ಚನ್ನರಾಯಪಟ್ಟಣ : ಪಟ್ಟಣದಲ್ಲಿ ನೂತನ ನವೀಕರಣದೊಂದಿಗೆ ಎ-1 ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಇನ್ಸ್ಟಿಟ್ಯೂಷನ್ನ ಪುನರಾರಂಭ ಮತ್ತು ಬೇಸಿಗೆ ಶಿಬಿರಕ್ಕೆ ಮಾ.30ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಾಗುವುದು ಎಂದು ಅಕಾಡೆಮಿ ಮುಖ್ಯಸ್ಥ ರಂಗನಾಥ್ ತಿಳಿಸಿದ್ದಾರೆ.
ಪಟ್ಟಣದ ನವೋದಯ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿ ನವೀಕರಣಗೊಳಿಸಿರುವ ಅಕಾಡೆಮಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರೀಡಾ ಪ್ರೋತ್ಸಾಹದ ನಿಟ್ಟಿನಲ್ಲಿ ವಿಶೇಷವಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಿಬಿರದ ಬಳಿಕವೂ ಎಂದಿನಂತೆ ಅಕಾಡೆಮಿಯಲ್ಲಿ ಪ್ರತಿದಿನ ನಿಯಮಿತವಾಗಿ ತರಬೇತಿ ತರಗತಿಗಳು ಮುಂದುವರಿಯಲಿವೆ ಎಂದು ಹೇಳಿದರು.
ಇದೇ ವೇಳೆ, ನೂತನ ಕ್ರೀಡಾಂಗಣವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ, ತಹಶೀಲ್ದಾರ್ ಶಂಕರಪ್ಪ, ಪುರಸಭಾ ಮುಖ್ಯಾಧಿಕಾರಿ ಯತೀಶ್, ಪುರಸಭೆಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ರಂಗನಾಥ್ ಮಾಹಿತಿ ನೀಡಿದರು.
