ಶ್ಲೋಕ – 08
ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ ॥೮॥
ತಮಃ ತು ಅಜ್ಞಾನಜಮ್ ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದ ಆಲಸ್ಯ ನಿದ್ರಾಭಿಃ ತತ್ ನಿಬಧ್ನಾತಿ ಭಾರತ –ಎಲ್ಲ ಜೀವಿಗಳಿಗೆ ಅಜ್ಞಾನ ನೀಡುವಂಥದು, ಭ್ರಮೆಗೊಳಿಸುವಂಥದು- ತಮೋಗುಣ ಎಂದು ತಿಳಿ. ಭಾರತ, ಅದು ಮೈಮರೆವು, ಸೋಮಾರಿತನ ಮತ್ತು ನಿದ್ದೆಗಳಿಂದ ಕಟ್ಟಿಹಾಕುತ್ತದೆ.
ಏನೂ ಗೊತ್ತಿಲ್ಲದೆ ಇರುವುದು ತಮಸ್ಸು. ತಮೋಗುಣದಿಂದ ಅಜ್ಞಾನ ಹುಟ್ಟುತ್ತದೆ. ಅದು ಎಷ್ಟು ಬಲಿಷ್ಟ ಎಂದರೆ-ಅದು ನನ್ನಲ್ಲಿ ಜ್ಞಾನವಿಲ್ಲ, ನಾನು ಅಜ್ಞಾನಿ ಎನ್ನುವ ಜ್ಞಾನವೂ ಬಾರದಂತೆ ಮಾಡಬಲ್ಲದು. ಇದು ಅತ್ಯಂತ ಭಯಾನಕ. ಆಂಗ್ಲ ಭಾಷೆಯಲ್ಲಿ ಹೇಳುವಂತೆ: “He who knows not, and knows not that he knows not, is a fool”. ನನಗೆ ಏನೂ ಗೊತ್ತಿಲ್ಲ ಅನ್ನುವ ವಿಷಯ ಕೂಡ ನನಗೆ ಗೊತ್ತಿಲ್ಲದೆ ಇರುವುದು ತಮೋಗುಣದಿಂದ. ಇದು ಸಮಸ್ತರನ್ನು ಭ್ರಮೆಯಲ್ಲಿ ಸಿಲುಕಿಹಾಕಿಸುವ ಗುಣ. ತಮಸ್ಸು ನಾವು ಬಿಡಿಸಿಕೊಳ್ಳಲಾಗದ ಮೂರು ಕಟ್ಟಿನಿಂದ ನಮ್ಮನ್ನು ಬಂಧಿಸುತ್ತದೆ. ಅವುಗಳೆಂದರೆ ನಿದ್ದೆ, ಆಲಸ್ಯ ಮತ್ತು ಪ್ರಮಾದ. ಎಚ್ಚರದಲ್ಲೂ ಎಚ್ಚರವಿಲ್ಲದೆ ಬದುಕುವುದು ಪ್ರಮಾದ. ತಪ್ಪು ಮಾಡುವುದು ತಪ್ಪಲ್ಲ, ಆದರೆ ತಪ್ಪು ಮಾಡಿಯೂ ತಿದ್ದಿಕೊಳ್ಳದೆ ಇರುವುದು ಪ್ರಮಾದ. ಇದಕ್ಕೆ ಕಾರಣ ನಮ್ಮಲ್ಲಿರುವ ಈ ತಮೋಗುಣ.
