ಕೆ.ಆರ್.ಪೇಟೆ,(ಏ.20) : ಜಗಜ್ಯೋತಿ ಬಸವೇಶ್ವರರು ಜಾತಿ ರಹಿತ ಸಮಾಜವನ್ನು ನಿರ್ಮಾಣ ಮಾಡಿ ಮನುಕುಲಕ್ಕೆ ಹೊಸ ಸಂದೇಶವನ್ನು ನೀಡುವ ಕ್ರಾಂತಿಕಾರಕ ನಿರ್ಧಾರ ಮಾಡಿದವರು. ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎರಡೇ ಜಾತಿ ಇರಬೇಕು ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದವರು. ಇಂತಹ ಮಹಾನ್ ದರ್ಶನಿಕರನ್ನು ಒಂದು ಜಾತಿಯ ಸಂಕೋಲೆಯಲ್ಲಿ ಬಂಧಿಸುವುದು ವಿಶ್ವನಾಯಕ ಬಸವಣ್ಣನವರಿಗೆ ಮಾಡಿದ ಅಪಮಾನವಾಗುತ್ತದೆ. ನಾಗರೀಕ ಸಮಾಜದ ಎಲ್ಲರೂ ಸೇರಿ ಬಸವೇಶ್ವರರ ಜಯಂತಿಯನ್ನು ಹಬ್ಬದ ಮಾದರಿಯಲ್ಲಿ ಆಚರಿಸಬೇಕು. ಬಸವಣ್ಣ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ 12ನೇ ಶತಮಾನದ ಮಹಾನ್ ಮಾನವತಾವಾದಿ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್ ಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಬಸವಣ್ಣ ಕೇವಲ ಒಬ್ಬ ವ್ಯಕ್ತಿ ಅಲ್ಲ, ಒಂದು ಚಳವಳಿ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಅವರು ಕನ್ನಡಕ್ಕೆ ವಚನಗಳ ಕೊಡುಗೆ ನೀಡಿದ ಸಾಹಿತಿ, ತಮ್ಮ ವಚನಗಳ ಮೂಲಕ ಸಮಾನತೆಗಾಗಿ ಹೋರಾಡಿದ ಕ್ರಾಂತಿಕಾರಿ, ಮಾನವೀಯತೆಯನ್ನು ಎತ್ತಿಹಿಡಿದ ದಾರ್ಶನಿಕ. ಬಸವ ಜಯಂತಿ ಎಂದರೆ ಕೇವಲ ಹಾರ ಹಾಕಿ ಹಾಡು ಹಾಡುವುದಲ್ಲ. ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಬಸವ ಜಯಂತಿ ಕಾರ್ಯಕ್ರಮವಾಗಿದೆ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಹಾನ್ ಚೇತನ ಬಸವಣ್ಣನವರ ಜನ್ಮದಿನವನ್ನು ‘ಬಸವ ಜಯಂತಿಯನ್ನು ಹೆಚ್ಚು ಹೆಚ್ಚು ಜನ ಸೇರಿ ಅರ್ಥಪೂರ್ಣವಾಗಿ ಆಚರಿಸಬೇಕು. ಈ ಮೂಲಕ ಬಸವಣ್ಣ ಅವರಿಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ 12ನೇ ಶತಮಾನದ ಶರಣ ಚಳವಳಿಯ ಹರಿಕಾರರಾದ ಬಸವೇಶ್ವರರು ವೈದಿಕ ಕಾಲದ ಮೌಢ್ಯ, ಜಾತಿ ಪದ್ಧತಿ ಮತ್ತು ಅಸಮಾನತೆಯ ವಿರುದ್ಧ ದಿಟ್ಟವಾಗಿ ನಿಂತ ಸಮಾಜ ಸುಧಾರಕರು. ಅವರ ಜನ್ಮದಿನವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ತೃತೀಯೆಯಂದು, ಅಕ್ಷಯ ತೃತೀಯೆಯ ದಿನವೇ ಆಚರಿಸಲಾಗುತ್ತದೆ ಇಂತಹ ಮಹನೀಯರ ಜಯಂತಿಗೆ ಕಡಿಮೆ ಬಂದಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದವರಿಗೆ ತಾಲ್ಲೂಕು ಆಡಳಿತವು ಆಹ್ವಾನ ನೀಡಿ ಹೆಚ್ಚಿನ ಜನರ ನಡುವೆ ಸಡಗರ ಸಂಭ್ರಮದಿಂದ ಆಚರಿಸಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಉಪನ್ಯಾಸ ನೀಡಿದ ಶಿಕ್ಷಣ ಸಂಯೋಜಕ ವೀರಭದ್ರಯ್ಯ ಕ್ರಿ.ಶ. 1134ರಲ್ಲಿ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳ ಮಗನಾಗಿ ಬಸವಣ್ಣನವರು ಜನಿಸಿದರು. ಬಾಲ್ಯದಿಂದಲೇ ಮೌಡ್ಯವನ್ನು ಪ್ರಶ್ನಿಸುವ ಮನೋಭಾವ ಹೊಂದಿದ್ದ ಅವರು ಉಪನಯನವನ್ನು ತಿರಸ್ಕರಿಸಿ ‘ಕೂಡಲಸಂಗಮ’ಕ್ಕೆ ತೆರಳಿದರು. ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಕಲಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ, ನಂತರ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅಧಿಕಾರದಲ್ಲಿದ್ದರೂ ಸರಳ ಜೀವನ ನಡೆಸಿ, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬದುಕಿ ತೋರಿಸಿದರು.
ಬಸವಣ್ಣನವರು ಕಲ್ಯಾಣದಲ್ಲಿ ಸ್ಥಾಪಿಸಿದ ‘ಅನುಭವ ಮಂಟಪ’ ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಸಂಸತ್ತು ಎನಿಸಿದೆ. ಅಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಮಹಿಳೆಯರು, ಶೂದ್ರರು, ಎಲ್ಲ ವರ್ಗದ ಶರಣರು ಸೇರಿ ಧರ್ಮ, ಸಮಾಜ, ಆಧ್ಯಾತ್ಮದ ಬಗ್ಗೆ ಮುಕ್ತ ಚರ್ಚೆ ನಡೆಸುತ್ತಿದ್ದರು. ಬಸವಣ್ಣನವರು ಸರಳ ಕನ್ನಡದಲ್ಲಿ ರಚಿಸಿದ 300ಕ್ಕೂ ಹೆಚ್ಚು ವಚನಗಳು ಇಂದಿಗೂ ಜನಸಾಮಾನ್ಯರ ಬದುಕಿಗೆ ದಾರಿದೀಪ. ‘ಇವನಾರವ ಇವನಾರವ ಎನ್ನದಿರಯ್ಯ’, ‘ಕಳಬೇಡ ಕೊಲಬೇಡ’ ವಚನಗಳು ಮಾನವೀಯತೆಯ ಸಾರ.ಬಸವಣ್ಣನವರ ಸಾಮಾಜಿಕ ಕ್ರಾಂತಿಗಳ ಪೈಕಿ ಅಂತರಜಾತಿ ವಿವಾಹವನ್ನು ಪ್ರೋತ್ಸಾಹಿಸಿದರು. ಹರಳಯ್ಯ-ಮಧುವರಸರ ಮಕ್ಕಳ ಮದುವೆ ಇದಕ್ಕೆ ಸಾಕ್ಷಿಯಾಗಿದೆ.
ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆಯಂತಹ ಶರಣೆಯರು ಅನುಭವ ಮಂಟಪದಲ್ಲಿ ಸಮಾನ ಸ್ಥಾನ ಪಡೆದರು. ಇದು ಬಸವಣ್ಣನವರ ಲಿಂಗ ಸಮಾನತೆ ನೀತಿಯನ್ನು ಸಾರುತ್ತದೆ. ದುಡಿಮೆಯೇ ದೇವರ ಪೂಜೆ. ಭಿಕ್ಷೆ ಬೇಡದೆ, ತನ್ನ ದುಡಿಮೆಯಿಂದ ಬದುಕಿ ಉಳಿದದ್ದನ್ನು ‘ದಾಸೋಹ’ ಮಾಡಬೇಕೆಂಬ ತತ್ವ ನೀಡಿದರು.
ಮೂರ್ತಿ ಪೂಜೆ, ಯಜ್ಞ-ಯಾಗಗಳನ್ನು ವಿರೋಧಿಸಿ ‘ಇಷ್ಟಲಿಂಗ’ ಪೂಜೆ ತಂದರು. ದೇವರು ಗುಡಿಯಲ್ಲಿಲ್ಲ, ಮನದಲ್ಲಿದ್ದಾನೆ ಎಂದು ತಿಳಿಸಿದ್ದರು. 2015ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯಾಗಿದ್ದು ಅವರ ವಿಶ್ವಮಾನ್ಯತೆಗೆ ಸಾಕ್ಷಿಯಾಗಿದೆ.
ಇಂದಿನ ಜಾತೀಯತೆ, ಭ್ರಷ್ಟಾಚಾರ, ಅಸಮಾನತೆ ತುಂಬಿದ ಸಮಾಜಕ್ಕೆ ಬಸವಣ್ಣನವರ ತತ್ವಗಳು ಔಷಧಿಯಂತೆ. ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎಂಬ ವಚನ ಆಡಂಬರದ ಭಕ್ತಿಯನ್ನು ಪ್ರಶ್ನಿಸುತ್ತದೆ. ‘ನುಡಿದಂತೆ ನಡೆ’ ಎಂಬ ಅವರ ಆದರ್ಶ ರಾಜಕಾರಣದಿಂದ ಹಿಡಿದು ವೈಯಕ್ತಿಕ ಬದುಕಿನವರೆಗೂ ಅನ್ವಯವಾಗುತ್ತವೆ ‘ವಿಶ್ವಕ್ಕೆ ಬಸವ ಧರ್ಮವೇ ಶರಣು’ ಎಂಬಂತೆ ಅವರ ವಿಚಾರಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿವೆ ಎಂದು ವೀರಭದ್ರಯ್ಯ ತಿಳಿಸಿದರು.
ಗವೀಮಠದ ಶ್ರೀಗಳಾದ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ತಾಲ್ಲೂಕು ವೀರಶೈವ-ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಸಮಾಜ ಸೇವಕರು ಹಾಗೂ ಆರ್.ಟಿ.ಓ.ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಟಿ.ಓ.ಮಲ್ಲಿಕಾರ್ಜುನ್,
ತಾಲ್ಲೂಕು ಆಡಳಿತ ಮುಖ್ಯಸ್ಥರಾದ ತಹಸೀಲ್ದಾರ್ ಲೋಕೇಶ್, ಬಿಇಓ ತಿಮ್ಮೇಗೌಡ, ತಾ.ಪಂ.ಇಓ ಸುಷ್ಮ, ಪುರಸಭೆ ಮುಖ್ಯಾಧಿಕಾರಿ ಅಶೋಕ್, ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ, ವಲಯ ಅರಣ್ಯಾಧಿಕಾರಿ ಡಾ.ಅನಿತಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾಲ್ಲೂಕು ವೀರಶೈವ-ಲಿಂಗಾಯಿತ ಸಮಾಜದ ಮುಖಂಡರಾದ ತೋಟಪ್ಪಶೆಟ್ಟಿ, ಬ್ಯಾಂಕ್ ಪರಮೇಶ್, ಎಲ್.ಐ.ಸಿ.ಶಿವಪ್ಪ, ನಾಡಬೋಗನಹಳ್ಳಿ ಶಿವಪ್ಪ, ಕೆ.ಎಸ್.ರಾಜೇಶ್, ಮೆಡಿಕಲ್ ಶಿವಪ್ಪ, , ಮಂಚಿಬೀಡು ಬಸವಲಿಂಗಪ್ಪ, ಅಪ್ಪಾಜಿ, ಚೋಕನಹಳ್ಳಿ ಪ್ರಕಾಶ್, ಗೋವಿಂದನಹಳ್ಳಿ ಪ್ರಕಾಶ್, ಎಂ.ಎಸ್.ರಾಜಶೇಖರ್, ವಡ್ಡರಹಳ್ಳಿ ಕುಮಾರ್, ಡಿ.ಸಿ.ಕುಮಾರ್, ಜಗದಾಂಭ, ಆಶಾರಾಣಿ, ಪೂರ್ಣಿಮಾ, ಪವಿತ್ರ, ಮಡುವಿನಕೋಡಿ ಗಂಗಾಧರ್, ಎಂ.ಎಸ್.ಮಹಾದೇವಪ್ಪ, ಪುರ ಮಂಜುನಾಥ್, ವಸಂತಪ್ಪ, ಎಂ.ಎಸ್.ಶಿವಮೂರ್ತಿ, ಡಿ.ಎಸ್.ಮಂಜುನಾಥ್, ಎಂ.ಜಿ.ರವಿಕುಮಾರ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಣ ಸಂಯೋಜಕ ಎಂ.ಎಸ್.ಸುರೇಶ್ ಸ್ವಾಗತಿಸಿದರು. ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ಮಹಾದೇವಪ್ಪ ವಂದಿಸಿದರು. ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಗಾಯಕರಾದ ಶ್ರೀಕಾಂತ್ ಚಿಮ್ಮಲ್ ಮತ್ತು ರವಿ ಶಿವಕುಮಾರ್ ತಂಡದವರು ಕಾರ್ಯಕ್ರಮಕ್ಕೆ ಬಸವಗೀತೆ ಹಾಗೂ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಪ್ರವಾಸಿ ಮಂದಿರದಿಂದ ವೇದಿಕೆಯ ವರೆಗೆ ಬೆಳ್ಳಿ ರಥದಲ್ಲಿ ಜಾನಪದ ಕಲಾಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು.
ವರದಿ : ಶ್ರೀನಿವಾಸ್ ಆರ್
