ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನು ಎಂಬುದು ಈಗ ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ, “ಅದು ಮಹಬೂಬಿಯ ರೈಸ್ ಮಿಲ್. ಅದು ನಮ್ಮಜ್ಜ ಅಜೀಜ್ಖಾನ್ರದ್ದು” ಎಂದನು. ಈ ಮಿಲ್ಗೆ ಸುತ್ತಲಿನ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ತುಂಬಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು.
ನಮಗೆ ಚಂಗರವಳ್ಳಿ ನಾಲೆಯ ಕೆಳಭಾಗದಲ್ಲಿ ಗದ್ದೆ ಇತ್ತು. ಸುಗ್ಗಿ ಕಾಲದಲ್ಲಿ ನಮ್ಮ ತಂದೆ ಅಟ್ಟದಲ್ಲಿಟ್ಟಿದ್ದ ಬಿದಿರಿನ ಕಣಜದಲ್ಲಿ ಭತ್ತ ತುಂಬಿಡುತ್ತಿದ್ದರು. ಮನೆಯಲ್ಲಿ ಅಕ್ಕಿ ಮುಗಿದಾಗ ನಾಲ್ಕೈದು ಚೀಲ ಭತ್ತ ತುಂಬಿ, ಎತ್ತಿನಗಾಡಿ ಬಾಡಿಗೆಗೆ ಮಾಡಿಕೊಂಡು ರೈಸ್ ಮಿಲ್ ಕಡೆಗೆ ಹೊರಡುತ್ತಿದ್ದರು. ನಾನು ಕೆಲವೊಮ್ಮೆ ಹಿಂಬಾಲಿಸುತ್ತಿದ್ದೆನು. ಆಗ ನಮ್ಮ ಊರಿಗೆ ಇದೇ ದೊಡ್ಡ ಇಂಡಸ್ಟ್ರಿ.
ಇದನ್ನು ಮದ್ರಾಸಿನಿಂದ ದಾಂಡೇಕರ್ ಕಂಪನಿಯವರು ತಯಾರಿಸಿದ್ದು, ಆ ಕಂಪನಿಯವರೇ ಬಂದು ಮಿಷನ್ ಫಿಟ್ ಮಾಡಿ ಹೋಗಿದ್ದರೆಂದು ಯಾಕೂಬ ಹೇಳಿದ. ಆ ಮಿಲ್ನಲ್ಲಿ ರೈತರು ತಾವು ತಂದ ಭತ್ತದ ಚೀಲಗಳನ್ನು ಇಳಿಸಿ ತಮ್ಮ ಸರದಿಗಾಗಿ ಕಾಯುತ್ತಾ ಮಾತಿನಲ್ಲಿ ತೊಡಗುತ್ತಿದ್ದರು. ಒಳಗೆ ರೈಸ್ ಮಿಲ್ಲಿನ ಶಬ್ದದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ.
ನನ್ನನ್ನು “ಭತ್ತದ ಚೀಲ ನೋಡಿಕೊಳ್ತಾ ಇರು” ಎಂದು ಹೇಳಿ ಅಪ್ಪ ಅಂಗಡಿ ವ್ಯಾಪಾರಕ್ಕೆ ಹೋಗುತ್ತಿದ್ದರು. ನಮ್ಮದು ಒಂದು ಚಿಲ್ಲರೆ ಅಂಗಡಿ ಇತ್ತು. ಅಪ್ಪ ಅತ್ತ ಹೋದ ಮೇಲೆ, ಇತ್ತ ನಾನು ಮಿಲ್ ಹಿಂದೆ ಉದುರಿ ಬೀಳುತ್ತಿದ್ದ ಹುಯ್ಯಿಯ ರಾಶಿಯಲ್ಲಿ ಬಿದ್ದು ಜಾರುಗುಪ್ಪೆ ಆಡುತ್ತಿದ್ದೆನು. ನನ್ನ ವಾರಿಗೆಯ ಹುಡುಗರ ಗುಂಪು ಅಲ್ಲಿ ಸಾಕಷ್ಟು ಇರುತ್ತಿತ್ತು.
ಮಿಲ್ ಹಿಂಭಾಗದಲ್ಲಿ ಪುರಾತನ ಕೋಟೆಯ ಅವಶೇಷ ಇತ್ತು. ಆ ವಯಸ್ಸಿಗೆ ಆ ಕೋಟೆಯ ವಿಶೇಷತೆ ನನಗೆ ತಿಳಿದಿರಲಿಲ್ಲ. ನನ್ನ ‘ಗೊರೂರು ಹೇಮಾವತಿ ದರ್ಶನ’ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ, ೧೭೮೦ರಲ್ಲಿ ಕೊಡಗಿನ ಲಿಂಗರಾಜೇಂದ್ರ ರಾಜನು ಮರಣ ಹೊಂದಿದ ನಂತರ, ಆತನ ಚಿಕ್ಕ ಮಗ ರಾಜ್ಯಾಡಳಿತ ನಡೆಸಲಾರನೆಂದು ತಿಳಿದ ಹೈದರಾಲಿ ಕುಯುಕ್ತಿಯಿಂದ ರಾಜರ ಕುಟುಂಬವನ್ನು ಕರೆತಂದು ಗೊರೂರಿನ ಕೋಟೆಯಲ್ಲಿ ಬಂಧಿಸಿದ್ದನೆಂದೂ, ನಂತರ ೧೭೯೨ರಲ್ಲಿ ಹೈದರಾಲಿಯ ಮಗ ಟಿಪ್ಪುಸುಲ್ತಾನನು ಗೊರೂರು ಕೋಟೆಯಿಂದ ಮಡಿಕೇರಿ ರಾಜ ಕುಟುಂಬವನ್ನು ಪಿರಿಯಾಪಟ್ಟಣಕ್ಕೆ ವರ್ಗಾಯಿಸಿದ್ದನೆಂದೂ, ಕೃಷ್ಣಯ್ಯನವರ ‘ಮಡಿಕೇರಿ ಇತಿಹಾಸ’ ಕೃತಿಯಿಂದ ತಿಳಿದುಬರುತ್ತದೆ.

ಈಗ ಕೋಟೆಯ ಅವಶೇಷ ಲವಲೇಶವೂ ಇಲ್ಲ. ಆದರೆ ಐವತ್ತು ವರ್ಷಗಳ ಹಿಂದೆ ಎತ್ತರದ ದಿಣ್ಣೆಯಂತಿರುವ ಮಣ್ಣಿನ ಕೋಟೆ ಇತ್ತು. ನಾನು ನೋಡಿದ್ದೆ. ಹಳೆಯ ಗ್ರಾಮವನ್ನು “ಕೋಟೆ” ಮತ್ತು “ಪೇಟೆ” ಎಂದು ಕರೆಯಲಾಗುತ್ತಿತ್ತು. ಊರ ಮಧ್ಯೆ ಹರಿದು ಹೋಗುತ್ತಿದ್ದ ಚಂಗರವಳ್ಳಿ ನಾಲೆ ಕೋಟೆ ಮತ್ತು ಪೇಟೆಯನ್ನು ವಿಭಾಗಿಸಿತ್ತು.
ಮಣ್ಣಿನ ಕೋಟೆಯ ಹಿಂಭಾಗದಲ್ಲಿ ಹೊಯ್ಸಳರ ಕಾಲದ ಈಶ್ವರ ದೇವಸ್ಥಾನವಿತ್ತು. ಹೇಮಾವತಿ ಅಣೆಕಟ್ಟೆ ಕೆಲಸ ಪ್ರಾರಂಭವಾದ ಮೇಲೆ, ಊರಿನ ಮೇಲ್ಭಾಗದಲ್ಲಿ ನಮ್ಮ ತಂದೆ ಮನೆ ಕಟ್ಟಿಸಿ, ನಾವು ಅಲ್ಲಿ ವಾಸವಿದ್ದೆವು. ನಮ್ಮ ಮನೆ ಮುಂದಿನ ಮುಖ್ಯರಸ್ತೆ ಈಶ್ವರ ದೇವಾಲಯಕ್ಕೆ ಹೋಗಿ ಕೊನೆಯಾಗುತ್ತಿತ್ತು.
ಮಿಲ್ನಿಂದ ಈಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕಳ್ಳಿ ಬೇಲಿ ಕೋಟೆಗೆ ರಕ್ಷಣೆಯಾಗಿ ಇತ್ತು. ಮಿಲ್ ಮತ್ತು ಕೋಟೆ ನಡುವೆ ಆಳವಾದ ಕಂದಕವಿದ್ದು, ಮಿಲ್ನ ದೊಡ್ಡ ಪೈಪ್ನಿಂದ ಹೊರಬಿದ್ದ ಹುಯ್ಯಿ ಹಳ್ಳದಲ್ಲಿ ಸಂಗ್ರಹವಾಗುತ್ತಿತ್ತು. ಹುಯ್ಯಿ ಕೆಳಗಿನಿಂದ ಮೇಲಕ್ಕೆ ತುಂಬುತ್ತಾ ಬಂದಂತೆ, ನಾವು ಹುಡುಗರು ಮೇಲಿನಿಂದ ಕೆಳಮುಖವಾಗಿ ಜಾರುತ್ತಾ ಜಾರುಗುಪ್ಪೆ ಆಟ ಆಡುತ್ತಿದ್ದೆವು.
ನಮ್ಮ ಅಜ್ಜ ಅಪ್ಪಯ್ಯಶೆಟ್ಟರ ಹಿತ್ತಿಲು ಮನೆಯಲ್ಲಿ ಮೂರು ಸೈಜುಕಲ್ಲು ಇಟ್ಟು, ಅದರ ಮೇಲೆ ನೀರಿನ ಹಂಡೆ ಇಟ್ಟು ನೀರು ಕಾಯಿಸುತ್ತಿದ್ದರು. ನಮ್ಮ ತಂದೆ ಊರಿನ ಮೇಲ್ಗಡೆ ಮನೆ ಕಟ್ಟಿಸಿದಾಗಲೇ ನೀರೊಲೆಗೆ ಹಂಡೆ ಹೂಳಿಸಿದ್ದರು.
ನಮಗೆ ಹೇಮಾವತಿ ಜಲಾಶಯಕ್ಕೆ ಮುಳುಗಡೆಯಾದ ನಾಗವಾರ ಕಡೆಯಿಂದ ಸೌದೆರಾಜ ಮತ್ತಿತರ ಮಂದಿ ಗಾಡಿಯಲ್ಲಿ ಸೌದೆ ಹೇರಿಕೊಂಡು ಬಂದು ಊರಿನಲ್ಲಿ ಮಾರುತ್ತಿದ್ದರು. ನಮ್ಮ ತಂದೆ ಮನೆ ಹಿತ್ತಿಲಿನಲ್ಲಿ ಹುಲ್ಲು–ತೆಂಗಿನಗರಿಯ ಒಂದು ಗುಡಿಸಲು ಕಟ್ಟಿ, ಬೇಸಿಗೆ ಕಾಲದಲ್ಲಿ ಸೌದೆ ಸ್ಟಾಕ್ ಮಾಡಿ, ಮಳೆಗಾಲದಲ್ಲಿ ಸೌದೆಗೆ ತಾಪತ್ರಯವಾಗದಂತೆ ಎಚ್ಚರ ವಹಿಸುತ್ತಿದ್ದರು. ಚಿಕ್ಕದಾಗಿ ತುಂಡರಿಸಿದ ಸೌದೆಯನ್ನು ಅಡಿಗೆಮನೆಯ ಒಲೆಗೆ, ದಪ್ಪ ತುಂಡುಗಳನ್ನು ನೀರೊಲೆಗೆ ಬಳಸುತ್ತಿದ್ದೆವು.
ಅಣೆಕಟ್ಟೆಯಲ್ಲಿ ನೀರು ನಿಲ್ಲಿಸಲಾಗಿ ಸೌದೆ ಗಾಡಿಗಳು ಬರುವುದು ನಿಧಾನವಾಗಿ ಕಡಿಮೆಯಾಯಿತು. ಸೌದೆ ಬೆಲೆಯೂ ಹೆಚ್ಚಾಯಿತು. ಹೀಗಿರಲು, ಹುಯ್ಯಿಗೆ ಒಂದು ಭತ್ತದ ಚೀಲಕ್ಕೆ ಹತ್ತು ರೂಪಾಯಿ ಬೆಲೆ ನಿಗದಿಯಾಗಿ, ಹುಯ್ಯಿ ತುಂಬಿಕೊಂಡು ಬರಲು ಅಮ್ಮ ಭತ್ತದ ಚೀಲ ಕೊಟ್ಟು ಕಳಿಸುತ್ತಿದ್ದರು. ಮನೆಯ ನೀರೊಲೆಯ ಆಕಾರವೂ ಬದಲಾಗಿದ್ದು, ಗಾರೆ ಕೆಲಸದ ಬೆಳ್ಳೆ ಸೌದೆ ಮತ್ತು ಹುಯ್ಯಿ—ಎರಡೂ ಬಗೆಯಲ್ಲೂ ನೀರು ಕಾಯಿಸುವಂತೆ ಸೂಕ್ತ ಮಾರ್ಪಾಡು ಮಾಡಿಕೊಟ್ಟನು.
ಮುಂದೆ ಹಾಸನಕ್ಕೆ ಹೆಚ್.ಪಿ. ಗ್ಯಾಸ್ ಬಂತು. ಊರಿಗೆ ಬಹಳ ಸಾಹಸದಿಂದ ಟೆಂಪೋದಲ್ಲಿ ತುಂಬಿದ ಗ್ಯಾಸ್ ಸಿಲಿಂಡರ್ ತಂದು ಅಡಿಗೆ ಮಾಡುವುದು ಆರಂಭವಾಯಿತು. ಬಸ್ಸಿನಲ್ಲಿ ಗ್ಯಾಸ್ ಹಾಕಿಸುತ್ತಿರಲಿಲ್ಲ. ಮಳೆಗಾಲದಲ್ಲಿ ಅಡಿಗೆಮನೆಯ ಒಲೆ ಮತ್ತು ನೀರೊಲೆ ಹತ್ತಿಸಲು ಸೀಮೆಎಣ್ಣೆ ಸುರಿದು ಉರಿ ಹಾಕುತ್ತಿದ್ದ ಅಮ್ಮ, ಕೈಗೆ ಸಿಕ್ಕ ನ್ಯೂಸ್ಪೇಪರ್ನ್ನು ತುರುಕುತ್ತಿದ್ದರು.
ಸೀಮೆಎಣ್ಣೆ ಮೊದಮೊದಲು ಗೋವಿಂದೇಗೌಡರ ಅಂಗಡಿಯಲ್ಲಿ ಯಾವಾಗಲೂ ದೊರೆಯುತ್ತಿತ್ತು. ಒಂದು ಉದ್ದದ ಬಿಯರ್ ಬಾಟಲಿಯಲ್ಲಿ ತಂದಿಟ್ಟುಕೊಂಡರೆ, ಆ ಸೀಮೆಎಣ್ಣೆ ಒಂದು ವಾರ ಬರುತ್ತಿತ್ತು. ಮುಂದೆ ಸೀಮೆಎಣ್ಣೆಗೂ ಬರ ಬಂತು. ಕ್ಯೂನಲ್ಲಿ ನಿಂತು, ತಳ್ಳಾಡಿ, ಕೂಗಾಡಿ ಎರಡು ಲೀಟರ್ ಸೀಮೆಎಣ್ಣೆ ಖರೀದಿಸಲು ಹೆಣಗಾಡಿದ್ದೇವೆ. ನಂತರ ಶಿವಣ್ಣನ ರೇಷನ್ ಅಂಗಡಿಯಲ್ಲಿ ಸಕ್ಕರೆ ಮತ್ತು ಸೀಮೆಎಣ್ಣೆ ರೇಷನ್ ಕಾರ್ಡ್ನಲ್ಲಿ ಸಿಗುವಂತಾಯಿತು.

ರಾತ್ರಿ ಕರೆಂಟ್ ಹೋದರೆ ಸೀಮೆಎಣ್ಣೆ ಬುಡ್ಡಿಯನ್ನು ಹಚ್ಚಿಕೊಂಡು, ಅದರ ಕೆಳಗೆ ಓದಲು–ಬರೆಯಲು ಕುಳಿತುಕೊಳ್ಳುತ್ತಿದ್ದೆವು. ಬತ್ತಿಯ ಕಪ್ಪುಹೊಗೆ ಮತ್ತು ಸೀಮೆಎಣ್ಣೆಯ ವಾಸನೆಯಿಂದ ಉಸಿರು ಕಟ್ಟಿದಂತಾಗುತ್ತಿತ್ತು. ಅಮ್ಮ ಸೀಮೆಎಣ್ಣೆಯಿಂದ ಒಲೆ ಹತ್ತಿಸಿದರೂ, ಮಧ್ಯೆ ಮಧ್ಯೆ ಬೆಂಕಿ ಆರಿಹೋಗಿ ಮನೆ ತುಂಬ ಹೊಗೆ ತುಂಬಿಕೊಳ್ಳುತ್ತಿತ್ತು.
ಮುಂದೆ ಸೀಮೆಎಣ್ಣೆಗೂ ಅಭಾವ ಎದುರಾಗಿ, ನ್ಯೂಸ್ಪೇಪರ್, ಭತ್ತದ ಹುಲ್ಲು ಹಾಕಿ ಸೌದೆ ಹಚ್ಚಿಸಲು ಬಳಸುತ್ತಿದ್ದೆವು. ನಮ್ಮ ಎಕ್ಸರ್ಸೈಜ್ ನೋಟ್ ಪುಸ್ತಕಗಳೂ ಒಲೆಯಲ್ಲಿ ಉರಿದುಹೋದವು. ಹಸಿ ಸೌದೆ ಸರಿಯಾಗಿ ಉರಿಯದೆ, ಕೊಳವೆಯಲ್ಲಿ ಊದಿ–ಊದಿ, ಹೊಗೆಯ ಘಾಟಿಗೆ ಕೆಮ್ಮಿ–ಕೆಮ್ಮಿ, “ತತ್! ಯಾರಿಗೆ ಬೇಕು ಈ ವಾರದ ಸ್ನಾನ?” ಎನ್ನಿಸುತ್ತಿತ್ತು.
ವಾರಕ್ಕೆ ಎರಡು ದಿನ ಮಾತ್ರ ಸ್ನಾನ. ಸೋಮವಾರ ಮನೆ ದೇವರ ವಾರ. ಸ್ನಾನ ಮಾಡದೇ ಅಮ್ಮ ತಿಂಡಿ ಮಾಡಲು ಕೂರುತ್ತಿರಲಿಲ್ಲ. ದೇವರ ಪೂಜೆ ಅಪ್ಪನದು. ಸೋಮವಾರ ಸ್ನಾನ–ಪೂಜೆ ಮುಗಿದು ತಿಂಡಿಗೆ ಕೂರುವಷ್ಟರಲ್ಲಿ ನನಗೆ ಹಸಿವು ತಡೆಯಲಾಗದೆ ಅಮ್ಮನ ಮೇಲೆ ರೇಗುತ್ತಿದ್ದೆ. ಭಾನುವಾರದ ಸಂತೆಯಲ್ಲಿ ತಾಜಾ ತರಕಾರಿ ತರುತ್ತಿದ್ದರಿಂದ, ಸೋಮವಾರದ ತಿಂಡಿ ವೆಜಿಟೆಬಲ್ ಪಲಾವ್; ಊಟಕ್ಕೆ ಸಪ್ಸಿಗೆಸೊಪ್ಪಿನ ಸಾರು. ಶುಕ್ರವಾರದ ಸ್ನಾನ–ಪೂಜೆಗೆ ಅಷ್ಟು ಮಹತ್ವ ಇರಲಿಲ್ಲವಾದ್ದರಿಂದ, ತಿಂಡಿ ಬಹಳ ತಡವಾಗುತ್ತಿರಲಿಲ್ಲ.
ಮುಂದೆ ನನ್ನ ಮಡದಿ ಸೋಮವಾರ ಮತ್ತು ಶುಕ್ರವಾರದ ಪೂಜೆಯನ್ನು ಬಹಳ ನಿಷ್ಠೆಯಿಂದ ಮುಂದುವರಿಸಿ, ನನಗೆ ಈಗಲೂ ಕಷ್ಟಕ್ಕೆ ಸಿಲುಕಿಸಿದ್ದಾಳೆ.
ನಾವು ಹಾಸನಕ್ಕೆ ಬಂದು ನೆಲೆಸಿದ ಮೇಲೆ ನಮ್ಮ ಬದುಕಿನ ರೀತಿ ಬಹಳ ಬದಲಾಯಿತು. ಮೊದಲು ಗ್ಯಾಸ್ ಮುಗಿದರೆ, ಗ್ಯಾಸ್ ಅಂಗಡಿಗೆ ಹೋಗಿ ಬಿಲ್ ಹಾಕಿಸಿ, ಗ್ಯಾಸ್ ಗೋದಾಮಿಗೆ ಆಟೋ ಮಾಡಿಕೊಂಡು ಹೋಗಿ, ಕೇಳಿದಷ್ಟು ಬಾಡಿಗೆ ಕೊಟ್ಟು ತರುತ್ತಿದ್ದೆವು. ಈಗ ಗ್ಯಾಸ್ ಬುಕ್ ಮಾಡಿದರೆ ಮನೆಗೆ ಆಟೋದವರು ತಂದುಕೊಡುವಷ್ಟು ಸುಧಾರಣೆಯಾಗಿದೆ.
ಗ್ಯಾಸ್ ಬಳಕೆದಾರರು ಹೆಚ್ಚಾದಂತೆ ಗ್ಯಾಸ್ ಬೆಲೆಯೂ ಏರುತ್ತಾ ಬಂತು. ಈಗ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಗ್ಯಾಸ್ಗೂ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ನಾವು ಹಾಸನಕ್ಕೆ ಬಂದ ಹೊಸದರಲ್ಲಿ ನೀರೊಲೆಗೆ ತೆಂಗಿನಮೊಟ್ಟೆ ಖರೀದಿಸಿ ಬಳಸುತ್ತಿದ್ದೆವು. ಲಾರಿ–ಟ್ರಾಕ್ಟರ್ಗಳಲ್ಲಿ ಮನೆ ಬಾಗಿಲಿಗೆ ಬಂದು “ಮೊಟ್ಟೆ…” ಎಂದು ಕೂಗಿ ಕರೆಯುತ್ತಿದ್ದರು. ಕೆಲವೊಮ್ಮೆ ಕೋಳಿಮೊಟ್ಟೆ ಮಾರುವವರು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಬಂದು “ಮೊಟ್ಟೆ…” ಎಂದು ಕೂಗಿದಾಗ, ನಾವು ಹೊರಗೆ ಹೋಗಿ ಬೇಸ್ತು ಬಿದ್ದದ್ದೂ ಉಂಟು.
ಈ ಮೊದಲು ಕಾಯಿಮೊಟ್ಟೆ ಮಾರಲು ಬರುತ್ತಿದ್ದವರು ಈಗ ಬರುತ್ತಿಲ್ಲ. ಬದಲಿಗೆ “ತೆಂಗಿನಚಿಪ್ಪು ನಿಮ್ಮ ಮನೆಯಲ್ಲಿ ಇದೆಯೇ? ಕೊಡಿ, ಕೊಳ್ಳುತ್ತೇವೆ…” ಎಂದು ಕೇಳಿ, “ಚಿಪ್ಪು…” ಎಂದು ಕೂಗಿ ಕರೆವ ಗೂಡ್ಸ್ ಆಟೋಗಳು ಬರುತ್ತಿವೆ.
ನಾವು ಒಲೆಗೆ ತೆಂಗಿನಮೊಟ್ಟೆ ಬಳಸುತ್ತಿದ್ದುದರಿಂದ ಬಚ್ಚಲುಮನೆ ಹೊಗೆಯಿಂದ ಕಪ್ಪಾಗುತ್ತಿತ್ತು. ಜೊತೆಗೆ ಹೊಗೆ ಪೈಪ್ನಲ್ಲಿ ಚಿಗುಟು ಕಟ್ಟುತ್ತಿತ್ತು. ತೆಂಗಿನಮೊಟ್ಟೆಯನ್ನು ಸ್ಟಾಕ್ ಮಾಡಲು ಬಚ್ಚಲುಮನೆಯಲ್ಲಿ ಮೂರು ಅಡಿ ಅಳತೆಯ ಗೋಡೆಬಾಕ್ಸ್ ಮಾಡಿಸಿದ್ದೆವು; ಮುಂದೆ ಅದು ವೇಸ್ಟ್ ಆಯಿತು. ಈಗ ಅದು ವೇಸ್ಟ್ೇಜ್ ಸಾಮಾನು ತುಂಬುವ ಜಾಗವಾಗಿದೆ.
ನಮ್ಮ ಮುಂದುವರಿದ ಬದುಕಿನಲ್ಲಿ ಗ್ಯಾಸ್ನಲ್ಲಿ ನೀರು ಕಾಯಿಸಲು ಗ್ಯಾಸ್ ಗೀಸರ್ ತಂದು ಅಳವಡಿಸಿಕೊಂಡೆವು. ಗ್ಯಾಸ್ ಗೀಸರ್ನಲ್ಲಿ ತಕ್ಷಣವೇ ಬಿಸಿ ನೀರು ಬರುತ್ತದೆ. ಈ ಹಿಂದೆ ಸೌದೆ ಅಂಡೆಯಲ್ಲಿ ಕಾಯ್ದ ನೀರು ಸ್ನಾನ ಮಾಡಿ ಉಳಿದರೆ, ಆ ಬಿಸಿ ನೀರು ಸುಮ್ಮನೇ ವೇಸ್ಟ್ ಆಗುತ್ತಿತ್ತು. ಈಗ ಗ್ಯಾಸ್ ಗೀಸರ್ನಿಂದ ಅದು ತಪ್ಪಿದೆ.
ಆದರೆ ಕೊಲ್ಲಿ ಯುದ್ಧದ ಕಾರಣ ಇಲ್ಲಿ ಗ್ಯಾಸ್ ಸಮಸ್ಯೆ ಎದುರಾಗಿದೆ. ಸರ್ಕಾರದ ಉಚಿತ ವಿದ್ಯುತ್ ಯೋಜನೆ ಸ್ಪಂದಿಸಿ ಮನೆಗೆ ಕರೆಂಟ್ ಗೀಸರ್ ತಂದೆವು. ಆದರೆ ಇನ್ನೂರು ಯೂನಿಟ್ ಭಾಗ್ಯ ನಮಗಿಲ್ಲ; ಎಪ್ಪತ್ತು ಯೂನಿಟ್ಗೆ ಲಿಮಿಟ್ ಆಗಿದೆ. ಅದು ಬಲ್ಬು ಉರಿದದ್ದಕ್ಕೇ ಸಾಕು. ಎಪ್ಪತ್ತರ ಒಳಗೆ ಯೂನಿಟ್ ಬಂದರೂ ದುಡ್ಡು ಕಟ್ಟಲು ಬಿಲ್ ಬರುತ್ತಿದೆ. “ನಿಮ್ಮ ಮನೆಯಲ್ಲಿ ಕರೆಂಟ್ ಗೀಸರ್, ಫ್ರಿಡ್ಜ್ ಇರಬೇಕು, ಅದಕ್ಕೆ…” ಎನ್ನುತ್ತಾರೆ ಮೀಟರ್ ರೀಡರ್.
ಮಡದಿ, “ಕರೆಂಟ್ ನೀರಿಗೆ ಕೂದಲು ಉದುರುತ್ತದೆ” ಎಂದು ಗ್ಯಾಸ್ ಗೀಸರ್ ನೀರನ್ನೇ ಬಳಸುತ್ತಿದ್ದಳು. ಮುಂದೆ ಗ್ಯಾಸ್ ಅಭಾವಕ್ಕೆ ಹೆದರಿ ಮನೆಯಲ್ಲಿ ಒಡೆದ ಕಾಯಿಚಿಪ್ಪು, ನ್ಯೂಸ್ಪೇಪರ್ ತುಂಬಿ ನೀರೊಲೆಗೆ ಉರಿ ಹಾಕುತ್ತಿದ್ದಾಳೆ. “ಪ್ಲೀಸ್, ಸೋಲಾರ್ ಹಾಕಿಸಿ” ಎಂದು ದಿನನಿತ್ಯ ಪೀಡಿಸುತ್ತಿದ್ದಾಳೆ. ಅದಕ್ಕೆ ತಕ್ಕಂತೆ ಮನೆಯ ನಳಿನ ವ್ಯವಸ್ಥೆಯೂ ಬದಲಾಗಬೇಕಿದೆ. ಮನೆಯ ರಿಪೇರಿ ಕೆಲಸ ದುಬಾರಿಯಾಗುತ್ತಿದೆ. ಕಾಲ ಬದಲಾದಂತೆ ನಾವು ಬದಲಾಗಲೇಬೇಕು. ಆದರೆ ಏನು ಮಾಡುವುದು? ನಾವು ಮಧ್ಯಮ ವರ್ಗದ ಜನ. ಕಳೆದು–ಕೂಡುವ ಲೆಕ್ಕಾಚಾರದಲ್ಲೇ ಬದುಕು ಸಾಗಿಸಬೇಕಿದೆ.
ಒಂದು ಕಾಲದಲ್ಲಿ ನಮ್ಮೂರಿನ ರೈಸ್ ಮಿಲ್ ಮತ್ತು ದನಕರುಗಳ ಸಗಣಿ ನಮಗೆ ಉರುವಲಿನ ಸಂಪನ್ಮೂಲವಾಗಿತ್ತು. ನಮ್ಮೂರ ರಥೋತ್ಸವ ಜಾತ್ರೆಗೆ ದನಗಳನ್ನು ಕಟ್ಟುತ್ತಿದ್ದರು. ಈ ವೇಳೆ ಜಾತ್ರೆ ಮೈದಾನದಲ್ಲಿ ಬೀಳುತ್ತಿದ್ದ ಸಗಣಿಯನ್ನು ಮಂಕರಿಯಲ್ಲಿ ತುಂಬಿ ತಂದು, ಹುಯ್ಯಿ ಜೊತೆಗೆ ಬೆರಣಿ ತಟ್ಟಿ, ನಮ್ಮ ತಾಯಿ ಉರುವಲಿಗೆ ಬಳಸುತ್ತಿದ್ದರು. ದನಕರುಗಳು ಇದ್ದವರು ಗೋಬರ್ ಗ್ಯಾಸ್ ಅಳವಡಿಸಿಕೊಂಡರು.
ಮುಂದೆ ಕಸಕಡ್ಡಿ ತ್ಯಾಜ್ಯ ಬಳಸಿ ನೈಸರ್ಗಿಕ ಗ್ಯಾಸ್ ತಯಾರಿಸಿ, ಮನೆ ಮನೆಗೆ ಪೈಪ್ ಮೂಲಕ ಸರಬರಾಜು ಮಾಡುವ ಯೋಜನೆ ಬರುವುದಂತೆ! ಏನೇ ಆಗಲಿ, ಹಿಂದೆ ನಮ್ಮ ಗ್ರಾಮ್ಯ ಬದುಕು ಸ್ಥಳೀಯ ಸಂಪನ್ಮೂಲ ಲಭ್ಯತೆಯಲ್ಲಿ ಹೇಗೆ ಸಾಗಿತೆಂದು ಸ್ಮರಿಸುತ್ತಿರಲು, ಕೆಳಗಿನಿಂದ ಮಡದಿ ಕೂಗಿದಳು—
“ರೀ… ಸ್ನಾನ ಮಾಡಿ ತಿಂಡಿ ತಿನ್ನಲು ಬರುವುದಿಲ್ಲವೇ..?”
“ಬರದೇ ಎಲ್ಲಿಗೆ ಹೋಗಲಿ? ಬಂದೆ, ತಡಿಯೇ ಮಾರಾಯ್ತಿ…” ಎಂದು ಕಥೆಗೆ ಬ್ರೇಕ್ ಹಾಕಿ, ಟವಲ್ ಹುಡುಕಿ ಸ್ನಾನಕ್ಕೆ ಹೊರಟೆ.
– ಗೊರೂರು ಅನಂತರಾಜು, ಹಾಸನ
9449462879
