಳವಳ್ಳಿ ಸುಂದರಮ್ಮ ಪ್ರಶಸ್ತಿಯನ್ನು ಹಾಸನದ ರಾಣಿ ಚರಾಶ್ರೀ ಮತ್ತು ಗಾಯತ್ರಿ ಪ್ರಕಾಶ್ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಹಾಸನದ ಸಾಹಿತಿ ಗೊರೂರು ಅನಂತರಾಜು ನಿರೂಪಿಸಿದರು. ಕದಂಬ ಸೈನ್ಯ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎ.ಹೆಚ್. ಗಣೇಶ್ ಸ್ವಾಗತಿಸಿದರು. ಗಾಯಕ ಎಂ.ಎನ್. ಶ್ರೀಧರ್ ನಾಡಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಉಮ್ಮಡಹಳ್ಳಿ ನಾಗೇಶ್ ಆರಾಧ್ಯ, ಗುಡೆಗೇನಹಳ್ಳಿ ಕೃಷ್ಣಪ್ಪ ಶೆಟ್ಟಿ, ಹೊಂಗನೂರು ಬೋರೇಗೌಡ (ಪಾಂಡವಪುರ), ಉಮೇಶ್ (ರಾಂಪುರ, ರಾಮನಗರ), ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಹಾಗೂ ವಿಜಯಪುರ ಜಿಲ್ಲೆ ಉಪಾಧ್ಯಕ್ಷ ಇರ್ಪಾನ್ ಬಿಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸದ್ವಿದ್ಯಾ ಚಿಲ್ಡ್ರನ್ಸ್ ಪ್ರೌಢಶಾಲೆ ಮತ್ತು ಕಾಲೇಜು, ಅಭಿನವ ಭಾರತಿ ಪ್ರೌಢಶಾಲೆ, ಕಾಳೇಗೌಡ ಪ್ರೌಢಶಾಲೆ, ಸಂತ ಜೋಸಫ್ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಂದ ಭಾಗವಹಿಸಿದ್ದ ಸುಮಾರು 70 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಗೆ ಲಾಡು ಮತ್ತು 5 ಸ್ಟಾರ್ ಚಾಕಲೇಟ್ ವಿತರಿಸಲಾಯಿತು.
