ರಾಮನಾಥಪುರ, ಮಾ.30: ಪ್ರಸಿದ್ಧ ರಾಮನಾಥಪುರದ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ನೀರಿನ ಮಟ್ಟ ಕುಸಿದು, ಬಿಸಿಲಿನ ತಾಪದಿಂದ ನೀರು ಬಿಸಿಯಾಗಿರುವ ಪರಿಣಾಮ ಮತ್ಸ್ಯಗಳು ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ, ಮೀನುಗಳ ರಕ್ಷಣೆಗಾಗಿ ತಾತ್ಕಾಲಿಕ ತಡೆಗಟ್ಟೆ ನಿರ್ಮಿಸಿ ನೀರು ನಿಲ್ಲಿಸುವ ಕಾರ್ಯ ಕೈಗೊಳ್ಳಲಾಯಿತು.
ಕಾವೇರಿ ನದಿ ವಹ್ನಿ ಪುಷ್ಕರಣಿಯಲ್ಲಿರುವ ಮತ್ಸ್ಯರಾಶಿಗಳು ಸಾವಿರಾರು ಭಕ್ತರನ್ನು ಸೆಳೆಯುವ ಪ್ರಮುಖ ಆಕರ್ಷಣೆಯಾಗಿದ್ದು, ಜಾತ್ರೆ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಹಾಗೂ ಸಾಮಾನ್ಯ ದಿನಗಳಲ್ಲಿ ನೂರಾರು ಭಕ್ತರು ಇಲ್ಲಿ ಭೇಟಿ ನೀಡಿ ಮತ್ಸ್ಯಗಳ ಚಲನೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲಿನ ತಾಪದಿಂದ ನೀರು ಉಷ್ಣಗೊಂಡ ಪರಿಣಾಮ ಹತ್ತಾರು ಮತ್ಸ್ಯಗಳು ಸಾವನ್ನಪ್ಪುತ್ತಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರ ಸಹಕಾರದಿಂದ ವಹ್ನಿ ಪುಷ್ಕರಣಿಯಲ್ಲಿ ತಾತ್ಕಾಲಿಕ ತಡೆಗಟ್ಟೆ ಹಾಕಿ, ಮರಳು ಮೂಟೆಗಳನ್ನು ಬಳಸಿ ನೀರು ನಿಲ್ಲಿಸುವ ಕಾರ್ಯ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಖಜಾಂಚಿ ಶ್ರೀ ರಘು, “ರಾಮನಾಥಪುರದ ಕಾವೇರಿ ವಹ್ನಿ ಪುಷ್ಕರಣಿಯ ಮತ್ಸ್ಯಗಳನ್ನು ನೋಡಲು ಪ್ರತಿದಿನ ಅನೇಕ ಭಕ್ತರು ಆಗಮಿಸುತ್ತಾರೆ. ಮತ್ಸ್ಯಗಳು ನೀರಿಲ್ಲದೆ ಸಾಯುತ್ತಿರುವುದು ತುಂಬಾ ನೋವು ತಂದಿದೆ. ಪ್ರತಿವರ್ಷವೂ ಇಂತಹ ತಾತ್ಕಾಲಿಕ ತಡೆಗಟ್ಟೆ ನಿರ್ಮಿಸಿ ಮತ್ಸ್ಯರಕ್ಷಣೆ ಕಾರ್ಯ ಮಾಡುತ್ತಾ ಬಂದಿದ್ದೇವೆ” ಎಂದು ತಿಳಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕಾಳಬೋಯಿ ಮಾತನಾಡಿ, “ಇಂತಹ ಪುಣ್ಯ ಕ್ಷೇತ್ರಗಳ ಅಭಿವೃದ್ಧಿ ಮತ್ತು ಕಾವೇರಿ ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಗೊಳ್ಳಬೇಕು ಎಂಬುದು ನಮ್ಮ ಆಶಯ. ಸಮಿತಿಯ ವತಿಯಿಂದ ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾವೇರಿ ಅಭಿಯಾನ ಯಾತ್ರೆ ಹಾಗೂ ಸ್ವಚ್ಛತಾ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದೇವೆ” ಎಂದರು.

ಇದೇ ವೇಳೆ, ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ವಹ್ನಿ ಪುಷ್ಕರಣಿ ಮತ್ತು ದೇವಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಬಳಿಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಮಾತನಾಡಿ, “ವಹ್ನಿ ಪುಷ್ಕರಣಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮತ್ಸ್ಯಗಳ ಜೀವಕ್ಕೆ ಅಪಾಯ ಉಂಟಾಗಿತ್ತು. ಹೀಗಾಗಿ ಜೆಸಿಬಿ ಮೂಲಕ ತಾತ್ಕಾಲಿಕ ತಡೆಗಟ್ಟೆ ನಿರ್ಮಿಸಿ, ಮರಳು ಮೂಟೆಗಳನ್ನು ಬಳಸಿ ನೀರು ನಿಲ್ಲಿಸಿ ಮತ್ಸ್ಯರಕ್ಷಣೆ ಮಾಡಲಾಗುತ್ತಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಂಘಟನೆ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ, ಸದಸ್ಯರಾದ ಆರ್.ಕೆ. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
