ಹಾಸನ, ಏ.09: ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಕ್ರೀಡಾ ಉತ್ಸವದ ರೂಪದಲ್ಲಿ ರಾಜ್ಯಮಟ್ಟದ 7’s ಹೂನಲು ಬೆಳಕಿನ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಜೆಡಿಎಸ್ ಮಾಧ್ಯಮ ವಕ್ತಾರ ರಘು ಹೊಂಗೆರೆ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವರೂಪ್ ಪ್ರಕಾಶ್ ಅಭಿಮಾನಿಗಳ ಸಂಘ ಹಾಗೂ ಹಾಸನ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಸಂಯುಕ್ತವಾಗಿ ಈ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು, ಯುವ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಹೂನಲು ಬೆಳಕಿನಲ್ಲಿ ಮೂರು ದಿನಗಳ ಪಂದ್ಯಾವಳಿ
ಏಪ್ರಿಲ್ 10, 11 ಮತ್ತು 12ರಂದು ಹಾಸನ ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿಯ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಹೂನಲು ಬೆಳಕಿನಲ್ಲಿ ನಡೆಯುವ ಈ ಟೂರ್ನಮೆಂಟ್ ಕ್ರೀಡಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 25ಕ್ಕೂ ಹೆಚ್ಚು ತಂಡಗಳು
ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ಕೆಜಿಎಫ್, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 25ಕ್ಕೂ ಹೆಚ್ಚು ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಲಿದ್ದು, ಯುವಕರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಫೈನಲ್ ಪಂದ್ಯ ಭಾನುವಾರ
ಟೂರ್ನಮೆಂಟ್ನ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಆಕರ್ಷಕ ಬಹುಮಾನಗಳು ನೀಡಲಾಗುತ್ತದೆ.
ಕ್ರೀಡೆಗಳ ಮೂಲಕ ಯುವಕರನ್ನು ಉತ್ತೇಜಿಸುವುದು ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಗಾರರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಯ್ಸಳ ಅಕಾಡೆಮಿ ಸದಸ್ಯರಾದ ಸತೀಶ್, ಬಾಲಕೃಷ್ಣ, ಸುರೇಶ್, ಸುಮಂತ್ ಕುಮಾರ್, ಹೇಮಂತ್, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
