ಶ್ಲೋಕ – 09
ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥೯॥
ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮ್ ಆವೃತ್ಯ ತು ತಮಃ ಪ್ರಮಾದೇ ಸಂಜಯತಿ ಉತ –ಸತ್ವಗುಣ ಸುಖದ ನಂಟಿನಲ್ಲಿರುತ್ತದೆ. ಭಾರತ, ರಜೋಗುಣ ಕರ್ಮದ ನಂಟಿನಲ್ಲಿರುತ್ತದೆ. ತಮೋಗುಣ ಅರಿವನ್ನು ಮುಚ್ಚಿ ಮೈಮರೆಸಿ ಬಿಡುತ್ತದೆ.
ಈ ಶ್ಲೋಕದಲ್ಲಿ ಕೃಷ್ಣ ಮೂರು ಗುಣಗಳನ್ನು ಒಟ್ಟಿನಲ್ಲಿ ಸಂಕ್ಷೇಪಿಸಿ ಹೇಳುತ್ತಾನೆ. ಸತ್ವದ ಮೂಲ ಗುಣಧರ್ಮ ಏನೆಂದರೆ -ಅದರಿಂದಾಗಿ ನಮ್ಮಿಂದ ಒಂದು ಸಹಜವಾದ ಆನಂದ ಚಿಮ್ಮುತ್ತದೆ. ರಜೋಗುಣ “ಏನಾದರೂ ಮಾಡಬೇಕು ಇಲ್ಲದಿದ್ದರೆ ಜೀವನದಲ್ಲಿ ಸುಖವಿಲ್ಲ” ಎಂದು, ಸದಾ ದುಡ್ಡಿಗಾಗಿ ಹೋರಾಟ ಮಾಡುತ್ತಾ, ತಮ್ಮ ಜೀವನವನ್ನು ಸವೆಸುವಂತೆ ಮಾಡುತ್ತದೆ. ತಮಸ್ಸು ನಮ್ಮಲ್ಲಿರುವ ಜ್ಞಾನವನ್ನು ಮುಚ್ಚಿಬಿಡುತ್ತದೆ. ಉದಾಹರಣೆಗೆ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎನ್ನುವ ಒಳ್ಳೆಯತನ, ಕೊಡುವುದರಲ್ಲಿ ಖುಷಿಪಡುವುದು-ಸತ್ವಗುಣ. ತಾನು ಸುಖವಾಗಿರಬೇಕು ಎಂದು ಸದಾ ಸುಖದ ಅನ್ವೇಷಣೆಯಲ್ಲಿ ತೊಡಗಿ, ಮಾಡಬಾರದ ಕೆಲಸವನ್ನು ಮಾಡುತ್ತ ಬದುಕುವುದು ರಜೋಗುಣ. ನಮ್ಮಿಂದ ನಡೆಯುವ ಪ್ರಮಾದವೆಲ್ಲವೂ ತಮೋಗುಣದ ಪ್ರಭಾವ. ಇದು ನಮಗೆ ಕೃಷ್ಣ ಗೀತೆಯ ಮೂಲಕ ಹೇಳಿದ ಅತ್ಯುನ್ನತವಾದ ಮನಃಶಾಸ್ತ್ರ.
