ಬೇಲೂರು, ಏಪ್ರಿಲ್ 16 : ಪಟ್ಟಣದ ಜೆಪಿ ನಗರದಲ್ಲಿರುವ ಪ್ರಜ್ವಲ್ ಪೆಟ್ರೋಲ್ ಬಂಕ್ ಸಂಬಂಧಿತ ಜಮೀನು ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ದೀರ್ಘಕಾಲದ ಕಾನೂನು ಹೋರಾಟದ ಬಳಿಕ ಮೂಲ ಮಾಲೀಕರಿಗೆ ಜಾಗವನ್ನು ನ್ಯಾಯಾಲಯದ ಆದೇಶದಂತೆ ಸ್ವಾಧೀನಕ್ಕೆ ಒಪ್ಪಿಸಲಾಗಿದೆ.
ಬೇಲೂರಿನ ಮೊದಲ ಅಧಿಕ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ತೀರ್ಪಿನಂತೆ, ಡಿಕ್ರಿ ದಿನಾಂಕ 31-10-2025ರ ದಾಖಲೆಯ ಅನ್ವಯ ಗುರುವಾರ ನ್ಯಾಯಾಲಯದ ಹಮೀಲುದಾರರು, ಪೊಲೀಸರು ಹಾಗೂ ಮಾಲೀಕರ ಪರ ವಕೀಲರ ಸಮ್ಮುಖದಲ್ಲಿ ಜಾಗವನ್ನು ವಶಪಡಿಸಿಕೊಂಡರು.
ಈ ಕುರಿತು ಮಾತನಾಡಿದ ವಕೀಲ ಎಂ.ಡಿ. ಗಿರಿಜಾಂಭ, ನಮ್ಮ ಪರ ಕಕ್ಷಿದಾರರಾದ ದಿವಂಗತ ಡಾ. ಸುಂದರ್ ಅವರಿಗೆ ಸೇರಿದ ಸುಮಾರು 12,000 ಚದರ ಅಡಿ ವಿಸ್ತೀರ್ಣದ ಜಾಗವನ್ನು 1994-95ರಲ್ಲಿ Indian Oil Corporationಗೆ 25 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು ಎಂದು ವಿವರಿಸಿದರು.
2019ರಲ್ಲಿ ಲೀಸ್ ಅವಧಿ ಮುಗಿದ ಬಳಿಕ ಕಾನೂನುಬದ್ಧವಾಗಿ ಲೀಸ್ ರದ್ದುಪಡಿಸಿ ನೋಟಿಸ್ ನೀಡಿದರೂ, ಸಂಬಂಧಿತ ಸಂಸ್ಥೆ ಮತ್ತು ಪೆಟ್ರೋಲ್ ಬಂಕ್ ನಿರ್ವಹಿಸುತ್ತಿದ್ದವರು ಜಾಗವನ್ನು ಖಾಲಿ ಮಾಡದೆ ಅಕ್ರಮ ಸ್ವಾಧೀನ ಮುಂದುವರಿಸಿದ್ದರು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ 2019ರಲ್ಲಿ ಮೂಲ ದಾವಾ ನಂ. 304/2019 ದಾಖಲಿಸಲಾಗಿದ್ದು, ಸುದೀರ್ಘ ಆರು ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯವು ಮಾಲೀಕರ ಪರವಾಗಿ ತೀರ್ಪು ನೀಡಿದೆ. ಕೋರ್ಟ್ ಆದೇಶದಂತೆ ಎರಡು ತಿಂಗಳೊಳಗೆ ಜಾಗ ಖಾಲಿ ಮಾಡಬೇಕು, ಜೊತೆಗೆ ಬಾಕಿ ಬಾಡಿಗೆ ಹಾಗೂ ಅಕ್ರಮ ಸ್ವಾಧೀನಕ್ಕೆ ಪ್ರತಿ ತಿಂಗಳು ₹10,000 ಪರಿಹಾರ ಪಾವತಿಸಬೇಕು ಎಂದು ಸೂಚಿಸಲಾಗಿತ್ತು.
ಆದರೂ ನಿಗದಿತ ಅವಧಿಯಲ್ಲಿ ಜಾಗ ಹಸ್ತಾಂತರವಾಗದ ಹಿನ್ನೆಲೆ, ಮಾಲೀಕರು ಮರು ಕ್ರಮ ಕೈಗೊಂಡು, ಇಂದು ನ್ಯಾಯಾಲಯದ ಮೂಲಕ ಸಂಪೂರ್ಣ ಸ್ವಾಧೀನವನ್ನು ಪಡೆದುಕೊಂಡಿದ್ದಾರೆ.
ದಿವಂಗತ ಡಾ. ಸುಂದರ್ ಅವರ ಪುತ್ರಿಯರಾದ ಶ್ರುತಿ ಮತ್ತು ಸ್ವಾತಿ ಅವರಿಗೆ ಜಾಗದ ಹಕ್ಕು ಇರುವುದರಿಂದ, ಕೋರ್ಟ್ ಆದೇಶದಂತೆ ಪೆಟ್ರೋಲ್ ಬಂಕ್ಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳನ್ನು ತೆರವುಗೊಳಿಸಿ ಜಾಗವನ್ನು ಖಾಲಿ ಮಾಡಲಾಗಿದೆ.
ಆರು ವರ್ಷಗಳ ಕಾನೂನು ಹೋರಾಟದ ಬಳಿಕ ನ್ಯಾಯ ದೊರೆತಿರುವುದಕ್ಕೆ ಡಾ. ಸುಂದರ್ ಕುಟುಂಬ ವರ್ಗವು ನ್ಯಾಯಾಲಯ ಹಾಗೂ ವಕೀಲರಿಗೆ ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸುರೇಶ್, ಸುಧನ್ವ, ಗೋಕಲ್, ಮೋನಿಷ್, ಸ್ವಾತಿ, ಶ್ರುತಿ, ಷಡಾಕ್ಷರಿ ಸೇರಿದಂತೆ ನ್ಯಾಯಾಲಯದ ಹಮೀಲುದಾರರು ಹಾಗೂ ಇತರರು ಹಾಜರಿದ್ದರು.
