ತುಮಕೂರು: ನಗರದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಡಾ||ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತಿಯನ್ನು ದಾಸೋಹ ಕಾರ್ಯಕ್ರಮದ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪನವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಬ್ಯಾಂಕ್ ಆವರಣದಲ್ಲಿ ನಮ್ಮ ಆರಾಧ್ಯ ಧೈವವಾದ ಡಾ||ಶ್ರೀಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಇದೇ ದಿನ ತುಮಕೂರಿಗೆ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿದ್ರೌಪದಿಮುರ್ಮು ಅವರು ಆಗಮಿಸಿರುವುದು ಜಿಲ್ಲೆಯ ಜನತೆಗೆ ಹಬ್ಬದ ವಾತಾವರಣವನ್ನು ತಂದಿದೆ ಎಂದು ತಿಳಿಸಿದರು. ಕೆಲವು ಅನಿವಾರ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಈ ಬಾರಿ ಸಿಹಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವೂ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಬ್ಯಾಂಕ್ ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನಯ್ಯ, ರಾಜ್ಯದಾದ್ಯಂತ ಈ ದಿನವನ್ನು ದಾಸೋಹ ದಿನವಾಗಿ ಆಚರಿಸಲಾಗುತ್ತಿದ್ದು, ಪ್ರತಿ ಹಳ್ಳಿಯಲ್ಲಿಯೂ ಶ್ರೀಮಠದ ಭಕ್ತರು ದಾಸೋಹ ನಡೆಸುವ ಮೂಲಕ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕರು, ಸಿಇಓ, ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
