ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ಹೆಚ್.ಎಸ್. ಗೋವಿಂದಗೌಡರು ಸದ್ಯ ಮೈಸೂರು ನಿವಾಸಿ. ಪೌರಾಣಿಕ ರಂಗನಟರಾದ ಇವರು, ರಂಗಕೃತಿಗಳ ಪ್ರಕಟಣೆಯಲ್ಲಿಯೂ ತೊಡಗಿ, ರಂಗಸೇವೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊನ್ನೆ ಇವರನ್ನು ಮನೆಯಲ್ಲಿ ಭೇಟಿಯಾದೆ. ಇತ್ತೀಚೆಗೆ ಮೈಸೂರಿನಲ್ಲಿ ಬಿಡುಗಡೆಯಾದ ಕೆಲವು ರಂಗಕೃತಿಗಳನ್ನು ನನಗೆ ನೀಡಿದರು. ಅವುಗಳಲ್ಲಿ ‘ಕಂಪನಿ ಕಲಾವಿದರು’ ಎಂಬ ಕೃತಿಯೂ ಒಂದು.
“ಇದರಲ್ಲಿ ನಾಟಕ ಕಂಪನಿಗಳ ಕಲಾವಿದರನ್ನಷ್ಟೇ ಪರಿಚಯ ಮಾಡಿದ್ದೇನೆ” ಎಂದರು. ನಾನು (ಗೊರೂರು ಅನಂತರಾಜು) ೨೦೧೧ರಲ್ಲಿ ಪ್ರಕಟಿಸಿದ ‘ಅಭಿನಯ ಅಭಿವ್ಯಕ್ತಿ’ ಕೃತಿಯಲ್ಲಿ ಸುಮಾರು ೧೫೦ ಮಂದಿ ರಂಗಕಲಾವಿದರನ್ನು ಪರಿಚಯಿಸಿದಂತೆಯೇ, ಲೇಖಕರು ಈ ಕೃತಿಯಲ್ಲಿ ನಾಟಕ ಕಂಪನಿ ಕಲಾವಿದರ ಕಿರು ಪರಿಚಯವನ್ನು ನೀಡಿದ್ದಾರೆ.
ಅರಮನೆಯಲ್ಲಿ ಪ್ರತಿವರ್ಷ ಗೌರಿ ಹಬ್ಬದಲ್ಲಿ ಗೌರಿ ಪೂಜೆ ನಡೆಯುತ್ತಿದ್ದ ಕಾರಣ ಗೌರಿ ನರಸಿಂಹಯ್ಯ ಎಂದೇ ಪ್ರಸಿದ್ಧರಾದ ಇವರು ಹರಿಶ್ಚಂದ್ರ, ಶೂರಸೇನ, ರತ್ನಾವಳಿ, ಮಂದಾರವಲ್ಲಿ, ದ್ರೌಪದಿ, ಚಂದ್ರಮತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು. ೧೮೭೮ರಲ್ಲಿ ಮುಂಬೈನ ಮರಾಠಿ ಹಾಗೂ ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿ, ‘ಇಂದ್ರಸಭಾ ಬಾಣಾಸುರೋಪಾಖ್ಯಾನ’ ನಾಟಕವನ್ನು ೧೮೮೧ರಲ್ಲಿ ಅಂದಿನ ದಿವಾನರಾದ ರಂಗಾಚಾರ್ಲು ಅವರ ಅಧ್ಯಕ್ಷತೆಯಲ್ಲಿ ಪ್ರದರ್ಶಿಸಲಾಯಿತು.
ಅದರಲ್ಲಿ ನಾಯಕನ ಪಾತ್ರದಲ್ಲಿ ರಂಗಗೀತೆ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡವರು ಮಂಡ್ಯ ರಂಗಾಚಾರ್ಯರು.
ಉಡುಪಿ ಬಳಿಯ ನಂದಳಿಕೆ ಗ್ರಾಮದಲ್ಲಿ ೧೮೬೬ರಲ್ಲಿ ಜನಿಸಿದ ಬಿಡಾರಂ ಕೃಷ್ಣಪ್ಪ ಅವರು ಯಕ್ಷಗಾನ ಮಂಡಳಿಗಳು ಪ್ರದರ್ಶಿಸುತ್ತಿದ್ದ ದಶಾವತಾರ ನಾಟಕಗಳಲ್ಲಿ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದರು. ವಿರಾಟಪರ್ವ ಮತ್ತು ಗಯಚರಿತ್ರೆ ನಾಟಕಗಳನ್ನು ರಚಿಸಿದ ಗಿರಿಭಟ್ಟರ ತಮ್ಮಯ್ಯ ಅವರು ಶಾಕುಂತಲ ನಾಟಕದಲ್ಲಿ ಕಣ್ವ ಋಷಿ ಪಾತ್ರದಿಂದ ಖ್ಯಾತಿ ಪಡೆದಿದ್ದರು. ೩೩ ವರ್ಷಗಳ ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ ಲಕ್ಷ್ಮೀಪತಿಶಾಸ್ತ್ರಿ ಆಲ್ರೌಂಡ್ ಆಕ್ಟರ್ ಆಗಿದ್ದರು. ಅರಮನೆಯಲ್ಲಿ ವಿದೂಷಕನಾಗಿ, ತೆಳ್ಳಗೆ-ಕುಳ್ಳಗಿದ್ದ ಪುಟ್ಟಾರಿಶಾಸ್ತ್ರಿ ಹಾಸ್ಯಪಾತ್ರದಾರರಾಗಿ ಗುರುತಿಸಿಕೊಂಡಿದ್ದರು.
ಬಸವಪ್ಪ ಶಾಸ್ತ್ರಿಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಬಳಿಕ, ೧೮೮೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಅರಮನೆ ಕಂಪನಿಯ ಗಿರಿಭಟ್ಟರ ತಮ್ಮಯ್ಯ, ಲಕ್ಷ್ಮೀಪತಿಶಾಸ್ತ್ರಿ ಅವರ ಜೊತೆಗೆ ದುಷ್ಯಂತನ ಪಾತ್ರದಲ್ಲಿ ಯಶಸ್ಸು ಗಳಿಸಿದವರು ನಟಶೇಖರ ಎಂ.ಡಿ. ಸುಬ್ಬಣ್ಣ.
ಅರಮನೆ ಕಂಪನಿ ೧೯೧೭ರಲ್ಲಿ ಕೊನೆಗೊಂಡು, ೧೯೧೯ರಲ್ಲಿ ‘ಶಾಕುಂತಲ ಕರ್ನಾಟಕ ನಾಟಕ ಸಭಾ’ ಎಂಬ ಹೆಸರಿನಲ್ಲಿ ಪುನಃ ಪ್ರಾರಂಭವಾಯಿತು. ಈ ತಂಡ ಮದ್ರಾಸಿಗೆ ಪ್ರಯಾಣ ಮಾಡಿ ಪ್ರದರ್ಶನ ನೀಡಿದಾಗ, ರಾಣ ಪಾತ್ರದಲ್ಲಿ ಟಿ. ನರಸೀಪುರದ ಎನ್. ಸುಬ್ಬಣ್ಣ ಮತ್ತು ರಾಜಪಾರ್ಟಿನ ವಿದ್ವಾಂಸ ಬಿ. ರಾಚಪ್ಪ ಅವರ ರಾಜನ ಪಾತ್ರದ ಅಭಿನಯಕ್ಕೆ ಜನ ಮೆಚ್ಚಿ ಬಂಗಾರದ ಪದಕ ನೀಡಿ ಗೌರವಿಸಿದರು.
ರಂಗದಿಂದ ಸಿನಿಮಾರಂಗಕ್ಕೆ ಬಂದ ಜಿ.ವಿ. ಅಯ್ಯರ್ ತಮ್ಮ ಎಂಟನೇ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿದ್ದರು. ರಾಜವಿಕ್ರಮ ನಾಟಕದಲ್ಲಿ ಭಟ್ಟಿ ಎಂಬ ಮಂತ್ರಿಪಾತ್ರ ಮಾಡುತ್ತಿದ್ದ ಟಿ. ನರಸೀಪುರ ತಾಲೂಕಿನ ಮುಸುವಿನ ಕೊಪ್ಪಲು ಗ್ರಾಮದ ಭಟ್ಟಿಮಹದೇವಪ್ಪ, ಮತ್ತು ಮಳವಳ್ಳಿ ತಾಲೂಕಿನ ಬೆಳಕವಾಡಿಯ ಶನಿದೇವರ ಪಾತ್ರದ ಅಭಿನಯದಿಂದ ‘ಶನಿಮಹದೇವಪ್ಪ’ ಎಂದು ಖ್ಯಾತರಾದವರು, ನಂತರ ಸಿನಿಮಾರಂಗದಲ್ಲಿಯೂ ಬೆಳಗಿದರು.
ಹಾಸನ ಜಿಲ್ಲೆಯ ರಾಜಾನಂದ್ ಅವರು ೩೦ಕ್ಕೂ ಹೆಚ್ಚು ವರ್ಷ ನಾಟಕರಂಗದಲ್ಲಿದ್ದು, ಅನೇಕ ನಾಟಕಗಳನ್ನು ರಚಿಸಿದರು. ಚಕ್ರತೀರ್ಥ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು, ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಇವರ ‘ಶ್ರೀ ಶಿರಡಿ ಸಾಯಿಬಾಬಾ ಮಹಾತ್ಮೆ’, ‘ಮಕರಜ್ಯೋತಿ ಮಣಿಕಂಠ’ ನಾಟಕಗಳನ್ನು ಗೋವಿಂದಗೌಡರು ಪ್ರಕಟಿಸಿದ್ದಾರೆ.
ವಿಶೇಷ ಧ್ವನಿಯ ಚಿತ್ರನಟ ಕೆ.ಎಂ. ರತ್ನಾಕರ್, ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿಯ ಕಂಚಿನ ಕಂಠದ ಚಿತ್ರನಟ ಧೀರೇಂದ್ರ ಗೋಪಾಲ್, ನಂಜನಗೂಡಿನ ಖಳನಟ ನಾಗಪ್ಪ, ಪೋಷಕಪಾತ್ರಗಳ ಚಿತ್ರನಟ ಸದಾಶಿವ ಬ್ರಹ್ಮಾವರ್, ಚಿಂತಾಮಣಿಯ ಚಿತ್ರನಟಿ ಎಂ.ಎನ್. ಲಕ್ಷ್ಮೀದೇವಿ, ಚೋಮನದುಡಿ ಖ್ಯಾತಿಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಮೂಡುಬಿದರೆಯ ಎಂ.ವಿ. ವಾಸುದೇವರಾವ್, ಪರಸಂಗ ಗೆಂಡೆತಿಮ್ಮ ಚಿತ್ರದ ಮೂಲಕ ಪ್ರಸಿದ್ಧರಾದ ಡಿಂಗ್ರಿ ನಾಗರಾಜ್, ನಾಲ್ಕನೇ ವಯಸ್ಸಿಗೇ ಬಣ್ಣ ಹಚ್ಚಿದ ಎಂ.ಎಸ್. ಉಮೇಶ್, ವಿಲನ್ ಆಗಿ ಚಿತ್ರರಂಗಕ್ಕೆ ಬಂದು ನಂತರ ಹಾಸ್ಯನಟರಾಗಿ ಹೆಸರು ಮಾಡಿದ ಮೈಸೂರಿನ ದಿನೇಶ್, ೭೫ ಚಿತ್ರಗಳಲ್ಲಿ ನಟಿಸಿ ಮೂರು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಂಗಳೂರಿನ ಕಲ್ಪನಾ, ಭೂತಯ್ಯನ ಮಗ ಅಯ್ಯು ಚಿತ್ರದ ಅಭಿನಯಕ್ಕೆ ಪ್ರಶಸ್ತಿ ಪಡೆದ ಲೋಕೇಶ್, ದೆಹಲಿಯ ರಂಗಶಾಲೆಯಲ್ಲಿ ತರಬೇತಿ ಪಡೆದ ಗುಬ್ಬಿ ವೀರಣ್ಣನವರ ಮೊಮ್ಮಗಳು ಜಯಶ್ರೀ, ಕಂಠದಾನ ಕಲಾವಿದೆ ಸರ್ವಮಂಗಳ, ಸುಬ್ಬಾಶಾಸ್ತ್ರಿ, ಸಂಸ್ಕಾರ, ಕಾಡು ಚಿತ್ರಗಳಲ್ಲಿ ನಟಿಸಿರುವ ಜಿ.ವಿ. ಶಿವಾನಂದ, ಚಿತ್ರರಂಗದಲ್ಲಿ ಮಿಂಚಿರುವ ಶರಣ್ ಹಾಗೂ ಶೃತಿ ಅವರ ತಂದೆ ಜಿ.ವಿ. ಕೃಷ್ಣ—ಇವರ ನಾಟಕ ಕಂಪನಿಯ ಪಾತ್ರಗಳ ಕಿರು ಪರಿಚಯವನ್ನು ಲೇಖಕರು ನೀಡಿದ್ದಾರೆ.
೧೯೭೦ರ ದಶಕದಲ್ಲಿ ಕುರುಕ್ಷೇತ್ರ ನಾಟಕವೆಂದರೆ ಪಿ. ವಜ್ರಪ್ಪ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು, ನೂರಾರು ರಂಗಗೀತೆಗಳನ್ನು ರಚಿಸಿದ್ದಾರೆ. ಐದು ದಶಕಗಳ ಕಾಲ ವೃತ್ತಿರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಮಾಲತಿಶ್ರೀ ಮೈಸೂರು ಅವರ ಪರಿಚಯವೂ ಈ ಕೃತಿಯಲ್ಲಿ ಇದೆ. ಎಲೆಮರೆಕಾಯಿಯಂತೆ ಇದ್ದು ಮರೆಯಾಗಿ ಹೋದ ಅನೇಕ ಕಲಾವಿದರನ್ನು ಈ ಕೃತಿ ಬೆಳಕಿಗೆ ತಂದಿದೆ.
ಅರಮನೆ ಕಂಪನಿಯ ಸಮಕಾಲೀನರಾದ ಬೋಧರಾಯ, ಸಂಗೀತಗಾರ ಸದಾಶಿವರಾಯ ಅವರ ಮೊಮ್ಮಗ ಸರ್ಟನ್ ರಾಮರಾವ್, ಹಾರ್ಮೋನಿಯಂ ವಾದಕರಾದ ಬೆಂಗಳೂರಿನ ಅರುಣಾಚಲಪ್ಪ, ಶಿವಮೊಗ್ಗದ ಸಿ.ಬಿ. ಜಯರಾಮ್, ಸದಾರಮೆ ನಾಟಕದ ಕಾಲಾಪಿಲ್ಲಯ್ಯ, ಮೈಸೂರು ಬೆಳಕವಾಡಿಯ ಶ್ರೀನಿವಾಸ ಅಯ್ಯಂಗಾರ್, ಕೋಲಾರದ ಕುರುಡಿ ಗ್ರಾಮದ ಸಂಗೀತರತ್ನ ಚಿಕ್ಕರಾಮರಾಯ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಬಲಗೈಯಂತಿದ್ದ ಕೃಷ್ಣಮೂರ್ತಿರಾಯ, ತುಮಕೂರು ದ್ಯಾವರಾಯಪಟ್ಟಣದ ಡಿ.ಆರ್. ಕೃಷ್ಣಮೂರ್ತಿ, ಗುಂಡ್ಲುಪೇಟೆಯ ಕಲಿಯುಗ ಭೀಮ ಜಿ.ವಿ. ಕೃಷ್ಣಮೂರ್ತಿ, ಚಿತ್ರಕಲೆಯ ಅಚಾರ್ ಕೆ.ವಿ., ಸೊರಬ ತಾಲೂಕಿನ ಮೂಡಿಯ ಅಣ್ಣಪ್ಪ ಎಂ.ಎಸ್., ಮೈಸೂರು ಹಳೆಯ ಬಂಡಿಕೇರಿಯ ಹಾರ್ಮೋನಿಯಂ ವಾದಕ ಎಂ. ಶಿವಪ್ಪ, ಚಿಕ್ಕನಾಯಕನಹಳ್ಳಿಯ ಸಿ.ಎಲ್. ರಾಮರಾಜೇ ಅರಸ್, ಗುಬ್ಬಿ ಕಂಪನಿಯ ಜಿ.ವಿ. ಸುಂದರಮ್ಮ, ಪ್ರಾಕ್ಟೀಸ್ ಮ್ಯಾನೇಜರ್ ಮುನಿಯಪ್ಪ, ಟಿಪ್ಪುಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರದಿಂದ ಖ್ಯಾತರಾದ ಸಾಗರ ತಾಲೂಕಿನ ಮುಡಗೋಡು ಗ್ರಾಮದ ಎಂ. ಶಾಂತಕುಮಾರ್, ಕನ್ನಡ ರಂಗಭೂಮಿಯ ಚಾಣಕ್ಯ ಎಂ.ಸಿ. ಮಹದೇವಸ್ವಾಮಿ, ಹರಿಕಥೆ ಮಾಡುತ್ತಾ ‘ಹರಿಕಥಮ್ಮ’ ಎಂದೇ ಕರೆಯಲ್ಪಟ್ಟ ವೆಂಕಟೇಶಮ್ಮ, ಗುಬ್ಬಿ ಕಂಪನಿಯ ಸ್ತ್ರೀಪಾತ್ರಧಾರಿ ತ್ರಿಪುರಾಂಬ, ೭೬ ವರ್ಷಗಳ ಸುಧೀರ್ಘ ರಂಗಸೇವೆಯ ಮೈಸೂರು ಆರ್. ಮಂಜುಳಮ್ಮ, ಕೆ.ಆರ್. ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ಎಚ್.ಆರ್. ನಂಜಶೆಟ್ಟರು, ಆಂಜನೇಯ ಪಾತ್ರದಿಂದ ಖ್ಯಾತರಾದ ಬೆಳ್ಳೂರು ನಂಜುಂಡಯ್ಯ—ಹೀಗೆ ಉತ್ತರ ಕರ್ನಾಟಕದವರಿಂದ ದಕ್ಷಿಣ ಕರ್ನಾಟಕದವರವರೆಗೆ ಹಲವಾರು ಕಲಾವಿದರ ಪರಿಚಯ ಇಲ್ಲಿ ಸಿಗುತ್ತದೆ.
ಬಿ.ಎಂ. ಸೀತರಾಮರಾಜು ಜನಪ್ರಿಯ ಸಂಗೀತ ನಿರ್ದೇಶಕರು. ಗುಬ್ಬಿ ವೀರಣ್ಣ ಅವರ ಮಗ ಚನ್ನಬಸವಣ್ಣ, ಪೇಂಟರ್ ಎಲ್. ನಾರಾಯಣಯ್ಯಂಗಾರ್, ಬೆಂಗಳೂರಿನ ಪದ್ಮ ವೇಣುಗೋಪಾಲ್, ಮಾವನ ಮನೆ ನಾಟಕದ ಭಾಗೀರಥಿ ಪಾತ್ರಧಾರಿಣಿ ಪ್ರಭಾ, ಜಿ.ಸಿ. ಬಸವರಾಜು, ಮೇಲುಕೋಟೆಯ ಎಂ.ಎನ್. ಪ್ರೇಮಕುಮಾರಿ (ಕೂಡಿ ಬಾಳೋಣ ಚಲನಚಿತ್ರದಲ್ಲಿ ನಟಿಸಿರುವವರು) ಇವರನ್ನೂ ಲೇಖಕರು ದಾಖಲಿಸಿದ್ದಾರೆ.
೯೮ ವರ್ಷ ವಯಸ್ಸಿನ ಕುಪ್ಯ ಎಂ.ಎಸ್. ವೆಂಕಟರಾಂ ಅವರು ತಾವು ಕಂಡ ಕೆಲವು ನಟರ ಪಾತ್ರಾಭಿನಯದ ಮಾಹಿತಿಯನ್ನು ಲೇಖಕರಿಗೆ ನೀಡಿದ್ದಾರೆ. ಇವರ ಪರಿಚಯವನ್ನು ನಾನು ‘ನಿಂತು ಹೋದ ರಂಗವೈಭವ’ ಪುಸ್ತಕದಲ್ಲಿ ಮಾಡಿರುವೆನು.
ಉಡುಪಿ ಭಾಗದ ಬಂಗೇರ ಐತಪ್ಪ, ಮೇಕಪ್ ಕಲಾವಿದ ತರೀಕೆರೆ ಕೃಷ್ಣಮೂರ್ತಿ, ಸ್ತ್ರೀ ನಾಟಕ ಮಂಡಳಿಯ ನರ್ತಕಿ ಎಂ.ಕೆ. ಸುಜಾತ, ಚನ್ನರಾಯಪಟ್ಟಣ ತಾಲೂಕಿನ ಚಿಕ್ಕೋನಹಳ್ಳಿಯ ಸಿ.ವಿ. ವೀರಭದ್ರಾಚಾರ್, ಶೃಂಗೇರಿಯ ಪ್ರಸಿದ್ಧ ನಟಿ ಬಿ.ಎಸ್. ಮಂಜುಳಾ ಅವರ ಸಹೋದರಿ ಬಿ.ಎಸ್. ಪೂರ್ಣಿಮಾ, ಗುಬ್ಬಿ ತಾಲೂಕಿನ ಒಡೆಯರ್ ಮಟಿಘಟ್ಟ ಗ್ರಾಮದ ಚನ್ನಬಸವಯ್ಯ, ಮೈಸೂರಿನ ಟಿ.ಎಸ್. ದೊರೆಸ್ವಾಮಿ, ಅರಸೀಕೆರೆ ತಾಲೂಕಿನ ಯೆರಗೇನಹಳ್ಳಿಯ ರಂಗಸಂಗೀತ ಶಿಕ್ಷಕರು ವೈ.ಎಂ. ಪುಟ್ಟಣ್ಣಯ್ಯ, “ಎರಡನೇ ಮಳವಳ್ಳಿ ಸುಂದರಮ್ಮ” ಎಂದು ರಂಗದಿಗ್ಗಜ ಹೊನ್ನಪ್ಪ ಭಾಗವತರಿಂದ ಕರೆಸಿಕೊಂಡಿದ್ದ ಮೈಸೂರಿನ ಕಲಾವತಿ, ಶ್ರೀಕೃಷ್ಣಲೀಲೆ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ‘ರಂಗನಾಯಕಿ’ ಎಂದು ಮರುನಾಮಕರಣಗೊಂಡ ಬೆಂಗಳೂರಿನ ನಿರ್ಮಲ, ಕೋಲಾರದ ಕಲಾರತ್ನ ಕೆ.ಎನ್. ಬಸವರಾಜು, ಮಂಡ್ಯದ ಎನ್. ಶಾಂತಮ್ಮ, ಇಂದಿಗೂ ನಟಿಸುತ್ತಿರುವ ಮೈಸೂರಿನ ಎಸ್. ಸರೋಜಿನಿ, ಆಲನಹಳ್ಳಿಯ ಎ.ಪಿ. ರಾಜಪ್ಪ, ನಂಜನಗೂಡು ತಾಲೂಕಿನ ಬಿಳಗಲಿ ಗ್ರಾಮದ ಸುಲೋಚನ—ಇವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಇತ್ತೀಚೆಗೆ, ೨೭-೧-೨೦೨೬ರಂದು ನಿಧನರಾದ ಮಂಡ್ಯ ನಾಗರಾಜಾಚಾರ್ ಅವರು ಹಾಸನದಲ್ಲಿ ರಾಮಾಯಣ ನಾಟಕ ಕಲಿಸಿದ್ದಾಗ, ಅವರನ್ನು ನಾನು ಮಾತನಾಡಿಸಿದ್ದೆನು. ಚಿಕ್ಕನಾಯಕನಹಳ್ಳಿಯ ಹಾಸ್ಯ ಕಲಾನಿಪುಣ ಬಿ.ಕೆ. ಪಂಚಲಿಂಗಯ್ಯ ಅವರ ಚಿಕ್ಕಪ್ಪ ರಂಗದಿಗ್ಗಜ ಸಿ.ಬಿ. ಮಲ್ಲಪ್ಪ. ಕಲಾತಪಸ್ವಿ ಬಿ.ಕೆ. ಈಶ್ವರಪ್ಪ ಅವರ ರಂಗಪರಿಚಯವನ್ನು ನಾನು ‘ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ’ ಕೃತಿಯಲ್ಲಿ ಮಾಡಿರುವೆನು. ತುಮಕೂರಿನ ಮಲ್ಲಸಂದ್ರದ ಡಾ. ಲಕ್ಷ್ಮಣದಾಸ್ ಇದೇ ಕೃತಿಗೆ ಆಶಯನುಡಿ ಬರೆದಿದ್ದಾರೆ.
ಚಾಮರಾಜನಗರದ ಆಲೂರು ಗ್ರಾಮದ ನಾಗರಾಜು, ತಬಲಾವಾದಕ ವಿ.ಎಂ. ಧನಪಾಲ್, ಕೊಪ್ಪಳದ ಕುಕನೂರಿನ ಸರಸ್ವತಿ ಜುಲೇಖಾ ಬೇಗಂ, ತಿಪಟೂರಿನ ಟಿ.ಎಚ್. ಹೇಮಲತ, ಈಗಲೂ ರಂಗದಲ್ಲಿರುವ ಅರಳಗುಪ್ಪೆಯ ಎನ್. ಸುಮಿತ್ರಮ್ಮ, ಇದೇ ಊರಿನ ನೀಲಕಂಠಾಚಾರ್, ಕಾಮಿಡಿ ಪಾತ್ರದಾರಿ ಎಂ. ನಾಗರಾಜ್ (ಇವರ ದೊಡ್ಡಪ್ಪ ಚಿತ್ರನಟ ಡಿಕ್ಕಿ ಮಾಧವರಾವ್), ಮೈಸೂರಿನ ಕಲಾವಿದೆಯರಾದ ಕಮಲಮ್ಮ, ಇಂದ್ರಾಣಿ, ಹೇಮಲತಾ, ವಸಂತಕುಮಾರಿ, ಸುವರ್ಣಮ್ಮ, ಮಂಜುಳಾರಾಜ್, ಎಸ್. ಭಾರತಿ, ಶಕುಂತಲಾ ವಾಸುದೇವನ್, ತಿಪಟೂರು ತಾಲೂಕಿನ ಕೋಟನಾಯಕನಹಳ್ಳಿಯ ಪರಪ್ಪ, ಇದೇ ತಾಲೂಕಿನ ಹೊನ್ನವಳ್ಳಿಯ ಲಕ್ಷ್ಮಮ್ಮ (ಇವರ ಸೋದರಮಾವ ಚಿತ್ರನಟ ನರಸಿಂಹರಾಜು), ಅರಸೀಕೆರೆ ತಾಲೂಕಿನ ಬಾಣಾವರದ ಬಿ. ಲೀಲಾವತಿ, ಸೊಲ್ಲಾಪುರ ಗ್ರಾಮದ ಎಸ್.ಎಸ್. ಗಾಯತ್ರಿ, ಬೆಂಗಳೂರಿನ ಬಿ.ಎ. ಶಾಂತಮ್ಮ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಚ್.ಕೆ. ಯೋಗಾನರಸಿಂಹ ಅವರ ಪುತ್ರ ಮೈಸೂರಿನ ಎಚ್.ವೈ. ರಾಜೇಶ್ವರ್, ಸೋಮವಾರಪೇಟೆಯ ಮೇರಿ ವಸಂತ ಮತ್ತು ಇವರ ಪತಿ ವಸಂತಕುಮಾರ್, ಇಂದಿಗೂ ರಂಗಸೇವೆ ಮುಂದುವರಿಸಿರುವ ಜಯಂತಿ (ಇವರ ಪತಿ ಕಳಲೆ ದೊರೆಯವರು), ಹರಿಹರದ ರಾಜೇಶ್ವರಿ, ನಂಜನಗೂಡು ತಾಲೂಕಿನ ಹುರ ಗ್ರಾಮದ ಎಚ್.ಎನ್. ಶೇಷಾಚಲ, ಮಂಡ್ಯದ ಮಂಗಳಗೌರಿ, ಮೈಸೂರಿನ ಶ್ರೀಕಂಠು, ಐದು ದಶಕಗಳ ಕಾಲ ರಂಗಸೇವೆ ಮಾಡಿದ ಲಕ್ಷ್ಮಮ್ಮ, ಸರಗೂರು ಶ್ರೀಪತಿರಾವ್, ಗುಬ್ಬಿ ಮುರಳೀಧರ್, ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದ ಶಂಕರ್, ಹೊಸದುರ್ಗ ತಾಲೂಕಿನ ಕಾಮಸಂದ್ರದ ನರಸಿಂಹಮೂರ್ತಿ, ಸೋದರ-ಸಂಬಂಧಿ ಬಂಧುಗಳಾಗಿದ್ದ ಅಡಗೂರು ಬಸವರಾಜು, ಶಿವಲಿಂಗಯ್ಯ, ಸಿದ್ಧಲಿಂಗಮರಿ, ತುಮಕೂರಿನ ಸೀತಕಲ್ ಕೃಷ್ಣಮೂರ್ತಿ, ನಂಜನಗೂಡು ಮೂಲದ ಎನ್.ಎಸ್. ಮೂರ್ತಿ, ಗುಬ್ಬಿ ಕಂಪನಿಯ ಬ್ರಾಂಚ್ ಕಂಪನಿ ಬಾಲ ಕಲಾವರ್ಧನಿ ಕಲಾವಿದರಾದ ಶ್ರೀಕಂಠಾಚಾರ್, ಹಾರ್ಮೋನಿಯಂ ಮಾಸ್ಟರ್ ಸಕ್ಕರೆಪಟ್ಟಣದ ಶಾಮಣ್ಣ, ಟಿ. ನರಸೀಪುರ ತಾಲೂಕಿನ ಚಿದರಹಳ್ಳಿ ಗ್ರಾಮದ ಸಿ.ಎನ್. ಶ್ರೀಕಂಠಮೂರ್ತಿ, ನಾಟಕ ಕಂಪನಿಗಳಲ್ಲಿ ಜೋಡಿ ನೃತ್ಯಗಾರ್ತಿಯರಾದ ಸಹೋದರಿಯರು ರಾಧಾ ಮತ್ತು ಶಾಂತ, ಹಾಗೂ ಕೊನೆಯಲ್ಲಿ ಹಾರ್ಮೋನಿಯಂ ಜಾದುಗಾರ ಮೇಲುಕೋಟೆ ಎಂ. ಶ್ರೀಕಂಠಶೆಟ್ಟರ್—ಇವರ ಪರಿಚಯಗಳನ್ನೂ ಈ ಕೃತಿ ಒಳಗೊಂಡಿದೆ.
ಒಟ್ಟಿನಲ್ಲಿ, ೧೨೫ ರಂಗಕಲಾವಿದರ ಪರಿಚಯವನ್ನು ಒಳಗೊಂಡ ‘ಕಂಪನಿ ಕಲಾವಿದರು’ ಕೃತಿ, ಗತಿಸಿಹೋದ ನಾಟಕ ಕಂಪನಿಗಳನ್ನೂ ಅವುಗಳ ಕಲಾಸಂಪತ್ತನ್ನೂ ಒಟ್ಟಾಗಿ ಪರಿಚಯಿಸುವ ಮಹತ್ವದ ದಾಖಲೆಯಾಗಿದೆ.

ಗೊರೂರು ಅನಂತರಾಜು, ಹಾಸನ
ಮೊ.: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ – ೫೭೩೨೦೧.
