ವಿಜಯಪುರ, ಏ.10: ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಭ್ರಷ್ಟಾಚಾರ ಹಾಗೂ ಮಾನಸಿಕ ಹಿಂಸೆ ಆರೋಪಗಳು ಕೇಳಿಬಂದಿದ್ದು, ಠಾಣೆಯ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ದಯಾಮರಣ ನೀಡುವಂತೆ ಕೇಳಿರುವ ಘಟನೆ ಗಮನ ಸೆಳೆದಿದೆ.
ಪತ್ರದ ಪ್ರಕಾರ, ಠಾಣೆಯ ಪಿ.ಎಸ್.ಐ ಸೀತಾರಾಮ ಲಮಾಣಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಕೆಲ ಎ.ಎಸ್.ಐ ಮತ್ತು ಸಿಬ್ಬಂದಿಗಳ ಗುಂಪು ಸೇರಿಕೊಂಡು ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಹಣದ ವಸೂಲಿ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ.
ಠಾಣೆಯಲ್ಲಿ ದಾಖಲಾಗುವ ಪ್ರತಿಯೊಂದು FIR ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದಾರರಿಂದ ₹10,000ರಿಂದ ₹1 ಲಕ್ಷದವರೆಗೆ ಹಣ ವಸೂಲಿ ಮಾಡುವ ಒತ್ತಡ ಸಿಬ್ಬಂದಿಗಳ ಮೇಲೆ ಹಾಕಲಾಗುತ್ತಿದೆ ಎನ್ನಲಾಗಿದೆ.
ಇದಲ್ಲದೆ, ಬಾರ್ಗಳು, ರೆಸ್ಟಾರೆಂಟ್ಗಳು, ಸ್ಪಾ-ಮಸಾಜ್ ಪಾರ್ಲರ್ಗಳು, ಪಾನಶಾಪ್ಗಳು, ಪಾಸ್ಪೋರ್ಟ್ ಪರಿಶೀಲನೆ, ಅನಧಿಕೃತ ಮರಳು, ಗ್ಯಾಸು ಹಾಗೂ ರೇಷನ್ ಅಕ್ಕಿ ಸಾಗಾಣಿಕೆ ಸೇರಿದಂತೆ ಹಲವಾರು ಮೂಲಗಳಿಂದ ತಿಂಗಳಿಗೆ ಸುಮಾರು ₹3 ಲಕ್ಷ ವಸೂಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೊಸ ವರ್ಷ ಹಾಗೂ ದಸರಾ ಹಬ್ಬದ ಸಂದರ್ಭಗಳಲ್ಲಿ ₹10 ರಿಂದ ₹15 ಲಕ್ಷದವರೆಗೆ ಹಣ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.
ಸರ್ಕಾರಿ ವಾಹನದ ದುರುಪಯೋಗ, ಗೈರು ಹಾಜರಾತಿ ಪ್ರಕರಣಗಳಲ್ಲಿ ಅಸಂಗತ ವರದಿ, ಹಾಗೂ ಹಣ ತಂದುಕೊಡದ ಸಿಬ್ಬಂದಿಗೆ ಅನಗತ್ಯ ವರದಿ ಹಾಕುವುದು ಸೇರಿದಂತೆ ಹಲವು ರೀತಿಯ ಮಾನಸಿಕ ಒತ್ತಡ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ವಾರದ ರಜೆ ನೀಡದೆ ಸಿಬ್ಬಂದಿಯನ್ನು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಬಲವಂತಪಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಮನೋವ್ಯಥೆಗೊಂಡಿರುವ ಸಿಬ್ಬಂದಿಗಳು “ನಮ್ಮಿಂದ ಇನ್ನು ಮುಂದೆ ಈ ಒತ್ತಡವನ್ನು ಸಹಿಸುವುದು ಅಸಾಧ್ಯವಾಗಿದ್ದು, ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಆದ್ದರಿಂದ ದಯಾಮರಣ ನೀಡುವಂತೆ ವಿನಂತಿಸುತ್ತೇವೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಮತ್ತು ಸರ್ಕಾರದಿಂದ ಸೂಕ್ತ ತನಿಖೆ ನಡೆಯಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.
