“ಬೇಸರ ಆಗುತ್ತಿದೆ…” ಈ ಮಾತು ನಮ್ಮ ದಿನನಿತ್ಯದ ಬದುಕಿನ ಅತಿ ಸಾಮಾನ್ಯ ಪದಗಳಲ್ಲಿ ಒಂದಾಗಿದೆ. ನಾವು ಅದನ್ನು ಎಷ್ಟೋ ಬಾರಿ ಬಳಸುತ್ತೇವೆ; ಆದರೆ ಒಂದೇ ಬಾರಿ ನಿಂತು ಕೇಳಿದ್ದೇವೇ — ಬೇಸರ ಎಂದರೇನು? ಅದು ಯಾಕೆ ಹುಟ್ಟುತ್ತದೆ? ಈ ಪ್ರಶ್ನೆಯನ್ನು ನಿಧಾನವಾಗಿ, ಆತುರವಿಲ್ಲದೆ ನೋಡಿದರೆ ಒಂದು ವಿಚಿತ್ರ ಸತ್ಯ ತೆರೆದುಕೊಳ್ಳುತ್ತದೆ:
ಬೇಸರ ಸ್ವತಃ ಸಮಸ್ಯೆಯಲ್ಲ; ಅದು ನಮ್ಮ ಬದುಕಿನ ಶೈಲಿಯ ಪ್ರತಿಬಿಂಬ.
ನಾವು ಇಂದು ವೈಜ್ಞಾನಿಕ ನಾಗರಿಕತೆಯ ಯುಗದಲ್ಲಿ ಬದುಕುತ್ತಿದ್ದೇವೆ. ಈ ನಾಗರಿಕತೆ ನಮಗೆ ವೇಗವನ್ನು ಕೊಟ್ಟಿದೆ, ಸಾಮರ್ಥ್ಯವನ್ನು ಕೊಟ್ಟಿದೆ, ಸುಲಭತೆಯನ್ನು ಕೊಟ್ಟಿದೆ. ಆದರೆ ಅದೇ ಸಮಯದಲ್ಲಿ ಅದು ನಮ್ಮಿಂದ ಒಂದು ಅಮೂಲ್ಯ ಗುಣವನ್ನು ಕಸಿದುಕೊಂಡಿದೆˌ ನಿಧಾನವಾಗಿ ಅನುಭವಿಸುವ ಶಕ್ತಿ. ವೇಗದ ಜೀವನ ಶೈಲಿಗೆ ಅಂಟಿಕೊಂಡಿರುವ ಯುಗದಲ್ಲಿ ಸಮಾಧಾನವು ಅವಸರದ ಬೆನ್ನರಿದೆ…
“Fast and Best” ಎಂಬ ಸೂತ್ರವೇ ಈ ಕಾಲದ ಮಂತ್ರವಾಗಿದೆ. ಎಲ್ಲವೂ ವೇಗವಾಗಿ, ಅತ್ಯುತ್ತಮವಾಗಿ ಆಗಬೇಕು. ಆದರೆ ಇದೇ ವೇಗವೇ ಮನುಷ್ಯನೊಳಗೆ ಒಂದು ಖಾಲಿತನವನ್ನು ಸೃಷ್ಟಿಸುತ್ತಿದೆ. ಯಂತ್ರದಂತೆ ಓಡುತ್ತಿರುವ ಜೀವನದಲ್ಲಿ, ಆಳವಾದ ಅನುಭವಗಳಿಗೆ ಅವಕಾಶವೇ ಇಲ್ಲ. ಮನಸ್ಸು ಓಡುತ್ತದೆ; ಆದರೆ ಅದು ಎಲ್ಲಿಗೂ ತಲುಪುವುದಿಲ್ಲ. ಸುಮ್ನೆ ಓಡುತ್ತಲೇ ಇರುತ್ತದೆ.
ನಮ್ಮ ದಿನನಿತ್ಯದ ಜೀವನವನ್ನು ಗಮನಿಸಿ:
ಪ್ರತಿದಿನ ಅದೇ ಸಮಯಕ್ಕೆ ಎದ್ದೇಳುವುದು…
ಅದೇ ಕೆಲಸಕ್ಕೆ ಓಡುವುದು…
ಸಂಜೆ ಸುಸ್ತಾಗಿ ಮನೆಗೆ ಬಂದು, ಅದೇ ಟಿವಿಯ ಮುಂದೆ ಕುಳಿತುಕೊಳ್ಳುವುದು…
ಈ ಪುನರಾವರ್ತಿತ ಚಕ್ರದಲ್ಲಿ ಮನಸ್ಸು ನಿಧಾನವಾಗಿ ಸ್ತಬ್ಧವಾಗುತ್ತದೆ. ಇದೇ ಪುನರಾವರ್ತನೆ ಬೇಸರದ ಬೀಜ.
ಬೇಸರದಿಂದ ತಪ್ಪಿಸಿಕೊಳ್ಳಲು ನಾವು ಹೊರಗೆ ಓಡುತ್ತೇವೆ — ಪ್ರಯಾಣ, ಮನರಂಜನೆ, ಹೊಸ ಸ್ಥಳಗಳು…ಆದರೆ ಕೆಲವು ಕ್ಷಣಗಳ ನಂತರ, ಅದೇ ಬೇಸರ ಮತ್ತೆ ನಮ್ಮನ್ನು ಹಿಡಿದುಕೊಳ್ಳುತ್ತದೆ.
ಏಕೆಂದರೆ ಸಮಸ್ಯೆ ಹೊರಗಿಲ್ಲ — ಅದು ಮನಸ್ಸಿನ ವೇಗದಲ್ಲಿ ಇದೆ. ಮನಸ್ಸಿನ ಓಟವನ್ನು ನಿಲ್ಲಿಸದೇ ಇದ್ದರೆ, ಬೇಸರದಿಂದ ಹೊರಬರುವುದು ಅಸಾಧ್ಯ.
ಹಳೆಯ ಕಾಲದಲ್ಲಿ ಜನರು ನಿಧಾನವಾಗಿ ಬದುಕುತ್ತಿದ್ದರು. ಅವರು ಬಂಡಿಯಲ್ಲಿ ಪ್ರಯಾಣಿಸುತ್ತಿದ್ದರು; ಆದರೆ ಅವರ ಮನಸ್ಸು ಶಾಂತವಾಗಿತ್ತು. ಇಂದಿನಂತೆ ವೇಗದ ವಾಹನಗಳು ಇರಲಿಲ್ಲ, ಆದರೆ ಅವರ ಅನುಭವಗಳು ಆಳವಾಗಿದ್ದವು. ಇಂದು ನಾವು ವೇಗವಾಗಿ ಓಡುತ್ತೇವೆ, ಬೇಗ ತಲುಪುತ್ತೇವೆ. ಆದರೆ ತಲುಪಿದ ನಂತರದ ಸಮಯವನ್ನು ನಾವು ಹೇಗೆ ಬಳಸುತ್ತೇವೆ?
ಅಲ್ಲಿ ಸಮಸ್ಯೆ ಪ್ರಾರಂಭವಾಗುತ್ತದೆ.
ಆ ಶಕ್ತಿ ಸೃಜನಾತ್ಮಕವಾಗಿ ಬಳಕೆಯಾಗುವುದಿಲ್ಲ.
ಅದು ವಿಕೃತ ರೂಪಗಳಲ್ಲಿ ಹೊರಹೊಮ್ಮುತ್ತದೆ —
ಹಿಂಸೆ, ಅತಿಕಾಮುಕತೆ, ವ್ಯಸನಗಳು, ನಿರರ್ಥಕ ವ್ಯಸ್ತತೆ.
ಇದು ಕೇವಲ ಸಾಮಾಜಿಕ ಸಮಸ್ಯೆಯಲ್ಲ;
ಇದು ಒಳಗಿನ ಖಾಲಿತನದ ಲಕ್ಷಣ.
ಇಂದಿನ ಮನುಷ್ಯನ ಸ್ಥಿತಿ ಏನೆಂದರೆ —
ಅವನು ಒಂದು ಗಂಟೆ ಕೂಡ ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಏನಾದರೂ ಮಾಡುತ್ತಲೇ ಇರಬೇಕು. ಯಾಕೆಂದರೆ ಮೌನ ಅವನಿಗೆ ಅಸಹನೀಯ.ಈ ಯಾಂತ್ರಿಕ ಮನಸ್ಸು ಬೇಸರದಿಂದ ತಪ್ಪಿಸಿಕೊಳ್ಳಲು ಹೊಸಹೊಸ ಕ್ರೇಜ್ಗಳನ್ನು ಸೃಷ್ಟಿಸುತ್ತದೆ. ಆದರೆ ಅವುಗಳೆಲ್ಲ ತಾತ್ಕಾಲಿಕ.
Zen Buddhism ನಲ್ಲಿ ಒಂದು ಚಹಾ ಕುಡಿಯುವ ಕ್ರಿಯೆಯೇ ಧ್ಯಾನವಾಗುತ್ತದೆ. ಒಂದು ಕಪ್ ಚಹಾ ಕುಡಿಯಲು ಅರ್ಧಗಂಟೆ ತೆಗೆದುಕೊಳ್ಳುತ್ತಾರೆ. ಕೆಲವರು ಚಹಾ ಕಪ್ ಒಡೆಯುತ್ತಾರೆ…
ಅದನ್ನು ನಿಧಾನವಾಗಿ ಮರು ಜೋಡಿಸುತ್ತಾರೆ…
ಇದು ನಮಗೆ ಹುಚ್ಚತನದಂತೆ ಕಾಣಬಹುದು.
ಆದರೆ ಅದರಲ್ಲಿ ಒಂದು ಆಳವಾದ ಅನುಭವ ಇದೆ —
ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸುವ ಶಕ್ತಿ.
ನಮ್ಮಲ್ಲಿ ಇದೇ ಕೊರತೆ. ನಮ್ಮ ಅನುಭವಗಳು ಆಳವಿಲ್ಲದವು, ಪುನರಾವರ್ತಿತವು. ಆದ್ದರಿಂದ ಬೇಸರ ಅನಿವಾರ್ಯ. ಬೇಸರದಿಂದ ಹೊರಬರುವ ದಾರಿ ಬಹಳ ಸರಳ — ಆದರೆ ಅದೇ ಸಮಯದಲ್ಲಿ ಅತ್ಯಂತ ಕಠಿಣ.
ನಿಧಾನವಾಗು.
ಕುಳಿತುಕೊಳ್ಳುವಾಗ ನಿಧಾನವಾಗು…
ಚಹಾ ಕುಡಿಯುವಾಗ ನಿಧಾನವಾಗು…
ತಿನ್ನುವಾಗ, ನಡೆಯುವಾಗ, ಮಾತನಾಡುವಾಗ — ನಿಧಾನವಾಗು…
ಈ ನಿಧಾನದಲ್ಲಿ ಒಂದು ಹೊಸ ಜಗತ್ತು ತೆರೆದುಕೊಳ್ಳುತ್ತದೆ.
ಬೇಸರಕ್ಕೆ ಇನ್ನೊಂದು ದೊಡ್ಡ ಕಾರಣ — “efficiency”.
ಎಲ್ಲದರಲ್ಲೂ ಅತ್ಯುತ್ತಮವಾಗಬೇಕೆಂಬ ಒತ್ತಡ.
ಪ್ರತಿ ಕ್ಷಣವೂ ಉತ್ಪಾದಕವಾಗಿರಬೇಕೆಂಬ ಒತ್ತಡ.
ಆದರೆ ನಿಸರ್ಗದಲ್ಲಿ “The Best” ಎಂಬ ಅಂತಿಮ ಗುರಿ ಇಲ್ಲ. ಅದು ನಿರಂತರ ವಿಕಸನದ ಪ್ರಕ್ರಿಯೆ.
ನಾವು ಮಾತ್ರ ಅಂತಿಮತೆಯನ್ನು ಹುಡುಕುತ್ತೇವೆ.
ಅದೇ ನಮ್ಮ ಅಶಾಂತಿಯ ಮೂಲ.
ಇಂದಿನ ಮಕ್ಕಳು ಕೂಡ “ಬೋರ್ ಆಗುತ್ತಿದೆ” ಎಂದು ಹೇಳುತ್ತಾರೆ.
ಅವರಿಗೆ ಬದುಕನ್ನು ಅನುಭವಿಸುವುದನ್ನು ಕಲಿಸುತ್ತಿಲ್ಲ; ಅವರನ್ನು ಯಂತ್ರಗಳನ್ನಾಗಿ ತರಬೇತುಗೊಳಿಸುತ್ತಿದ್ದೇವೆ.
ಕೊನೆಯಲ್ಲಿ, ಒಂದು ಸೂಕ್ಷ್ಮ ಅರಿವು:
ಬೇಸರ ಶತ್ರುವಲ್ಲ. ಅದು ಒಂದು ದ್ವಾರ.
ನೀನು ಅದರಿಂದ ಓಡಿದರೆ —
ಅದು ನಿನ್ನನ್ನು ಹಿಂಬಾಲಿಸುತ್ತದೆ.
ನೀನು ಅದನ್ನು ನೋಡುವ ಧೈರ್ಯ ಮಾಡಿದರೆ —
ಅದು ಒಂದು ಆಳವಾದ ಶಾಂತಿಗೆ ಕರೆದೊಯ್ಯುತ್ತದೆ.
ಬಹುಶಃ… ನಮ್ಮ ಜೀವನದಲ್ಲಿ ನಾವು ಮಾಡಬೇಕಾದ ಅತಿ ದೊಡ್ಡ ಕ್ರಾಂತಿ ಇದೇ —
ವೇಗದಿಂದ ನಿಧಾನಕ್ಕೆ ಬರುವುದು.
ಯಂತ್ರದಿಂದ ಮಾನವನಾಗುವುದು.
ಅಲ್ಲಿ “ಬೋರಿಂಗ್” ಕೂಡ
ಒಂದು ಅದ್ಭುತ ಅನುಭವವಾಗಬಹುದು.
*ಜಯದೇವ ಪೂಜಾರ*
7676870233
